ADVERTISEMENT

ರಸ್ತೆ ದುರಸ್ತಿಗೆ ಸಾರ್ವಜನಿಕರ ಒತ್ತಾಯ

ಚಳ್ಳಕೆರೆ ತಾಲ್ಲೂಕಿನ ಸಾಣೀಕೆರೆ, ಹಿರೇಹಳ್ಳಿ ಕ್ರಾಸ್‌ ಸೇರಿದಂತೆ 10ರಿಂದ 15 ಅಪಘಾತ ವಲಯಗಳು

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:26 IST
Last Updated 28 ಜೂನ್ 2016, 11:26 IST
ಚಳ್ಳಕೆರೆ ತಾಲ್ಲೂಕಿನ ಕಮ್ಮತ್‌ಮರಿಕುಂಟೆ ಗೇಟ್‌ ಬಳಿ ಸೋಮವಾರ ಮುಂಜಾನೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತು
ಚಳ್ಳಕೆರೆ ತಾಲ್ಲೂಕಿನ ಕಮ್ಮತ್‌ಮರಿಕುಂಟೆ ಗೇಟ್‌ ಬಳಿ ಸೋಮವಾರ ಮುಂಜಾನೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತು   

ಚಳ್ಳಕೆರೆ: ಶ್ರೀರಂಗಪಟ್ಟಣ–ಬೀದರ್‌ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ಸಾಣೀಕೆರೆ, ಹಿರೇಹಳ್ಳಿ ಕ್ರಾಸ್‌ ಸೇರಿದಂತೆ 10ರಿಂದ15 ಅಪಘಾತ ವಲಯಗಳಿವೆ. ಈ ಮಾರ್ಗದಲ್ಲಿ ನಿರಂತರ ಅಪಘಾತಗಳು ಆಗುತ್ತಿದ್ದು, ಹಲವು ಯುವಕ–ಯುವತಿಯರು ಸಾವಿಗೀಡಾಗಿದ್ದಾರೆ.

ಸರಣಿ ಅಪಘಾತ:  ತಾಲ್ಲೂಕಿನಲ್ಲಿ ಹಾದು ಹೋಗಿರುವ ಶ್ರೀರಂಗಪಟ್ಟಣ–ಬೀದರ್‌ ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಆಗುತ್ತಿರುತ್ತವೆ. ಈ ರಾಜ್ಯ ಹೆದ್ದಾರಿಯಲ್ಲಿ ಹೆಗ್ಗೆರೆಯಿಂದ ಚಳ್ಳಕೆರೆ ಮಾರ್ಗದಲ್ಲಿ ಅಂದಾಜು 10ರಿಂದ15 ಅಪಘಾತ ವಲಯಗಳಿವೆ. ಈ ಮಾರ್ಗಗಳಲ್ಲಿ ಎರಡು ಮೂರು ದಿನಗಳಿಗೊಮ್ಮೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ಅಪಘಾತಗಳಲ್ಲಿ ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದರೆ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತ ವಲಯಗಳು:  ತಾಲ್ಲೂಕಿನ ಹೊಟ್ಟಜ್ಜಪ್ಪನ ಕಪಿಲೆ ಸಾಣೀಕೆರೆ, ಗರಣಿ ಗೇಟ್‌, ಹೊಟ್ಟೆಪ್ಪನ ಹಳ್ಳಿ, ಲಕ್ಷ್ಮಿಪುರ ಗೇಟ್‌, ರೈಲ್ವೇ ಗೇಟ್‌, ಬುಡ್ನಹಟ್ಟಿ, ಹಿರೇಹಳ್ಳಿ ಕ್ರಾಸ್‌ ಭಾಗಗಳಲ್ಲಿ ಹೆಚ್ಚಾಗಿ ಅಪಘಾತಗಳಾಗುತ್ತಿವೆ. ಈ ಸ್ಥಳಗಳನ್ನು ಅಪಘಾತ ವಲಯಗಳೆಂದು ಗುರುತಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಸೂಚನಾ ಫಲಕಗಳಿಲ್ಲದಿರುವುದು, ಅವೈಜ್ಞಾನಿಕ ರಸ್ತೆಯ ನಿರ್ಮಾಣ ಮತ್ತು ಹೆಚ್ಚಿನ ತಿರುವುಗಳಿಂದ ಕೂಡಿರುವುದು ಅಪಘಾತಗಳಿಗೆ ಕಾರಣ ಎಂದು ಸಾರ್ವಜನಿಕರು ದೂರುತ್ತಾರೆ.

ನಿರ್ವಹಣೆ ಕೊರತೆ:  ‘ರಾಜ್ಯ ಹೆದ್ದಾರಿಯಾಗಿದ್ದರೂ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಜಂಗಲ್‌ನ ವಿಲೇವಾರಿ ಕಾಲಕಾಲಕ್ಕೆ ನಡೆಯುತ್ತಿಲ್ಲ. ರಸ್ತೆಯ ಮಾರ್ಗಗಳಲ್ಲಿ ಕಾಣಸಿಗುವ ಸೇತುವೆಗಳ ತಡೆಗೋಡೆಗಳು ಹಾನಿಗೊಳಗಾಗಿದ್ದು, ಇವುಗಳ ದುರಸ್ತಿ ಕಾರ್ಯಗಳು ನಡೆಯದೆ ಹಾಗೇ ಉಳಿದಿವೆ. ಜತೆಗೆ, ರಸ್ತೆ ಕಿರಿದಾಗಿರುವುದು ಸಹ ಸರಣಿ ಅಪಘಾತಗಳಿಗೆ ಕಾರಣವಾಗಿವೆ ಎನ್ನುತ್ತಾರೆ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸವಾರ ಬೆಳಗೆರೆ ಸುರೇಶ್‌.

ಯವಕರ ದುರ್ಮರಣ: ಈ ರಾಜ್ಯ ಹೆದ್ದಾರಿಯಲ್ಲಿ ಹಲವು ಅಪಘಾತಗಳು ನಡೆಯುತ್ತಿದ್ದು, ಹೆಚ್ಚಾಗಿ ಬೈಕ್‌, ಕಾರು ಮತ್ತು ಕ್ರೂಸರ್‌ನಲ್ಲಿ ಸಂಚರಿಸುವ ಯುವಕರು ಸಾವಿಗೀಡಾಗುತ್ತಿದ್ದಾರೆ. ಈ ಹಿಂದೆ ಹಿರೇಹಳ್ಳಿ ಸಮೀಪ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕ್ರೂಸರ್‌ನಲ್ಲಿ ಶಬರಿಮಲೆಗೆ ತೆರಳುವ ಸಂದರ್ಭ ಅಪಘಾತವಾಗಿ ಹಲವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಜತೆಗೆ, ಬೆಂಗಳೂರಿನ ಖಾಸಗಿ ಕಂಪೆನಿಯ ಸಂದರ್ಶನಕ್ಕೆ ತೆರಳಿ ವಾಪಾಸಾಗುತ್ತಿದ್ದ 9 ಜನ ಯುವಕ–ಯುವತಿಯರು ಸಾವನ್ನಪ್ಪಿದ್ದನ್ನು ಇಲ್ಲಿ ನೆನೆಯಬಹುದು ಎನ್ನುತ್ತಾರೆ ಹೊಟ್ಟೆಪ್ಪನಹಳ್ಳಿಯ ನಾಗರಾಜ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.