ADVERTISEMENT

ಭೂಸ್ವಾಧೀನ ಕಾಯ್ದೆ; ರೈತರಿಗೆ ಅಪಾಯ

ದುರ್ಗೋತ್ಸವ ವಿಚಾರಗೋಷ್ಠಿಯಲ್ಲಿ ಡಾ.ಬಂಜಗೆರೆ ಜಯಪ್ರಕಾಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 10:04 IST
Last Updated 26 ಜನವರಿ 2015, 10:04 IST

ಚಿತ್ರದುರ್ಗ:  ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಹೊರಡಿಸಿರುವ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಕಾಯ್ದೆಯು ದೇಶದ ರೈತರ ಭವಿಷ್ಯವನ್ನೇ ಬುಡಮೇಲು ಮಾಡುವಷ್ಟು ಅಪಾಯಕಾರಿಯಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆಕಂತ ವ್ಯಕ್ತಪಡಿಸಿದರು.

ನಗರದ ಕೋಟೆ ಆವರಣದಲ್ಲಿ ದುರ್ಗೋತ್ಸವ 2015 ರ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಪ್ರಚಲಿತ ವಿದ್ಯಮಾನಗಳ ವಿಚಾರ ಗೋಷ್ಠಿ –1 ಉದ್ಘಾಟಿಸಿ ‘ಭೂ ಸ್ವಾಧೀನ ಕಾಯ್ದೆಯ ಸುಗ್ರೀವಾಜ್ಞೆ’ ವಿಷಯ ಕುರಿತು ಮಾತನಾಡಿದರು.

ಪ್ರಧಾನಿ ಮೋದಿ ಅವರು ಸುಗ್ರೀವಾಜ್ಞೆ ಮೂಲಕ ಫಲವತ್ತಾದ ರೈತರ ಭೂಮಿ ಕಿತ್ತುಕೊಳ್ಳುವ ಉದ್ದೇಶ ಹೊಂದಿದ್ದಾರೆ. ಕಾಯ್ದೆ ಮೂಲಕ ರೈತರಿಂದ ಕೃಷಿ ಭೂಮಿ ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ನೀಡಲು ಹೊರಟಿರುವ ಎನ್‌ಡಿಎ ಸರ್ಕಾರದ ಕಾಯ್ದೆ ಬಗ್ಗೆ ಪೂರ್ವಪರ ಚಿಂತನೆಯು ಸಹ ನಡೆದಿಲ್ಲ ಎಂದು ಆರೋಪಿಸಿದರು.

ರೈತರಿಗೆ ಹೆಚ್ಚಿನ ಪರಿಹಾರ ದೊರೆಯುತ್ತದೆ ಎಂಬುದು ನಿಜವಾದರೂ ಪರಿಹಾರದ ಹಣ ಪಡೆಯಲು ಸಾಕಷ್ಟು ಲಂಚ ನೀಡಬೇಕು. ಪ್ರಧಾನಿ ರೈತರ ಭವಿಷ್ಯದ ಬದುಕು ಕಸಿದುಕೊಳ್ಳುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗದ ರೈತರ ಜಮೀನನ್ನು ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಹಂಚಿಕೆ ಮಾಡಲು ಈ ಸರ್ಕಾರ ಹುನ್ನಾರ ಮಾಡಿದೆ ಎಂದು ದೂರಿದರು.
ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುವ ಕುರಿತು ಸುಪ್ರೀಂ ಕೋರ್ಟ್‌ ತೀವ್ರತರ ಎಚ್ಚರಿಕೆ ನೀಡಿ ರೈತರ ಭೂಮಿ ವಶಪಡಿಸಿಕೊಂಡ ನಂತರ ಅಭಿವೃದ್ಧಿಯಾದ ಪ್ರದೇಶದಲ್ಲಿ ಇಂತಿಷ್ಟು ನೀಡಬೇಕು ಎಂದು  ಹೇಳಿದರು.

ಜತೆಗೆ ಕಾಯಂ ಉದ್ಯೋಗ ನೀಡಬೇಕೆಂಬ ನಿಯಮವಿದೆ. ಆದರೆ, ಅದ್ಯಾವುದನ್ನು ಸುಗ್ರೀವಾಜ್ಞೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಲೋಕಸಭೆಯಲ್ಲಿ ಚರ್ಚಿಸದೆ, ಈ ಕಾಯ್ದೆ ಜಾರಿಗೆ ತಂದಿದ್ದಾರೆ. ರೈತರನ್ನು ಅಗ್ಗದ ಕೂಲಿಗಳನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ದುರ್ಗೋತ್ಸವ, ರಾಜ್ಯೋತ್ಸವ, ನಿತ್ಯೋತ್ಸವ ಸಮರ್ಪಕವಾಗಿ ಆಗಬೇಕಾದರೆ ಎಮ್ಮೆ, ಆಕಳು ಗಂಜಲದ ಘಮಗೊತ್ತಿರುವ ಮುಖ್ಯಮಂತ್ರಿಗಳು ಬಯಲುಸೀಮೆ ಜಿಲ್ಲೆಗೆಳಿಗೆ ನೀರು ಹರಿಸುವ ಕೆಲಸ ಮಾಡಬೇಕು. ‘ಎ’ ಮತ್ತು ‘ಬಿ’ ಸ್ಕೀಂನಲ್ಲಿ ಕನಿಷ್ಠ ೮೦ ಟಿಎಂಸಿ ನೀರನ್ನು ನೀಡಬೇಕು. ಇಂಥ ಬೆಳೆಗಳನ್ನೇ ಬೆಳೆಯುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸುಧಾರಣಾ ಕ್ರಮ ಜಾರಿಗೆ ತಂದಿದ್ದೆಯಾದರೆ ಹೆಚ್ಚುವರಿಯಾಗಿ ಇದೇ ನೀರಿನಲ್ಲಿ ೧೦ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲು ಸಾಧ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.