ADVERTISEMENT

ಮುನ್ನೂರು ಎಕರೆಯಲ್ಲಿ ಮೇವಿನ ಬೀಜ ಬಿತ್ತನೆ

ಹಿರಿಯೂರು ತಾಲ್ಲೂಕಿನ ಕೆರೆಗಳಲ್ಲಿ ಮೇವು ಬೆಳೆಸುವ ಪ್ರಯತ್ನ, 45 ದಿನಗಳಲ್ಲಿ ಕೊಯ್ಲಿಗೆ ಬರಲಿದೆ ಮೇವು

ಗಾಣಧಾಳು ಶ್ರೀಕಂಠ
Published 16 ಫೆಬ್ರುವರಿ 2017, 5:56 IST
Last Updated 16 ಫೆಬ್ರುವರಿ 2017, 5:56 IST

ಚಿತ್ರದುರ್ಗ: ಬರಗಾಲದಿಂದಾಗಿ ಮುಂದಿನ ದಿನಗಳಲ್ಲಿ ಸಂಭವಿಸ ಬಹುದಾದ ಮೇವಿನ ಕೊರತೆ ನೀಗಿಸುವ ಸಲುವಾಗಿ ಹಿರಿಯೂರು ತಾಲ್ಲೂಕಿನ ಮೂರು ಕೆರೆಗಳ ಅಂಗಳದಲ್ಲಿ ಮೇವು ಬೆಳೆಸುವ ಪ್ರಯತ್ನ ನಡೆದಿದೆ.

ಚಿತ್ರದುರ್ಗ  ತಾಲ್ಲೂಕಿನ  ಗೋನೂರು  ಕೆರೆಯಲ್ಲಿ ಪಶು ವೈದ್ಯಕೀಯ  ಇಲಾಖೆ  ಇಂಥದ್ದೊಂದು  ಪ್ರಯೋಗವನ್ನು  ಇತ್ತೀಚೆಗೆ ಆರಂಭಿಸಿದೆ. ಅದಕ್ಕೂ ಮುನ್ನ ಹಿರಿಯೂರು ತಾಲ್ಲೂಕಿನ ಉಡುವಳ್ಳಿ, ಕತ್ತೆಹೊಳೆ ಹಾಗೂ ಮೇಟಿಕುರ್ಕೆಯ ಮೂರು ಕೆರೆಗಳ ಅಂಗಳದಲ್ಲಿ ಶಾಸಕ ಡಿ.ಸುಧಾಕರ್  ಸ್ವಯಂ ಪ್ರೇರಿತರಾಗಿ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವು ಬೀಜಗಳನ್ನು ಬಿತ್ತನೆ ಮಾಡಿಸಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಕೆರೆಗಳ ಅಂಗಳವನ್ನು ಉಳುಮೆ ಮಾಡಿಸಿ, ಮೇವಿನ ಬೀಜಗಳನ್ನು ಬಿತ್ತನೆ ಮಾಡಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚಾದ ಹಿನ್ನಲೆಯಲ್ಲಿ ತೇವಾಂಶವನ್ನು ಕಾಪಾಡುವ ಸಲುವಾಗಿ ಕೆರೆ ಅಂಗಳದಲ್ಲೇ ಕೊಳವೆಬಾವಿ ಕೊರೆಸಿ, ಟ್ರ್ಯಾಕ್ಟರ್ ಎಂಜಿನ್ ಸಹಾಯದಿಂದ ನೀರು ಎತ್ತಿ, ಸ್ಪ್ರಿಂಕ್ಲರ್ ಗಳ ಮೂಲಕ ಮೇವಿನ ಬೀಜಗಳಿಗೆ ನೀರು ಉಣಿಸುವ ವ್ಯವಸ್ಥೆ ಮಾಡಿದ್ದಾರೆ.

