ADVERTISEMENT

ಮೂಲಸೌಕರ್ಯವಿಲ್ಲದೆ ಪಿಯು ಕಾಲೇಜು ಮೂಲೆಗುಂಪು

ಮೊಳಕಾಲ್ಮುರು: ಉಪನ್ಯಾಸಕರ ಕೊರತೆ, ನೀರಿನ ಕೊರತೆ, ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ

ಕೊಂಡ್ಲಹಳ್ಳಿ ಜಯಪ್ರಕಾಶ
Published 24 ಜೂನ್ 2017, 5:19 IST
Last Updated 24 ಜೂನ್ 2017, 5:19 IST
ಮೊಳಕಾಲ್ಮುರಿನ ಸರ್ಕಾರಿ ಪಿಯು ಕಾಲೇಜಿನ ಹೊರನೋಟ.
ಮೊಳಕಾಲ್ಮುರಿನ ಸರ್ಕಾರಿ ಪಿಯು ಕಾಲೇಜಿನ ಹೊರನೋಟ.   

ಮೊಳಕಾಲ್ಮುರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂಲಸೌಕರ್ಯವಿಲ್ಲದೆ ಸೊರಗಿದೆ. ಉಪನ್ಯಾಸಕರ ಕೊರತೆಯೂ ಕಾಡುತ್ತಿದೆ.

1992– 93ರಲ್ಲಿ ಆರಂಭವಾಗಿರುವ ಈ ಕಾಲೇಜಿನಲ್ಲಿ ಪ್ರಸ್ತುತ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳು ನಡೆಯುತ್ತಿದೆ. ಈ ವರ್ಷ ಪ್ರಥಮ ಹಾಗೂ ದ್ವಿತೀಯ ಕಲಾ ವಿಭಾಗದಲ್ಲಿ ಒಟ್ಟು 110, ವಾಣಿಜ್ಯ ವಿಭಾಗದ ಪ್ರಥಮ ಹಾಗೂ ದ್ವಿತೀಯ ವಿಭಾಗದಲ್ಲಿ 230, ವಿಜ್ಞಾನ ವಿಭಾಗದಲ್ಲಿ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಜಿ.ವಿ. ನಾಗರಾಜ್‌ ಮಾಹಿತಿ ನೀಡಿದರು.

ಎರಡು ಕನ್ನಡ, ಎರಡು ಆಂಗ್ಲ ಉಪನ್ಯಾಸಕರ ಹುದ್ದೆಗಳು, ಜೀವಶಾಸ್ತ್ರ, ಗಣಿತ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಹುದ್ದೆಗಳು ಖಾಲಿ ಇವೆ. ಜೀವಶಾಸ್ತ್ರ ಹಾಗೂ ಗಣಿತ ಹುದ್ದೆಗಳು ಖಾಲಿ ಇರುವ ಕಾರಣ ವಿಜ್ಞಾನ ವಿಭಾಗಕ್ಕೆ ಸೇರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಇದರಿಂದ ಈ ವರ್ಷ ದಾಖಲಾತಿ ಕುಸಿತವಾಗಿದೆ. ಸೌಕರ್ಯಗಳ ಕೊರತೆಯಿಂದ ವಿಜ್ಞಾನ ವಿಭಾಗ ಮುಚ್ಚಲಾಗಿದೆ ಎಂದು ಕಿಡಿಗೇಡಿಗಳು ಪ್ರಚಾರ ಮಾಡಿರುವುದು ಕೂಡಾ ದಾಖಲಾತಿ ಕಡಿಮೆಯಾಗಲು ಇನ್ನೊಂದು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸಕರ ಹುದ್ದೆ ಭರ್ತಿ ಮಾಡುವಂತೆ ಪಿಯು ಉಪ ನಿರ್ದೇಶಕರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸರ್ಕಾರ ಗಮನಕ್ಕೆ ತರಲಾಗಿದೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಈ ವರ್ಷ ಕೆಲ ಪಿಯು ಕಾಲೇಜು ಸ್ಥಗಿತವಾಗಲಿದ್ದು ಅಲ್ಲಿನ ಉಪನ್ಯಾಸಕರನ್ನು ನೇಮಕ ಮಾಡುವ ಭರವಸೆ ಮಾತ್ರ
ಸಿಕ್ಕಿದೆ ಎಂದು ನಾಗರಾಜ್‌ ತಿಳಿಸಿದರು.

ಪುಸ್ತಕಗಳಿಲ್ಲ:  ಗ್ರಂಥಾಲಯದಲ್ಲಿ ಪಠ್ಯಪುಸ್ತಕಗಳ ಕೊರತೆ ತೀವ್ರವಾಗಿದ್ದು ಬಡ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅನುದಾನ ನೀಡುವಂತೆ ಪಟ್ಟಣ ಪಂಚಾಯ್ತಿ ಹಾಗೂ ಸಂಸತ್‌ ಸದಸ್ಯರಿಗೆ ಮನವಿ ಮಾಡಲಾಗಿದೆ ಎಂದು ಉಪನ್ಯಾಸಕರು ಹೇಳುತ್ತಾರೆ.
***

ಕುಡಿಯಲು ನೀರಿಲ್ಲ..
ಕಾಲೇಜಿನಲ್ಲಿ ಕುಡಿಯಲು ನೀರಿಲ್ಲ, ಶೌಚಾಲಯದಲ್ಲಿಯೂ ನೀರಿನ ಸಮಸ್ಯೆ ಇದೆ. ವ್ಯವಸ್ಥೆಗಾಗಿ ಪಟ್ಣಣ ಪಂಚಾಯ್ತಿಗೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಅನುದಾನದಲ್ಲಿ ಗುರುಭವನ ಬಳಿಯ ಟ್ಯಾಂಕ್‌ನಿಂದ ಸಂಪರ್ಕ ಕಲ್ಪಿಸುವ ಭರವಸೆ ಸಿಕ್ಕಿದೆ
***

ಅಕ್ರಮ ಚಟುವಟಿಕೆ
ಸುತ್ತಲಿನ ಕಾಂಪೌಂಡ್‌ ಎತ್ತರ ಇಲ್ಲದ ಕಾರಣ ಆವರಣ ಅಕ್ರಮ ಚಟುವಟಿಕೆ ತಾಣವಾಗಿದೆ. ಚುನಾವಣೆ ಮತ ಎಣಿಕೆ ವೇಳೆ ಕಾಂಪೌಂಡ್‌ ಒಡೆಸಿದ್ದು ಈವರೆಗೂ ದುರಸ್ತಿ ಮಾಡಿಲ್ಲ. ಆವರಣ ಜಾನುವಾರು ತಾಣವಾಗಿದೆ ಎಂಬ ದೂರು ಕೇಳಿಬಂದಿದೆ.
***

ಕಾಲೇಜಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದು ವಾರದ ಒಳಗಾಗಿ ಕೆಲಸ ಆರಂಭಿಸಲಾಗುವುದು
ಜಿ. ಪ್ರಕಾಶ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.