ADVERTISEMENT

ಬೆಳೆ ನಷ್ಟ ಪರಿಹಾರದಲ್ಲೂ ತಾರತಮ್ಯ

ಜಿಲ್ಲಾಧಿಕಾರಿ ಕಚೇರಿ ಬಳಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 11:31 IST
Last Updated 30 ಜುಲೈ 2014, 11:31 IST

ಚಿತ್ರದುರ್ಗ: ‘ಆಲಿಕಲ್ಲು ಮಳೆಯಿಂದ ಬೆಳೆನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಪಕ್ಷಾಧಾರಿತ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿ ಧರ್ಮಪುರ ಹೋಬಳಿಯ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ರೈತರು, ‘ಆಲಿಕಲ್ಲು ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದೇವೆ. ಆದರೆ, ಸರ್ಕಾರ ಜೆಡಿಎಸ್, ಬಿಜೆಪಿ ಎಂದು ಪರಿಹಾರದಲ್ಲಿ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ವಿಪತ್ತು ಪರಿಹಾರ ನಿಧಿಯ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ.

ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ಬದಿಗಿಟ್ಟು, ಪ್ರಭಾವಿ ಮತ್ತು ಕಾಂಗ್ರೆಸ್ ಬೆಂಬಲಿತ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ರೈತರು ಅಧಿಕಾರಿಗಳಿಗೆ ದಾಖಲೆ ನೀಡಿ ವಿವರಿಸಿದರು. ‘ಆರು ಎಕರೆ ದಾಳಿಂಬೆ ಕಳೆದುಕೊಂಡ ಹರಿಯೆಬ್ಬೆ ರೈತ ಕೆ.ಜಿ.ಗುಣ್ಣಯ್ಯ ಅವರಿಗೆ ಗಿಡಕ್ಕೆ ₨  1 ಪರಿಹಾರ ನೀಡಿದ್ದಾರೆ.

ಒಂದು ಎಕರೆ ವೀಳ್ಯದೆಲೆ ಬಳ್ಳಿಗೆ ₨ ೨,೪೦೦ ಪರಿಹಾರ. ಆದರೆ ಒಂದೂವರೆ ಎಕರೆ ಸೌತೆಕಾಯಿಗೆ ₨  ೫೫ ಸಾವಿರ ಪರಿಹಾರ ನೀಡಲಾಗಿದೆ’ ಎಂದು ರೈತರು ದಾಖಲೆ ಪ್ರದರ್ಶಿಸಿದರು. ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಯಮಾವಳಿಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ಬೆಳೆಗೆ ₨ ೪,೫೦೦ ಬದಲಿಗೆ ₨ ೧೫,೦೦೦, ನೀರಾವರಿ ಬೆಳೆಗೆ ₨ ೯೦೦೦ ಬದಲಿಗೆ ₨ ೨೫,೦೦೦ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ₨ ೧೨,೦೦೦ ಬದಲಿಗೆ ₨ ೪೦,೦೦೦, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರಿಗೆ ಕೇವಲ ಎರಡು ಹೆಕ್ಟೇರ್‌ಗೆ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು.

ಅದೇ ರೀತಿ ಜಿಲ್ಲಾಧಿಕಾರಿ ಅವರು, ಸಣ್ಣ ರೈತರಿಗೆ ಮಾತ್ರ ಮೊದಲ ಕಂತು ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ೨೨ ಎಕರೆ ಜಮೀನು ಹೊಂದಿರುವ ವ್ಯಕ್ತಿಯೊಬ್ಬರಿಗೆ, ಎರಡು ಹೆಕ್ಟೇರ್‌ಗೆ ₨ ೮೦ ಸಾವಿರ ನೀಡಲಾಗಿದೆ. ಇದು ಹೇಗೆ ಸಾಧ್ಯ’ ಎಂದು ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು.

ಅನ್ಯಾಯಕ್ಕೊಳಗಾದ ರೈತರಾದ ಯೋಗೇಂದ್ರಪ್ಪ, ವಿ.ಜಯರಾಮಪ್ಪ, ಕೆ.ಜೈರಾಜ್, ಕೃಷ್ಣಮೂರ್ತಿ, ಕೆಂಪರಾಜ್ ಪಟೇಲ್, ಅಶ್ವಥ್ ನಾರಾಯಣ, ಮಲ್ಲಿಕಾರ್ಜುನ, ಕಂದಿಕೆರೆ ತಿಪ್ಪೇಸ್ವಾಮಿ, ಡಿ.ರಂಗಸ್ವಾಮಿ, ಗುಣ್ಣಯ್ಯ, ಗಿರಿ ಮತ್ತಿತರ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರಿಂದ ಮನವಿ ಸ್ಪೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ  ಕಚೇರಿಯ ಅಧಿಕಾರಿ ದತ್ತಾತ್ರೇಯ ಅವರು ‘ಅರ್ಜಿ ಕೊಟ್ಟು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ರೈತರು ಮತ್ತೊಮ್ಮೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ’ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.