'ಕೆರೆ ಅಂಗಳದಲ್ಲಿ ನೀರಿಲ್ಲದಿರುವುದರಿಂದ ಮೇಟಿಕುರ್ಕೆ ಕೆರೆ ಅಂಗಳದಲ್ಲಿ ಹುಲ್ಲು ಬೆಳೆಸಲೆಂದೇ ಶಾಸಕರು ಕೊಳವೆಬಾವಿ ಕೊರೆಸಿದ್ದು, ಅವುಗಳಿಂದ ಬಿತ್ತನೆ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ. ಇಲಾಖೆಯಿಂದ ಮೇವಿನ ಬೀಜ ಪೂರೈಸಿದ್ದೇವೆ. ಉಳಿದ ಕೆಲಸಗಳನ್ನು ಶಾಸಕರೇ ಮಾಡಿಸಿದ್ದಾರೆ' ಎಂದು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಸದ್ಯಕ್ಕೆ ಎರಡು ತಳಿಯ ಮೂವತ್ತು ಕ್ವಿಂಟಲ್‌ನಷ್ಟು ಮೇವಿನ ಬೀಜಗಳನ್ನು ಪೂರೈಸಲಾಗಿದೆ. ಅದರಲ್ಲಿ ಕೆಂಪು ಜೋಳ ಹಾಗೂ ಆಫ್ರಿಕನ್ ಟಾಲ್ ಎಂಬ ಮುಸುಕಿನ ಜೋಳದ ತಳಿಯನ್ನು ಬಿತ್ತನೆ ಮಾಡಿಸಲಾಗಿದೆ. ‘ಬಿತ್ತನೆಯಾಗಿರುವ ಈ ಹುಲ್ಲಿನ ತಳಿಗಳು ಇನ್ನು 45 ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಲ್ಲಿ ಮೇವು ಲಭ್ಯವಾಗಬಹುದು’ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಕಳೆದ ವಾರ ಕೇಂದ್ರದ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿತ್ತು. ಅದಕ್ಕೂ ಒಂದೆರಡು ದಿನಗಳ ಮುನ್ನ ಚಿತ್ರದುರ್ಗ ತಾಲ್ಲೂಕು ಗೋನೂರು ಕೆರೆಯ ಅಂಗಳದಲ್ಲಿ ಹತ್ತು ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರ ನೆರವಿನೊಂದಿಗೆ 40 ಎಕರೆ ಪ್ರದೇಶದಲ್ಲಿ ಕೆಂಪು ಜೋಳದ ಮೇವಿನ ಬೀಜಗಳನ್ನು ಬಿತ್ತನೆ ಮಾಡಲಾಗಿತ್ತು.

45 ದಿನಗಳ ನಂತರ ಬೆಳೆಯುವ ಮೇವನ್ನು ಒಂದು ಟನ್‌ಗೆ ₹ 1,500 ಬೆಲೆ ಕೊಟ್ಟು ಖರೀದಿಸುವುದಾಗಿ ಸ್ವಸಹಾಯ ಗುಂಪುಗಳ ನಡುವೆ ಒಡಂಬಡಿಕೆ ಮಾಡಿಕೊಂಡಿದ್ದಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಧ್ಯಯನ ತಂಡದ ಸದಸ್ಯರಿಗೆ ಮಾಹಿತಿ ನೀಡಿದ್ದರು.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಕೆಲವು ಕೆರೆ ಅಂಗಳದಲ್ಲಿ ಮೇವಿನ ಬೀಜಗಳನ್ನು ಬಿತ್ತನೆ ಮಾಡುವ ಪ್ರಯತ್ನಗಳು ನಡೆದಿದ್ದವು. ಆದರೆ, ಕೆರೆ ಅಂಗಳದಲ್ಲಿ ತೇವಾಂಶ ಕೊರತೆಯಾಯಿತು.ಆ ಸಮಯದಲ್ಲಿ ಇಬ್ಬನಿ ಕೂಡ ಹೆಚ್ಚಾಗಿ ಬೀಳಲಿಲ್ಲ. ಹಾಗಾಗಿ ಮೇವಿನ ಬೀಜಗಳು ಮೊಳಕೆ ಒಡೆಯದಿದ್ದದನ್ನು ಇಲ್ಲಿ ಸ್ಮರಿಸಬಹುದು.

ಮೊಳಕೆ ಒಡೆದಿವೆ ಮೇವಿನ ಬೀಜಗಳು

ಮೇವಿನ ಕೊರತೆಯಾಗುವ ಹಿನ್ನೆಲೆಯಲ್ಲಿ ಕೆರೆ ಅಂಗಳದಲ್ಲಿ ಮೇವು ಬೆಳೆಸುತ್ತಿದ್ದೇವೆ. ಇದಕ್ಕೆ ಸರ್ಕಾರದ ನೆರವು ಪಡೆದಿಲ್ಲ. ಕೆರೆ ಅಂಗಳ ಮಾತ್ರವಲ್ಲದೆ ಖಾಸಗಿ ಜಾಗಗಳಲ್ಲೂ ಮೇವಿನ ಬೀಜಗಳನ್ನು ಬಿತ್ತನೆ ಮಾಡಿಸಿದ್ದೇವೆ. ಮುನ್ನೂರೈವತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವಿನ ಬೀಜ ಬಿತ್ತನೆಯಾಗಿದೆ. ಈಗಾಗಲೇ ಕೆಲವು ಕಡೆ ಬೀಜಗಳು ಮೊಳಕೆ ಒಡೆದಿವೆ. ಸ್ವಲ್ಪ ದಿನಗಳಲ್ಲೇ ಮೇವಿನ ಬೆಳೆಯನ್ನು ನೋಡಬಹುದು ಎಂದು ಶಾಸಕ ಡಿ.ಸುಧಾಕರ್ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.