ADVERTISEMENT

ಮಾಹಿತಿ ನೀಡದ ಅಧಿಕಾರಿಗಳಿಗೆ ತರಾಟೆ

ಮಾಹಿತಿ ಹಕ್ಕು ಕಾಯ್ದೆ ಅರ್ಜಿದಾರರ ಸಭೆಯಲ್ಲಿ ಮುಖ್ಯ ಮಾಹಿತಿ ಆಯುಕ್ತ ಚಂದ್ರೇಗೌಡ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:21 IST
Last Updated 22 ಏಪ್ರಿಲ್ 2017, 4:21 IST
ಚಿತ್ರದುರ್ಗ: ‘ಸುಮ್ನೇ ದೇವರು ಕೂತಂಗೆ ಕೂತ್ರೆ ಹೆಂಗ್ರಿ.. ಮಾಹಿತಿ ಕೊಡ್ರಿ... ಪ್ರತಿ ತಿಂಗಳೂ ಸರ್ಕಾರಿ ಸಂಬಳ ಪಡಿತೀರಿ... ಅದಕ್ಕೆ ತಕ್ಕಂತೆ ಕೆಲಸ ಮಾಡದಿದ್ದರೆ ಹೆಂಗೆ..? ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸುವ ಅರ್ಜಿಗಳಿಗೆ ತ್ವರಿತಗತಿಯಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಿ...’
 
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಬಾಕಿ ಇರುವ ಪ್ರಕರಣಗಳ ಕುರಿತು ನಡೆದ ವಿಚಾರಣಾ ಸಭೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ.ಚಂದ್ರೇಗೌಡ ಅವರು ಕೆಲವು ಅಧಿಕಾರಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡರು.
 
‘ಅರ್ಜಿ ಸಲ್ಲಿಸಿ 30 ದಿನಗಳ ಒಳಗೆ ಕೊಡಬೇಕಾದ ಮಾಹಿತಿಗೆ ವರ್ಷಗಟ್ಟಲೇ ಸಮಯ ತೆಗೆದುಕೊಂಡರೆ ಹೇಗೆ?. ವರ್ಷವೆಲ್ಲ ನಿಮ್ಮ ಬಳಿ ಕೆಲಸ ಮಾಡಿಸಿಕೊಂಡು ಮುಂದಿನ ವರ್ಷ ವೇತನ ನೀಡಿದರೆ ಹೇಗಿರುತ್ತೆ..? ಒಮ್ಮೆ ನೀವೇ ಆಲೋಚಿಸಿ.
 
ಸಾರ್ವಜನಿಕರ ಕೆಲಸ ಮಾಡುತ್ತೇವೆ ಎಂದು ಸರ್ಕಾರಿ ಉದ್ಯೋಗಕ್ಕೆ ಬಂದ ನಂತರ ಮನ ಬಂದಂತೆ ಕರ್ತವ್ಯ ನಿರ್ವಹಿಸುವುದು ಸರಿಯಲ್ಲ. ಹುದ್ದೆಯ ಜವಾಬ್ದಾರಿ ಅರಿತು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.
 
ರೈತ ಮುಖಂಡ ಕೊಂಚೆ ಶಿವರುದ್ರಪ್ಪ ಸಲ್ಲಿಸಿದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ, ‘ಒಂದು ವಾರದೊಳಗೆ ಮಾಹಿತಿ ನೀಡದಿದ್ದರೆ, ದಂಡ ವಿಧಿಸುತ್ತೇನೆ’ ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಹನುಮಂತರಾಯಪ್ಪ ಅವರಿಗೆ ಚಂದ್ರೇಗೌಡ ಎಚ್ಚರಿಕೆ ನೀಡಿದರು.
 
‘ಅಧಿಕಾರಿಯಾಗಿ ನೀವು ಹೊರಗುತ್ತಿಗೆದಾರರಿಗೆ, ನೌಕರರಿಗೆ ಮುಖ್ಯಸ್ಥರೋ ಇಲ್ಲ ಅವರು ನಿಮಗೆ ಮುಖ್ಯಸ್ಥರೋ’ ಎಂದು ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದ ಅವರು, ‘ನಿಮ್ಮನ್ನು ಭೇಟಿ ಮಾಡಲು  ಬೆಳಿಗ್ಗೆ ನಿಮ್ಮ ಮುಂದೆ ಅವರು ಬಂದು ಕೈಕಟ್ಟಿ ನಿಲ್ಲಬೇಕು. ಅವನು ಬಂದಿಲ್ಲ ಎಂದರೆ, ನಿಮ್ಮ ಮತ್ತು ಅವರ ನಡುವೆ ವ್ಯವಹಾರದಲ್ಲಿ ಹೊಂದಾಣಿಕೆ ಆಗಿದೆ ಎಂಬ ಅರ್ಥ ಬರುತ್ತದೆ. 

ನೀವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಬೇಜವಾಬ್ದಾರಿಯಿಂದ ಮಾತನಾಡಬೇಡಿ. ಸರಿಯಾಗಿ ಅರ್ಜಿ ಓದಿಕೊಳ್ಳಬೇಕು. ಕೇಳಿದ ಮಾಹಿತಿಯನ್ನು ಅರ್ಜಿದಾರನಿಗೆ ನೀಡದಿದ್ದರೆ ಷೋಕಾಸ್ ನೋಟಿಸ್ ಕೊಡುತ್ತೇನೆ’ ಎಂದು ಬಿಸಿಎಂ ಅಧಿಕಾರಿಗೆ ಎಚ್ಚರಿಕೆ ನೀಡಿದರು.
 
‘ಆಸ್ಪತ್ರೆ ಕೆಲಸದಲ್ಲಿ ಉದಾಸೀನ ಮಾಡಿದರೆ ರೋಗಿ ಮೃತಪಡುತ್ತಾನೆ. ಆದ್ದರಿಂದ ಯಾವುದೇ ಕೆಲಸವಾಗಲಿ ನಿರ್ಲಕ್ಷ್ಯ ಮಾಡಬೇಡಿ’ ಎಂದರು.
‘ಮಾಹಿತಿ ಕೇಳಿದ ಅರ್ಜಿಗೆ ಆದಷ್ಟೂ ಬೇಗ ಮಾಹಿತಿ ನೀಡಿ’ ಎಂದು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗೆ ಸೂಚನೆ ನೀಡಿದರು.
 
ಇಂದಿರಾ ಆವಾಸ್, ಬಸವ ವಸತಿ ಯೋಜನೆಯಡಿ ಕಾರ್ಯಕರ್ತನೊಬ್ಬ ಮಾಹಿತಿ ಕೇಳಿದಾಗ, ‘15 ದಿನಗಳ ಒಳಗೆ ಹಣ ಕಟ್ಟಿ ನಿಮಗೆ ಮಾಹಿತಿ ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.  
 
‘ಯಾವುದೇ ಸಬೂಬು ಹೇಳದೆ, ಅದಕ್ಕೆ ನಿಖರವಾದ ಮಾಹಿತಿಯನ್ನು ಕಾಲಮಿತಿಯಲ್ಲಿ ನೀಡಬೇಕು. ಇಲ್ಲವಾದರೆ ಮಾಹಿತಿ ಕೋರಿರುವವರ ಅರ್ಜಿಗೆ ಹಿಂಬರಹ ನೀಡಿ ಕಚೇರಿ ವ್ಯಾಪ್ತಿಯಲ್ಲೇ ಪ್ರಕರಣ ಇತ್ಯರ್ಥಪಡಿಸಬೇಕು. ಅರ್ಜಿದಾರರು ಆಯೋಗಕ್ಕೆ ಅರ್ಜಿ ಸಲ್ಲಿಸುವವರೆಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು’ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
 
‘ಪೂರ್ವಭಾವಿಯಾಗಿ ದೂರವಾಣಿ ಮೂಲಕ ತಿಳಿಸಿದರೂ ಅರ್ಜಿದಾರರಿಗೆ ಮಾಹಿತಿ ನೀಡದೆ ಬೇಜವಾಬ್ದಾರಿತನ ತೋರಿಸುವ ಅಧಿಕಾರಿಗಳಿಗೆ ಸ್ಥಳದಲ್ಲೇ 
₹ 25 ಸಾವಿರ ದಂಡ ವಿಧಿಸುವ ಅಧಿಕಾರ ಆಯೋಗಕ್ಕೆ ಇದೆ’ ಎಂದು ಹೇಳಿದರು.
 
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಪಿಓ ಓಂಕಾರಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.