ADVERTISEMENT

‘ರೈತ ಸಮುದಾಯಕ್ಕೆ ಅನ್ಯಾಯ’

ಬಜೆಟ್‌ ಪ್ರತಿಕ್ರಿಯೆ....

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:17 IST
Last Updated 2 ಫೆಬ್ರುವರಿ 2017, 6:17 IST
‘ರೈತ ಸಮುದಾಯಕ್ಕೆ ಅನ್ಯಾಯ’
‘ರೈತ ಸಮುದಾಯಕ್ಕೆ ಅನ್ಯಾಯ’   

ಚಿತ್ರದುರ್ಗ: 30 ವರ್ಷಗಳ ನಂತರ ಬಹುಮತದ ಸರ್ಕಾರವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದಂತಹ ದೇಶದ ರೈತ ಸಮುದಾಯಕ್ಕೆ ಕೇಂದ್ರದ ಬಜೆಟ್ ಅನ್ಯಾಯ ಮಾಡಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಸಂಸದ ಬಿ.ಎನ್‌.ಚಂದ್ರಪ್ಪ ಪ್ರತಿಕ್ರಿಯಿಸಿದರು.

ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಲು ದೇಶದಲ್ಲಿ ಶೇ 65 ರಷ್ಟು ಜನಸಂಖ್ಯೆಯುಳ್ಳ ರೈತ ಸಮುದಾಯ ಕಾರಣವಾಗಿದೆ. ಆದರೆ, ಈ ದೇಶದ ಬೆನ್ನೆಲುಬಾದ ರೈತರನ್ನೇ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.

ಯುಪಿಎ ಸರ್ಕಾರವಿದ್ದ ಸಂದರ್ಭ ದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು ₹ 76 ಸಾವಿರ ಕೋಟಿವರೆಗೆ ರೈತರ ಸಾಲ ಮನ್ನಾ ಮಾಡಿದ್ದರು.  ಈ ಸರ್ಕಾರವೂ ರೈತರ ಸಾಲ ಮನ್ನಾ ಮಾಡಬಹುದಿತ್ತು. ಆದರೆ, ರೈತರಿಗೆ ಕೇವಲ 60 ದಿನದ ಬಡ್ಡಿ ಮನ್ನಾ ಮಾಡಲಾಗಿದ್ದು, ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದ್ದಾರೆ. ರೈತ ವರ್ಗಕ್ಕೆ  ದೊಡ್ಡ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಬಜೆಟ್ 70 ವರ್ಷ ತನ್ನದೇ ಆದ ಗೌರವ, ಘನತೆ ಕಾಪಾಡಿಕೊಂಡು ಬಂದಿತ್ತು. ರೈಲ್ವೆ ಬಜೆಟ್ ಅನ್ನು ಒಂದೇ ಪುಟದಲ್ಲಿ ಓದುವ ಮೂಲಕ ಆ ಇಲಾಖೆಯ ಪಾವಿತ್ರ್ಯತೆಯನ್ನು  ಮೊಟಕು  ಗೊಳಿಸುವ  ಕೆಲಸವಾಗಿದೆ.  ಇದರಿಂದಾಗಿ  ದೇಶದ ಜನತೆಗೆ  ರೈಲ್ವೆ  ಇಲಾಖೆಯಲ್ಲಿ  ಏನೇನು  ನಡೆಯುತ್ತಿದೆ ಎಂಬ ಮಾಹಿತಿ ಇಲ್ಲ. ಇತಿಹಾಸವನ್ನೇ ಬುಡಮೇಲು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹುತೇಕ ವಲಯಗಳಲ್ಲಿ ಅನೇಕ ಹೊಸ ಯೋಜನೆಗಳ ಭರವಸೆ ನೀಡಲಾಗಿದೆ. ಇವ್ಯಾವುವೂ  ಈಡೇರುವ ಸಾಧ್ಯತೆಯಾಗಲಿ, ನಂಬಿಕೆಯಾಗಲಿ ಇಲ್ಲ. ಕಾರಣ, ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಭರವಸೆಗಳೇ ಈವರೆಗೂ ಈಡೇರಿಲ್ಲ ಎಂದು ತಿಳಿಸಿದ್ದಾರೆ.

**
ನಿರಾಶಾದಾಯಕ...

ಕೇಂದ್ರದ ಈ ಬಾರಿಯ ಬಜೆಟ್ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ, ಕಪ್ಪು ಹಣ ಕಡಿವಾಣಕ್ಕೆ ಕ್ರಮ, ಕೈಗಾರಿಕೋದ್ಯಮಗಳಿಗೆ ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳಿಗೆ ಹೆಚ್ಚು ಮನ್ನಣೆ ನೀಡಲಾಗಿದೆ. ರೈಲ್ವೆ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿರುವುದು ಐತಿಹಾಸಿಕ ತೀರ್ಮಾನವಾಗಿದೆ. ಆದರೆ, ಆದಾಯ ತೆರಿಗೆ ಮಿತಿ ಏರಿಕೆ ಆಗಿಲ್ಲ. ಆದ್ದರಿಂದ ನೌಕರಿ ವರ್ಗಕ್ಕೆ ಅನ್ಯಾಯವಾಗಿದೆ. ಬಡ ಜನರ ಅಭಿವೃದ್ಧಿ ಕುರಿತು ಹೆಚ್ಚು ಗಮನ ಹರಿಸಿಲ್ಲ. ಹಾಗಾಗಿ ಇದೊಂದು ನಿರಾಶಾದಾಯಕ ಬಜೆಟ್ ಎನ್ನಬಹುದು.
-ಎಸ್‌.ಲಕ್ಷ್ಮಣ್,
ಅರ್ಥಶಾಸ್ತ್ರ ಪ್ರಾಧ್ಯಾಪಕ


**
ಪ್ರಯೋಜನವಿಲ್ಲ...

ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವ ಮೂಲ ಸೌಕರ್ಯಗಳಿಲ್ಲ. ನೀರು, ಗೊಬ್ಬರ, ಔಷಧ ಸೇರಿದಂತೆ ನೀರಾವರಿ ಯೋಜನೆ ಪ್ರಸ್ತಾಪ ಇಲ್ಲ. ಕೃಷಿಗೆ ಕೊಡುವ ಸಾಲ ಇಳಿಕೆ ಮಾಡಲಾಗಿದೆ. ರೈತರಿಗೆ ವೈಯಕ್ತಿಕ ಸಾಲ ₹ 10 ಲಕ್ಷ ಏರಿಕೆ ಮಾಡಲಾಗಿದ್ದು, ರೈತರನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳುವ ಪ್ರಯತ್ನ ನಡೆದಿದೆ. ದೇಶದಲ್ಲಿ ಈಗಿರುವ ಕೆರೆಗಳನ್ನು ದುರಸ್ತಿ ಪಡಿಸುವ, ಅಭಿವೃದ್ಧಿ ಪಡಿಸುವ, ಹೂಳೆತ್ತಿಸುವ ಕೆಲಸದ ಬದಲಿಗೆ 10 ಲಕ್ಷ ಕೆರೆಗಳನ್ನು ನಿರ್ಮಿಸುವುದಾಗಿ ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಒಟ್ಟಾರೆ, ದುಡಿಯುವ ಕೈಗಳಿಗೆ ಶಕ್ತಿ ಒದಗಿಸುವ ಕೆಲಸವಾಗಿಲ್ಲ. ಇದೊಂದು ನಿರಾಶಾದಾಯಕ ಬಜೆಟ್‌.
-ಸಿದ್ದವೀರಪ್ಪ,
ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT