ADVERTISEMENT

ಮೋಡಿ ಮಾಡಿದ ಮೋದಿ, ಷಾ ಜೋಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 8:59 IST
Last Updated 19 ಡಿಸೆಂಬರ್ 2017, 8:59 IST
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದರು
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದರು   

ಚಿತ್ರದುರ್ಗ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೋಡಿ ಕಾರಣ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ ಗಾಂಧಿವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಜತೆ ಕುಣಿದ ನಂತರ ಅವರು ಮಾತನಾಡಿದರು.

ಮೋದಿ ಅವರ ಅಭಿವೃದ್ಧಿ ಮಂತ್ರದಿಂದಾಗಿ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಪ್ರಗತಿ ಪರವಾಗಿದ್ದರೆ, ಜನತೆ ಕೈಬಿಡುವುದಿಲ್ಲ ಎಂಬುದಕ್ಕೆ ಗುಜರಾತ್ ಚುನಾವಣೆ ಮತ್ತೊಮ್ಮೆ ಮಾದರಿಯಾಗಿದೆ. ದೇಶದ ಪ್ರತಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬುದು ಪ್ರಧಾನಿ ಅವರ ಮಹಾದಾಸೆಯಾಗಿದೆ. ಅದರಂತೆ ಅನೇಕ ಕಡೆಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂದು ಹೇಳಿದರು.

ADVERTISEMENT

‘ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆದಿದ್ದು, ಅಮಿತ್ ಷಾ ಅವರು ಸಾರಥ್ಯ ವಹಿಸಿದ್ದರು. ಇಬ್ಬರೂ ವ್ಯಾಪಕ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಗುಜರಾತ್ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. ಹಿಮಾಚಲ ಪ್ರದೇಶವನ್ನು ಬಿಜೆಪಿ ಈ ಬಾರಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಾಧ್ಯವಾಗಿದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ‘ಕಾಂಗ್ರೆಸ್‌ ಇತರರೊಂದಿಗೆ ಕೈಜೋಡಿಸಿ ಏನೇ ಕಾರ್ಯ ತಂತ್ರ ರೂಪಿಸಿದರೂ ಫಲಪ್ರದವಾಗಲಿಲ್ಲ. ಒಂದರ ನಂತರ ಮತ್ತೊಂದರಂತೆ ಆ ಪಕ್ಷದ ಕೊಂಡಿ ಕಳಚಿ ಬೀಳುತ್ತಿದ್ದು, ಮುಂಬರುವ ರಾಜ್ಯದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಲಿದ್ದಾರೆ’ ಎಂದು ಭವಿಷ್ಯ ನುಡಿದರು.

ಮುಖಂಡರಾದ ಜಿ.ಎಂ.ಸುರೇಶ್, ನರೇಂದ್ರನಾಥ್ ಮಾತನಾಡಿದರು. ಸಿದ್ದೇಶ್‌ಯಾದವ್, ಮುರಳಿ, ರತ್ನಮ್ಮ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್‌, ಲೀಲಾಧರ್ ಠಾಕೂರ್, ವೆಂಕಟೇಶ್ ಯಾದವ್, ಸುರೇಶ್ ಸಿದ್ದಾಪುರ, ವಿ.ಎಸ್.ಮೋಹನ್, ಗೌರಣ್ಣ, ಶೈಲಜಾ ರೆಡ್ಡಿ, ಭೀಮರಾಜ್, ಶ್ಯಾಮಲಾ ಶಿವಪ್ರಕಾಶ್, ರೇಖಾ ಬಸಮ್ಮ, ವಿಜಯಲಕ್ಷ್ಮಿ, ಚಂದ್ರಿಕಾ ಲೋಕನಾಥ್, ಅಭಿಲಾಷ್, ಜಿ.ಎಸ್.ಶಂಭು, ಅಸ್ಲಾಂ, ಭರತ್ ಇದ್ದರು.

ಧರ್ಮಪುರ
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಬಿಜೆಪಿ ಗೆಲುವು ಕರ್ನಾಟಕದಲ್ಲಿನ ಮುಂದಿನ 2018ರ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕ ಮಸ್ಕಲ್ ಆರ್.ರಾಮಯ್ಯ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಗುಜರಾತ್ ಮತ್ತು ಹಿಮಾಚಲದಲ್ಲಿನ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು.

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಸಿದ್ದೇಶ್‌ ಯಾದವ್ ಮಾತನಾಡಿ, ‘ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಲವಾರು ದಶಕಗಳ ಕಾಲ ಆಡಳಿತ ನಡೆಸಿದರೂ ದೇಶದ ಅಭಿವೃದ್ಧಿಯಾಗಿರಲಿಲ್ಲ. ಅದರ ಬದಲು ದ್ವೇಷದ ಕಂದಕವನ್ನು ಸೃಷ್ಟಿ ಮಾಡಿತ್ತು. ಈಗ ಕರ್ನಾಟಕದಲ್ಲಿ ಪರಿವರ್ತನಾ ರ‍್ಯಾಲಿ ಶುರುವಾಗಿದ್ದು, ಸಿದ್ದರಾಮಯ್ಯನವರ ಅಧಿಕಾರ ಕೊನೆಗೊಂಡು, 2018ರ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

ಸಂಭ್ರಮಾಚರಣೆಯಲ್ಲಿ ನಾಗರಾಜ್‌ ರಾವ್, ತಿಮ್ಮರಾಜು ಯಾದವ್, ರಾಜಪ್ಪ ವಕೀಲ, ಹನುಮಂತರಾಯ, ಸುರೇಶ್, ರಂಗಸ್ವಾಮಿ, ಪುಟ್ಟರಾಜ್, ವೆಂಕಟೇಶ್, ತಿಮ್ಮರಾಜು, ರಾಘು ಭಾಗವಹಿಸಿದ್ದರು.

* * 

ಎರಡೂ ಚುನಾವಣಾ ಫಲಿತಾಂಶ ಗಮನಿಸಿದರೆ, ಮುಂಬರುವ ರಾಜ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಜಿ.ಎಂ.ಸುರೇಶ್, ಬಿಜೆಪಿ ವಿಭಾಗೀಯ ಪ್ರಮುಖ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.