ADVERTISEMENT

ಮೀಸಲಾತಿ ಕೊಟ್ಟು, ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಸಲ್ಲದು

ಸಾಧಕಿಯರ ಕೃತಿ ಬಿಡುಗಡೆ ಸಮಾರಂಭದಲ್ಲಿ ಶಾಂತವೀರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:33 IST
Last Updated 14 ಮಾರ್ಚ್ 2017, 5:33 IST

ಹೊಸದುರ್ಗ: ‘ಮಹಿಳೆಯರಿಗೆ ಮೀಸಲಾತಿ ಕೊಟ್ಟು, ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಅಭಿವೃದ್ಧಿಗೆ ಮಾರಕ’ ಎಂದು ಕುಂಚಿಟಿಗ ಶಾಂತವೀರ   ಸ್ವಾಮೀಜಿ ಹೇಳಿದರು.

ಕುಂಚಿಟಿಗ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವ ಮಹಿಳಾ ದಿನಾಚರಣೆ’ ಪ್ರಯುಕ್ತ  ಜೆ.ಎಸ್‌.ಇಸ್ಮಾಯಿಲ್‌ ಜಬೀವುಲ್ಲಾ ಬರೆದಿರುವ   ಸಾಧಕಿಯರ ಕುರಿತ ‘ಸುಹಾನ ಸಮ್ಮಿಲನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘12ನೇ ಶತಮಾನದ ಬಸವಾದಿ ಶಿವಶರಣರ ಕಾಲದಲ್ಲಿಯೇ ಮಹಿಳೆಯರಿಗೆ ನೂರಕ್ಕೆ 100ರಷ್ಟು ಮೀಸಲಾತಿ ಇತ್ತು ಇದರಿಂದಾಗಿಯೇ ಅಕ್ಕಮಹಾದೇವಿ,  ಆಯ್ದಕ್ಕಿ ಲಕ್ಕವ್ವ ಸೇರಿದಂತೆ 33 ಮಹಿಳೆಯರು ಸಾಮಾಜಿಕ ಸಮಾನತೆ ಸಾರುವಂತಹ ಹಲವು ವಚನ ಬರೆಯಲು ಸಾಧ್ಯವಾಗಿದೆ’ ಎಂದರು.

ಮಗುವಿನ ಲಾಲನೆ, ಪಾಲನೆ, ಪೋಷಣೆ, ಸುಂದರ ಸಮಾಜ ನಿರ್ಮಾಣದಲ್ಲಿ  ಮಹಿಳೆಯ ಸ್ಥಾನ ಅತ್ಯಂತ ಹಿರಿದಾದದ್ದು.  ಸಂಪ್ರದಾಯ ಬದ್ಧ ರಾಷ್ಟ್ರ ಆಗಿರುವುದರಿಂದ ಇಂದಿಗೂ ಮಹಿಳೆಯರ ಶೋಷಣೆ ಆಗುತ್ತಿದೆ.  ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಬೇಕು. ಸಂಕಷ್ಟದಲ್ಲಿ ಇರುವವರಿಗೆ ಸಾಂತ್ವನ ಹೇಳುವ ಕೆಲಸ ಆಗಬೇಕು. ಎಲ್ಲರ ಆರೋಗ್ಯ, ಆಲೋಚನೆ ಸರಿಯಾಗಬೇಕು. ಧರ್ಮ, ಜಾತಿ ಭೇದ ಮರೆತು ಭಾರತೀಯ ಧರ್ಮ ಹಾಗೂ ಸಂವಿಧಾನ ಗೌರವಿಸುವಂತಾಗಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಅನಂತ, ಬನಶಂಕರಿ ಪತ್ತಿನ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ನಾಗೇಶಪ್ಪ, ತಾಲ್ಲೂಕು ರೆಡ್‌ಕ್ರಾಸ್‌ ಸಂಸ್ಥೆ ಉಪಾಧ್ಯಕ್ಷ ಲವಕುಮಾರ್‌ ಮಾತನಾಡಿದರು. ಪುರಸಭೆ ಸದಸ್ಯ ಬ್ರಹ್ಮಪಾಲ್‌, ಡಾ.ಉಮೇಶ್‌, ಇಸ್ಮಾಯಿಲ್‌ ಜಬೀವುಲ್ಲಾ, ನಿವೃತ್ತ ಮುಖ್ಯಶಿಕ್ಷಕ ಗುರುಮೂರ್ತಿ ಹಾಗೂ ಪಟ್ಟಣದ ಮಹಿಳೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.