ADVERTISEMENT

ಮಕ್ಕಳಿಗೆ ಬರಿ ಬೇಳೆ ಸಾರು, ಅನ್ನವೇ ಗತಿ!

ಸಾಂತೇನಹಳ್ಳಿ ಸಂದೇಶ ಗೌಡ
Published 15 ನವೆಂಬರ್ 2017, 7:12 IST
Last Updated 15 ನವೆಂಬರ್ 2017, 7:12 IST
ಸಾಂತೇನಹಳ್ಳಿ ಸಂದೇಶ್ ಗೌಡ
ಸಾಂತೇನಹಳ್ಳಿ ಸಂದೇಶ್ ಗೌಡ   

ಹೊಳಲ್ಕೆರೆ: ತರಕಾರಿ ಬೆಲೆ ಗಗನಕ್ಕೇರಿದೆ. ಶಿಕ್ಷಕರಿಗೆ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆಯದ್ದೇ ದೊಡ್ಡ ಚಿಂತೆಯಾಗಿದೆ. ಸರ್ಕಾರವು ಮಧ್ಯಾಹ್ನದ ಬಿಸಿಯೂಟಕ್ಕೆ 1ರಿಂದ 5ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ ₹ 1.35 ಹಾಗೂ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ₹ 2.01 ಅನುದಾನ ನೀಡುತ್ತಿದೆ.

ಇದರಲ್ಲಿ ತರಕಾರಿ, ಸಾಂಬಾರ ಪದಾರ್ಥ, ಹುಣಸೆಹಣ್ಣು, ಕಾರದ ಪುಡಿ ಖರೀದಿಸಬೇಕು. 50 ವಿದ್ಯಾರ್ಥಿಗಳಿರುವ ಕಿರಿಯ ಪ್ರಾಥಮಿಕ ಶಾಲೆಗೆ ದಿನಕ್ಕೆ ₹ 67.50 ಸರ್ಕಾರದಿಂದ ಬರುತ್ತದೆ. ಈ ಹಣದಲ್ಲಿ ಒಂದು ಕೆಜಿ ತರಕಾರಿ ಕೂಡ ಬರುವುದಿಲ್ಲ! ಸರ್ಕಾರ ಹಳೆಯ ದರದಲ್ಲಿಯೇ ಅನುದಾನ ನೀಡುತ್ತಿದೆ. ಬಿಸಿಯೂಟಕ್ಕಾಗಿ ಮುಖ್ಯಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡುವ ಅನಿವಾರ್ಯತೆ ಇದೆ.

‘ಈಗ ತರಕಾರಿ ಬೆಲೆ ಕೇಳುವಂತಿಲ್ಲ. ಟೊಮೆಟೊ ₹ 60ರಿಂದ 70 ಆಗಿದೆ. ಕೋಸು, ಮೂಲಂಗಿ, ಆಲುಗಡ್ಡೆ, ಬದನೆಕಾಯಿ, ಬೀನ್ಸ್‌, ಕ್ಯಾರೆಟ್‌, ಹಸಿಮೆಣಸಿನಕಾಯಿ, ಈರುಳ್ಳಿ ದರ ₹ 60ಕ್ಕಿಂತ ಹೆಚ್ಚಿದೆ. ಪಾಲಕ್, ಮೆಂತ್ಯೆ, ಸಬ್ಬಸಿಗೆ, ಕೊತ್ತಂಬರಿ, ದಂಟಿನ ಸೊಪ್ಪು ಒಂದು ಕಟ್ಟಿಗೆ ₹ 10 ಆಗಿದೆ. 3 ಕೆ.ಜಿ ಟೊಮೆಟೊ, ಒಂದು ಕೆ.ಜಿ ಹಸಿಮೆಣಸಿನ ಕಾಯಿ, ಅರ್ಧ ಕೆ.ಜಿ ಎರಡು ಮೂರು ಬಗೆಯ ತರಕಾರಿ ಖರೀದಿಸಿದರೆ ಕನಿಷ್ಠ ₹ 300ಕ್ಕಿಂತ ಹೆಚ್ಚಾಗುತ್ತದೆ. ಸರ್ಕಾರ ಕೊಡುವ ಹಣದಲ್ಲಿ ಒಂದು ಕೆ.ಜಿ ಟೊಮೆಟೊ ಸಹ ಬರುವುದಿಲ್ಲ’ ಎನ್ನುತ್ತಾರೆ ಶಿಕ್ಷಕರು.

ADVERTISEMENT

‘ಕೊತ್ತಂಬರಿ ಕಾಳು, ಚಕ್ಕೆ, ಲವಂಗ, ಏಲಕ್ಕಿ ಬೆಲೆಯೂ ಹೆಚ್ಚಾಗಿದೆ. ಎರಡು ಮೂರು ತಿಂಗಳಿಗೆ ಆಗುವಷ್ಟು ಸಾಂಬಾರ ಪುಡಿಯನ್ನು ಮಾಡಿಟ್ಟುಕೊಳ್ಳುತ್ತೇವೆ. ಒಮ್ಮೆ ಸಾಂಬಾರ ಪುಡಿ, ಖಾರದ ಪುಡಿ ಮಾಡಿಸಲು ಸಾವಿರಕ್ಕೂ ಹೆಚ್ಚು ರೂಪಾಯಿ ಖರ್ಚಾಗುತ್ತದೆ’ ಎಂಬುದು ಶಿಕ್ಷಕರ ಅಳಲು.

‘ತರಕಾರಿ, ಸೊಪ್ಪು ಇಲ್ಲದೆ ಸಾಂಬಾರು ತಯಾರಿಸಲು ಆಗುವುದಿಲ್ಲ. ಕನಿಷ್ಠ ಟೊಮೆಟೊ, ಸೊಪ್ಪು, ಹಸಿಮೆಣಸಿನಕಾಯಿ, ಒಂದೆರಡು ಬಗೆಯ ತರಕಾರಿ ಬೇಕೇ ಬೇಕು. ಟೊಮೆಟೊ ಬದಲಿಗೆ ಹುಣಸೆಹಣ್ಣು ಬಳಸಿದರೆ ಮಕ್ಕಳು ಊಟ ಮಾಡುವುದಿಲ್ಲ. ಕಡಿಮೆ ಹಣ ಕೊಟ್ಟು, ಪೌಷ್ಟಿಕಾಂಶವಿರುವ ಊಟ ಕೊಡಿ ಎಂದರೆ ಹೇಗೆ ಸಾಧ್ಯ’ ಎಂದು ಶಿಕ್ಷಕರೊಬ್ಬರು ಪ್ರಶ್ನಿಸುತ್ತಾರೆ.

ಅನುದಾನ ಹೆಚ್ಚಿಸಿ:
‘ಅನೇಕ ವರ್ಷಗಳ ಹಿಂದೆ ನಿಗದಿ ಮಾಡಿದ್ದ ದರವನ್ನೇ ಈಗಲೂ ಕೊಡುತ್ತಿರುವುದು ಅವೈಜ್ಞಾನಿಕ ಕ್ರಮ. ಮೊದಲು ಒಬ್ಬ ವಿದ್ಯಾರ್ಥಿಗೆ 60 ಪೈಸೆ ಕೊಡುತ್ತಿದ್ದರು. ನಂತರ 90 ಪೈಸೆಗೆ ಹೆಚ್ಚಿಸಿದರು. ಮೂರು ವರ್ಷಗಳ ಹಿಂದೆ ₹ 1.35ಕ್ಕೆ ಹೆಚ್ಚಿಸಲಾಗಿತ್ತು. ಇದುವರೆಗೂ ಅನುದಾನದ ಪ್ರಮಾಣದಲ್ಲಿ ಹೆಚ್ಚಾಗಿಲ್ಲ.

