ADVERTISEMENT

ಶಾಂತಿಸಾಗರ ಜಲಾಶಯಕ್ಕೆ ನೀರು ಹರಿಸಲು ‘ಕಾಡಾ’ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 9:23 IST
Last Updated 22 ಸೆಪ್ಟೆಂಬರ್ 2017, 9:23 IST

ಚಿತ್ರದುರ್ಗ: ಭದ್ರಾ  ಜಲಾಶಯದಿಂದ  ಶಾಂತಿಸಾಗರ  ಜಲಾಶಯಕ್ಕೆ  ಶನಿವಾರದಿಂದ  ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಸಮ್ಮತಿಸಿದೆ. ನಗರಸಭೆ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರ ಸತತ ಪ್ರಯತ್ನ, ಜಿಲ್ಲಾಡಳಿತ ಮತ್ತು ಕಾಡಾ ಜತೆಗೆ ನಡೆಸಿದ ಪತ್ರವ್ಯವಹಾರಗಳ ಪರಿಣಾಮವಾಗಿ ಮುಂದಿನ ವಾರದಲ್ಲಿ ನಗರದ ಜನತೆಗೆ ಶಾಂತಿಸಾಗರ ಜಲಾಶಯದ ನೀರು ಲಭ್ಯವಾಗುವ ಸಾಧ್ಯತೆ ಇದೆ.

ಶಾಂತಿಸಾಗರ ಜಲಾಶಯಕ್ಕೆ ನೀರು ಹರಿಸುವ ಸಂಬಂಧ ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ, ಇತ್ತೀಚೆಗೆ ಭರಮಸಾಗರದ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ಗೆ ಮನವಿ ಸಲ್ಲಿಸಿದ್ದರು. ಅದೇ ವೇದಿಕೆಯಲ್ಲಿ ನೀರು ಬಿಡುವುದನ್ನು ಪ್ರಕಟಿಸಲು ಒತ್ತಾಯ ಹಾಕಿದ್ದರು. ಈ ನಡುವೆ ಜಿಲ್ಲೆಯ ಕೆಲವು ಭಾಗ ಮಳೆ ಬಂದಿದ್ದರಿಂದ ನೀರು ಹರಿಸುವ ವಿಚಾರ ತುಸು ಮುಂದಕ್ಕೆ ಹೋಗಿಯಿತು.

ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಗುರುವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ, ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ, ಜಲಾಶಯಕ್ಕೆ ನೀರು ಹರಿಸಲು ಕಾಡಾ ಅಧ್ಯಕ್ಷರಿಗೆ ಶಿಫಾರಸು ಮಾಡುವಂತೆ ಪಟ್ಟು ಹಿಡಿದರು. ಈ ನಡುವೆ ಜಿಲ್ಲಾಧಿಕಾರಿ ಅವರು ಸೆಪ್ಟೆಂಬರ್ 6 ರಂದು, ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ  ಮತ್ತು ಶಾಂತಿಸಾಗರಕ್ಕೆ ನೀರು ಪೂರೈಸುವ ಅಗತ್ಯದ ಬಗ್ಗೆಯೂ ಕಾಡಾ ಅಧ್ಯಕ್ಷರಿಗೆ ವಿವರವಾಗಿ ಪತ್ರ ಬರೆದು ಮನವಿ ಮಾಡಿದ್ದರು. ಈ ಎಲ್ಲದರ ಫಲವಾಗಿ ಅಚ್ಚುಕಟ್ಟು ಪ್ರಾಧಿಕಾರ ಸಮಿತಿ, ಶಾಂತಿಸಾಗರ ಜಲಾಶಯಕ್ಕೆ ನೀರು ಬಿಡಲು ಸಮ್ಮತಿಸಿದೆ.

ADVERTISEMENT

‘ಚಿತ್ರದುರ್ಗದ ನಗರದ ನೀರಿನ ಸಮಸ್ಯೆ ಪರಿಗಣಿಸಿ, ಭದ್ರಾದಿಂದ ಶಾಂತಿಸಾಗರಕ್ಕೆ ಶನಿವಾರ ಹರಿಸುತ್ತಿದ್ದೇವೆ. ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಬೇಸಿಗೆ ಬೆಳೆಗೆ ಪೂರೈಸುವುದಕ್ಕೆ ಅಗತ್ಯ ನೀರನ್ನು ಇಟ್ಟುಕೊಂಡು, ಕುಡಿಯುವುದಕ್ಕಾಗಿ ಮಾತ್ರ ಜಲಾಶಯದ ನೀರು ಪೂರೈಸುತ್ತಿದ್ದೇವೆ’ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸುಂದರೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಭದ್ರಾ ಜಲಾಶಯದಲ್ಲಿ 166 ಅಡಿ ನೀರಿದೆ. ಭರ್ತಿಯಾಗಲು 20 ಅಡಿ ಬಾಕಿ ಇದೆ’ ಎಂದು ತಿಳಿಸಿದರು.

ಶನಿವಾರ ಜಲಾಶಯಕ್ಕೆ ನೀರು ಬಂದರೂ, ಜಾಕ್‌ವೆಲ್‌ಗೆ ನೀರು ಸಿಗುವಂತಾಗಲು ಒಂದೆರಡು ದಿನ ಬೇಕಾಗುತ್ತದೆ. ನಂತರ ಹೊಸ ನೀರು ಹರಿಯುತ್ತಿರುವುದರಿಂದ ನೀರಿನಲ್ಲಿ ಹೆಚ್ಚು ಮಣ್ಣು ಬೆರೆತಿರುತ್ತದೆ. ‘ನೀರು ತಿಳಿಯಾಗಲು ನಾಲ್ಕೈದು ದಿನ ಬೇಕಾಗುತ್ತದೆ. ಈ ಮಧ್ಯದಲ್ಲಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ, ನೀರನ್ನು ತುಂಬಿಸಿ ನಗರಕ್ಕೆ ಪೂರೈಸಲಾಗುತ್ತದೆ.

ಇದಕ್ಕಾಗಿ ಕನಿಷ್ಠ ಒಂದು ವಾರ ಬೇಕಾಗಬಹುದು’ ಎಂದು ನಗರಸಭೆ ಅಧ್ಯಕ್ಷ ಎಚ್. ಎನ್. ಮಂಜುನಾಥ ಗೊಪ್ಪೆ ತಿಳಿಸಿದ್ದಾರೆ. ಒಟ್ಟಾರೆ ಇನ್ನು ಹದಿನೈದು ದಿನಗಳೊಳಗೆ ಯಥಾ ಪ್ರಕಾರ ನಗರ ಮತ್ತಿತರ ಗ್ರಾಮ ಗಳಿಗೆ ಶಾಂತಿಸಾಗರ ಜಲಾಶಯದ ನೀರು ಪೂರೈಕೆಯಾಗಲಿದ್ದು, ನಾಲ್ಕೈದು ತಿಂಗಳ ‘ವನವಾಸ’ಕ್ಕೆ ತೆರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.