ADVERTISEMENT

ಬೆಲೆ ಕುಸಿತ: ಚರ್ಚಿಸಿ ಪರಿಹಾರ

ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 7:40 IST
Last Updated 29 ಜೂನ್ 2016, 7:40 IST

ಚಿತ್ರದುರ್ಗ: ‘ಮಂದಿನ ತಿಂಗಳು ನಡೆಯುವ ವಿಧಾನಸಭಾ ಅಧಿವೇಶನದೊಳಗೆ ಬಾಳೆ, ತೆಂಗು ಮತ್ತು ಅಡಿಕೆ ಬೆಲೆ ಕುಸಿತಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಲಾಗುವುದು’ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಭರವಸೆ ನೀಡಿದರು.

ನಗರದ ಮುರುಘಾಮಠಕ್ಕೆ ಮಂಗಳವಾರ ಭೇಟಿ ನೀಡಿ ಶಿವಮೂರ್ತಿ ಮುರುಘಾಶರಣರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ಜುಲೈ 4ರಿಂದ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಅಧಿಕಾರಿಗಳು, ಕೃಷಿ ಸಚಿವರೊಂದಿಗೆ ರೈತರ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ. ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವ ಕುರಿತು ಕಾರ್ಯದರ್ಶಿಗಳಿಗೆ ಸೂಚನೆ ನೀಡುತ್ತಿದ್ದೇನೆ’ ಎಂದರು.

‘ಜಿಲ್ಲೆಯಲ್ಲಿ ದಾಳಿಂಬೆಯನ್ನು ಹೇರಳವಾಗಿ ಬೆಳೆಯುತ್ತಿದ್ದು, ದಾಳಿಂಬೆ ಸಂಶೋಧನಾ ಕೇಂದ್ರವನ್ನು ತೆರೆಯುವಂತೆ ಬೆಳೆಗಾರರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆಲೋಚನೆ ಮಾಡಲಾಗುವುದು’ ಎಂದರು.

‘ಚಿತ್ರದುರ್ಗ – ದಾವಣಗೆರೆ ಜಿಲ್ಲೆಗಳಲ್ಲಿ ಅಡಿಕೆ ಬೆಳೆ ವ್ಯಾಪಕವಾಗಿದೆ. ಈಗ ಅಡಿಕೆ ಬೆಲೆ ಕುಸಿದಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಇದಕ್ಕೆ ಅಸ್ಸಾಂನಿಂದ ಬರುತ್ತಿರುವ ಅಡಿಕೆ ಕಾರಣವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಸಚಿವರ ಜತೆ ಮಾತನಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು. ‘ಆಮದು ನೀತಿ ಬಿಗಿಯಾದರೆ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಲು ಬಿಗಿಯಾದ ಕಾನೂನು ರೂಪಿಸಬೇಕು’ ಎಂದು ಹೇಳಿದರು.

ಸಚಿವ ಸಂಪುಟ ಪುನರ್‌ರಚನೆಯಿಂದ ಕೆಲವು ನಾಯಕರನ್ನು ಕೈಬಿಡಲಾಗಿದೆ. ಹಾಗಾಗಿ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಶೀಘ್ರದಲ್ಲೇ ವರಿಷ್ಠರು ಮತ್ತು ರಾಜ್ಯ ನಾಯಕರು ಅದನ್ನು ಪರಿಹಾರ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸರ್ಕಾರದ ಆಡಳಿತ ಅವಧಿಯಲ್ಲಿ ಎಲ್ಲರಿಗೂ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಹೈಕಮಾಂಡ್ ಸಂಪುಟ ಪುನರ್‌ರಚಿಸಲು ಸೂಚಿಸಿತ್ತು. ಇದು ಒಬ್ಬರ ಅಧಿಕಾರ ಕಿತ್ತುಕೊಂಡು ಮತ್ತೊಬ್ಬರಿಗೆ ಕೊಡುವ ಪ್ರಕ್ರಿಯೆಯಲ್ಲ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ ಅವಧಿಯನ್ನು ಅವರು ಯಶಸ್ವಿಯಾಗಿ ಪೂರೈಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ತಂದೆಯವರನ್ನು ಸ್ನೇಹಿತರನ್ನಾಗಿ ನೋಡುತ್ತಿದ್ದೇನೆ. ಅವರು ನನಗಾಗಿ ತಮ್ಮ ಮಂತ್ರಿ ಪದವಿ ನೀಡಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಇಲಾಖೆಯನ್ನು ಮತ್ತಷ್ಟು ಉತ್ತಮವಾಗಿ ನಡೆಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.