ADVERTISEMENT

ವಿದ್ಯುತ್‌ ವ್ಯತ್ಯಯ: ಉಪಕರಣ ಭಸ್ಮ

ಅಂಬೇಡ್ಕರ್ ಬೀದಿಯ 150ಕ್ಕೂ ಮನೆಗಳಲ್ಲಿ ಹಾನಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 10:06 IST
Last Updated 4 ಜುಲೈ 2015, 10:06 IST

ಚಿತ್ರದುರ್ಗ:  ದಿಢೀರ್‌ ವಿದ್ಯುತ್ ವ್ಯತ್ಯಯ ಪರಿಣಾಮ ಶುಕ್ರವಾರ ನಗರದ ಸ್ಟೇಡಿಯಂ ರಸ್ತೆಯ ಮಹಿಳಾ ಸರ್ಕಾರಿ ಐಟಿಐ ಕಾಲೇಜ್ ಹಿಂಭಾಗದ ಅಂಬೇಡ್ಕರ್ ಬೀದಿಯ 150ಕ್ಕೂ ಹೆಚ್ಚು ಮನೆಯ ವಿದ್ಯುತ್ ಚಾಲಿತ ಉಪಕರಣಗಳು ಸುಟ್ಟು ಹೋಗಿವೆ.

ಮಧ್ಯಾಹ್ನ 2.15ರ ಸುಮಾರಿಗೆ ಈ ಬೀದಿಯ ವಿದ್ಯುತ್ ಕಂಬದಲ್ಲಿ ಹೆಚ್ಚಿನ ವಿದ್ಯುತ್‌ ಪ್ರವಹಿಸಿದ್ದು, ಏಕಕಾಲಕ್ಕೆ ಟಿವಿ, ಡಿವಿಡಿ, ಸೆಟ್‌ ಆಪ್‌ಬಾಕ್ಸ್‌ಗಳು ಸುಟ್ಟು ಹೋಗಿವೆ. ವಿದ್ಯುತ್‌ ವ್ಯತ್ಯಯದಿಂದ ಉಂಟಾದ ಶಬ್ದದಿಂದ ಗಾಬರಿಗೊಂಡ ಜನರು ಹೊರಗಡೆ ಓಡಿ ಬಂದು ಬೀದಿಯಲ್ಲಿ ನಿಂತಿದ್ದಾರೆ. ಕೆಲವರು ಸುಟ್ಟು ಹೋಗಿರುವ ಟಿವಿ ಮತ್ತಿತರ ಉಪಕರಣಗಳನ್ನು ಬೀದಿಯಲ್ಲಿಟ್ಟು, ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಕೆಪಿಟಿಸಿಎಲ್ ಕಚೇರಿಗೆ ದೂರು ನೀಡಿದ್ದೇವೆ. ಯಾರೂ ಸ್ಪಂದಿಸಲಿಲ್ಲ. ಬೆಂಗಳೂರಿನ ಮುಖ್ಯ ಕಚೇರಿಗೂ ಕರೆ ಮಾಡಿದ್ದೇವೆ. ಸ್ವಲ್ಪ ಹೊತ್ತಿನಲ್ಲೇ ಅಧಿಕಾರಿಗಳನ್ನು ಕಳಿಸುತ್ತೇವೆ ಎಂದಿದ್ದರು. ಆದರೆ, ಇನ್ನೂ ಯಾರೂ ಬಂದಿಲ್ಲ’ ಎಂದು ಅಂಬೇಡ್ಕರ್ ಬೀದಿಯ ನಿವಾಸಿ ಮಲ್ಲಿಕಾರ್ಜುನ್ ತಿಳಿಸಿದರು.

‘ಸುಟ್ಟು ಹೋದ ಟಿವಿ ಸೆಟ್‌ಗಳ ಮೌಲ್ಯ ಕನಿಷ್ಠ ₹5ರಿಂದ ₹12 ಸಾವಿರದವರೆಗೆ ಇದೆ. ಪ್ಲಾಟ್ ಟಿವಿ, ಎಲ್‌ಸಿಡಿ ಟಿವಿಗಳು, ದುಬಾರಿ ಬೆಲೆಯ ಡಿವಿಡಿಗಳು, ಇತ್ತೀಚೆಗಷ್ಟೇ ಖರೀದಿ ಮಾಡಿದ ಸೆಟ್‌ ಟಾಪ್ ಬಾಕ್ಸ್‌ಗಳು ವಿದ್ಯುತ್ ಏರಿಳಿತಕ್ಕೆ ಸುಟ್ಟಿವೆ. ಇವನ್ನು ರಿಪೇರಿ ಮಾಡಿಸುವುದು ಕಷ್ಟವಾಗಿದೆ. ಇಡೀ ಬಡಾವಣೆಯಲ್ಲಿ ಕನಿಷ್ಠ 300 ವಿವಿಧ ಉಪಕರಣಗಳು ಸುಟ್ಟು ಹೋಗಿವೆ. ವಿದ್ಯುತ್ ಅವಘಡದಿಂದ ನಮಗೆ ಆಗಿರುವ ನಷ್ಟವನ್ನು ಇಲಾಖೆಯವರೇ ತುಂಬಿಕೊಡಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.

‘ಬಡಾವಣೆಯಲ್ಲಿ ಕೆಳ ಮಧ್ಯಮ ವರ್ಗದವರೇ ಹೆಚ್ಚಾಗಿದ್ದು, ಸಾವಿರಾರು ಉಪಕರಣಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸದ್ಯಕ್ಕೆ ಟಿ.ವಿ, ಡಿವಿಡಿ, ಸೆಟ್‌ಆಪ್ ಬಾಕ್ಸ್ ಸುಟ್ಟು ಹೋಗಿರುವುದು ಮಾತ್ರ ಗೊತ್ತಾಗಿದೆ. ಇನ್ನೂ ಮನೆಯೊಳಗೆ ಏನೆಲ್ಲ ಅವಾಂತರವಾಗಿದೆಯೋ ತಿಳಿಯದು. ಕೆಲ ಮನೆಯ ಮೇಲ್ಭಾಗದಲ್ಲಿ ವೈರ್ ಕಳಚಿ ಬಿದ್ದಿರುವುದರಿಂದ ಒಳಗೆ ಹೋಗಲು ಹೆದರಿಕೆಯಾಗುತ್ತಿದೆ’ ಎಂದು ನಿವಾಸಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.