ADVERTISEMENT

ಲೋಹದ ದೇವರಿಗೆ ಯಾವ ಶಕ್ತಿಯೂ ಇಲ್ಲ

ತರಳಬಾಳು: ರಾಜ್ಯಮಟ್ಟದ ಮಕ್ಕಳ ನಾಟಕೋತ್ಸವ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:31 IST
Last Updated 17 ಏಪ್ರಿಲ್ 2017, 4:31 IST
ಹೊಸದುರ್ಗ: ‘ಕಲ್ಲು, ಮಣ್ಣು, ಕಟ್ಟಿಗೆ, ಲೋಹದ ದೇವರು ದೇವರಲ್ಲ. ಅಂಥ ದೇವರಿಗೆ ಯಾವ ವಿಶೇಷ ಶಕ್ತಿಯೂ ಇಲ್ಲ. ಮಕ್ಕಳಲ್ಲೇ ಎಲ್ಲ ಶಕ್ತಿಯಿದೆ. ಅವರನ್ನು ಸರಿಯಾಗಿ ತರಬೇತಿಗೊಳಿಸಿ ಸಂಸ್ಕಾರ ನೀಡಿದರೆ ದೇವರಾಗುತ್ತಾರೆ’ ಎಂದು  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
 
ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾಮಠದ ಎಸ್‌.ಎಸ್‌.ಒಳಾಂಗಣ ರಂಗಮಂದಿರದಲ್ಲಿ ಇಲ್ಲಿನ ಶಿವಕುಮಾರ ಕಲಾಸಂಘ ಮತ್ತು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ಹಬ್ಬದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
 
‘ಪೋಷಕರಾಗಲೀ ಸಮಾಜವಾಗಲೀ ಮಕ್ಕಳ ಬಗ್ಗೆ ಉದಾಸೀನ ತೋರಿದರೆ ಮುಂದೆ ಅವರು ಮಾರಕವಾಗಬಹುದು. ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಬುದ್ಧ, ಏಸು, ಬಸವಣ್ಣನಂತೆ ದೇವತಾ ಪುರುಷರಾಗುವರು. ಮಕ್ಕಳ ಮಾನಸಿಕ, ದೈಹಿಕ, ಇಂದ್ರಿಯ ವಿಕಾರಗಳನ್ನು ಕಳೆದು ಮನೋವಿಕಾಸ ಮಾಡಿಕೊಳ್ಳುವುದೇ ಈ ಮಕ್ಕಳ ಶಿಬಿರದ ಮೂಲ ಉದ್ದೇಶ. ಮಕ್ಕಳ ಕಲ್ಪನಾ ಶಕ್ತಿ ಅರಳಲು ಇಂಥ ಶಿಬಿರಗಳು ಸಹಕಾರಿಯಾಗುತ್ತವೆ’ ಎಂದರು.
 
ಮುಂಡರಗಿಯ ಮಕ್ಕಳ ಸಾಹಿತಿ  ಡಾ.ನಿಂಗು ಸೊಲಗಿ ಮಾತನಾಡಿ, ‘ಮಕ್ಕಳು ಸದಾ ಸೃಜನಶೀಲರು, ಕನಸುಗಾರರು. ಮಕ್ಕಳ ಕನಸಿಗೆ ಬಣ್ಣ ತುಂಬುವ ಕೆಲಸ ಈ ಶಿಬಿರದ ಮೂಲಕ ನಡೆಯಲಿದೆ. ಮಕ್ಕಳ ಭಾವನಾಲೋಕವನ್ನು ವಿಸ್ತರಿಸಿಕೊಳ್ಳಲು ಈ ವೇದಿಕೆ ಅತ್ಯಂತ ಸಹಕಾರಿ.
 
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಲದು, ಸಾಂಸ್ಕೃತಿಕ ಮನಸ್ಸನ್ನು ಬೆಳೆಸಿಕೊಳ್ಳಬೇಕು. ನಿತ್ಯ ಶಾಲಾ ಚಟುವಟಿಕೆಗಳೂ ಇಂಥ ಶಿಬಿರದ ಭಾಗವಾಗಿ ನಡೆಯುವಂತಾಗಬೇಕು. ರಂಗಭೂಮಿ ಬೆಳವಣಿಗೆ ಮಕ್ಕಳ ಮೂಲಕ  ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
 
ಸ್ಥಳೀಯ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಣ್ಣ, ಪೋಷಕರಾದ ಶಶಿಕಲಾ ಹರಳಹಳ್ಳಿ ಅನಿಸಿಕೆ ವ್ಯಕ್ತಪಡಿಸಿದರು. ರಂಗಶಾಲೆಯ ಶಿಕ್ಷಕಿ ಅಕ್ಷತಾ, ಮಕ್ಕಳ ಹಬ್ಬದ ರೂಪರೇಷೆಯನ್ನು ವಿವರಿಸಿದರು.

ಮುಖ್ಯ ಶಿಕ್ಷಕ ಬಿ.ಎಸ್.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಸಂಚಾರದ ಎಚ್.ಎಸ್.ನಾಗರಾಜ್ ವಚನಗೀತೆಗಳನ್ನು ಹೇಳಿಕೊಟ್ಟರು. ರಂಗಶಾಲೆಯ ಪ್ರಾಂಶುಪಾಲ ಜಗದೀಶ್ ರಂಗಗೀತೆ ಹಾಡಿದರು. ರಂಗ ನಿರ್ದೇಶಕರಾದ ಹ್ಯಾಟಿ ರಮೇಶ್ ಮತ್ತು ಕೃಷ್ಣಮೂರ್ತಿ ಹಾಜರಿದ್ದರು.  
 
ಸಮಾರಂಭದ ನಂತರ ಹಾನಗಲ್‌ನ ಗಜಾನನ ಯುವಕ ಮಂಡಳಿ ಚಿಣ್ಣರ ಮೇಳ ತಂಡದ ವಿದ್ಯಾರ್ಥಿಗಳು ವೈದೇಹಿ ವಿರಚಿತ, ಪೃಥ್ವಿನ್ ನಿರ್ದೇಶನದ ‘ಸತ್ರು ಅಂದ್ರೆ ಸಾಯ್ತಾರ?’ ನಾಟಕವನ್ನು ಪ್ರದರ್ಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.