ADVERTISEMENT

ಮಹಿಳೆ ಇಚ್ಚಾಶಕ್ತಿಯಿಂದ ಹೊರ ಬಂದಾಗ ಕುಟುಂಬದ ಏಳಿಗೆ ಸಾಧ್ಯ: ಸುಮಿತ್ರಕ್ಕ ಅಭಿಮತ.

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:03 IST
Last Updated 6 ನವೆಂಬರ್ 2017, 6:03 IST

ಚಿಕ್ಕಜಾಜೂರು: ಕುಟುಂಬದಲ್ಲಿ ಸಾಮರಸ್ಯತೆ ಇದ್ದಲ್ಲಿ ಆ ಕುಟುಂಬ ಆದರ್ಶ ಕುಟುಂಬ ಆಗುವುದರಲ್ಲಿ ಸಂದೇಹವಿಲ್ಲ. ಹಾಗೇ ಮಹಿಳೆಯರು ವಿಶಾಲ ಇಚ್ಚಾಶಕ್ತಿಯನ್ನು, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಾಗ ಕುಟುಂಬದ ಏಳಿಗೆ ಸಾಧ್ಯ. ಅಲ್ಲದೆ, ಪುರುಷನ ಏಳಿಗೆಯಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾದದು ಎಂದು ಹೊಳಲ್ಕೆರೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯದ ಸಂಚಾಲಕಿ ಸುಮಿತ್ರಕ್ಕ ನುಡಿದರು.

ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ 5ನೇ ವರ್ಷದ ವಾರ್ಷಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಸ್ತ್ರೀಯಲ್ಲೂ ಶ್ರೇಷ್ಠ ಗುಣಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಇಡೀ ಕುಟುಂಬ ಸಮಾಜಕ್ಕೆ ಮಾರ್ಗದರ್ಶಿ ಆಗಬಲ್ಲದು. ಅಲ್ಲದೆ, ಒತ್ತದ ಬದುಕಿಂದ ಹೊರ ಬಂದು ಕುಟುಂಬದ ಏಳಿಗೆಗೆ ಶ್ರಮಿಸುವ ಇಚ್ಚಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಯಶವಂತ್‌, ಮಹಿಳಾ ಜ್ಞಾನ ವಿಕಾಸ ಕೇಂದ್ರಗಳ ಕಾರ್ಯ ಚಟುವಟಿಕೆ, ಸಂಘದ ಏಳಿಗೆ, ಆರ್ಥಿಕ ಉಳಿತಾಯ, ಸಾಲ ಸೌಲಭ್ಯ, ಸದುಪಯೋಗ ವಿಷಯಗಳನ್ನು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕ ಗದಿಗೆಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯೆ ಅಂಜಲಿ ಮೋಹನ್‌, ಸಮನ್ವಯಾಧಿಕಾರಿ ಗಂಗಮ್ಮ, ಸೇವಾ ಪ್ರತಿನಿಧಿ ಆಶಾ ಹಾಗೂ ನೂರಾರು ಮಹಿಳಾ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.