ಎರಡು ವರ್ಷಗಳಿಂದ ತರಕಾರಿ ಬೆಲೆ ಕಡಿಮೆ ಆಗಿಲ್ಲ. ಮಕ್ಕಳಿಗೆ ಕೊಡುವ ಹಾಲಿಗೆ ಹಾಕುವ ಸಕ್ಕರೆಗೆ ಪ್ರತಿ ವಿದ್ಯಾರ್ಥಿಗೆ 32 ಪೈಸೆ ಕೊಡುತ್ತಾರೆ. ಅವರು ಕೊಡುವ ಹಣದಷ್ಟು ಸಕ್ಕರೆ ಹಾಕಿದರೆ ಮಕ್ಕಳು ಹಾಲು ಕುಡಿಯುವುದಿಲ್ಲ. ಸಕ್ಕರೆ ಬೆಲೆಯೂ ಹೆಚ್ಚಾಗಿದ್ದು, ಅದರ ಹಣವೂ ನಮ್ಮ ಮೈಮೇಲೆ ಬರುತ್ತಿದೆ. ಹೀಗಾಗಿ ಬೆಲೆ ಏರಿಕೆಗೆ ಅನುಗುಣವಾಗಿ ಸರ್ಕಾರ ಅನುದಾನವನ್ನೂ ಹೆಚ್ಚಿಸಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಒತ್ತಾಯಿಸಿದ್ದಾರೆ.

ತರಕಾರಿ ಬೆಳೆಯೋರೇ ಇಲ್ಲ:
‘ಈಚೆಗೆ ತರಕಾರಿ ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಮಳೆಗಾಲದಲ್ಲೂ ತರಕಾರಿ ಬೆಲೆ ಇಳಿಯುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಅಂತರ್ಜಲ ಕೊರತೆ, ನಿಗದಿತ ಬೆಲೆ ಇಲ್ಲದಿರುವುದು ಇದಕ್ಕೆ ಕಾರಣ. ಮೊದಲೆಲ್ಲಾ ನಮ್ಮ ಸುತ್ತಲಿನ ರೈತರೇ ತರಕಾರಿ ಬೆಳೆಯುತ್ತಿದ್ದರು. ಆದರೆ ಈಗ ತರಕಾರಿಯನ್ನೂ ಕೋಲಾರ, ಬೆಂಗಳೂರು, ಹಾಸನ ಕಡೆಯಿಂದ ತರಿಸುವ ಪರಿಸ್ಥಿತಿ ಬಂದಿದೆ. ಟೊಮೆಟೊ 20 ಕೆ.ಜಿಯ ಒಂದು ಬಾಕ್ಸ್‌ಗೆ ₹ 1,000 ದಿಂದ 1,200 ದರ ಇದೆ. ಸಾಗಾಣಿಕೆ ವೆಚ್ಚವೂ ಹೆಚ್ಚಾಗುವುದರಿಂದ ಅಧಿಕ ಬೆಲೆಗೆ ಮಾರುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಪಟ್ಟಣದ ಪಿ.ಬಿ.ಎನ್ ತರಕಾರಿ ಅಂಗಡಿಯ ಮಾಲೀಕ ನಿರಂಜನ್.

ಚಾರ್ಟ್‌

ಮಾರುಕಟ್ಟೆಯಲ್ಲಿನ ತರಕಾರಿ ದರ (ಪ್ರತಿ ಕೆ.ಜಿ.ಗೆ)

ತರಕಾರಿ→ಕನಿಷ್ಠ (₹) →ಗರಿಷ್ಠ (₹)

ಟೊಮೆಟೋ→60→70

ಈರುಳ್ಳಿ→40→50

ಬೀನ್ಸ್→60

ಮೂಲಂಗಿ→50→60

ಹಸಿಮೆಣಸು→60

ಕೋಸು→60

ಆಲುಗಡ್ಡೆ→40

* * 

ಸರ್ಕಾರ ನಿಗದಿಪಡಿಸಿದ ಅನುದಾನವನ್ನು ನಾವು ಶಾಲೆಗೆ ಕೊಡುತ್ತೇವೆ. ತರಕಾರಿ ಬೆಲೆ ಹೆಚ್ಚಾದಾಗ ಸಮಸ್ಯೆ ಎದುರಾಗಬಹುದು
ಹನುಮಂತರಾಯ,
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.