ADVERTISEMENT

ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಕ್ಕಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 7:44 IST
Last Updated 29 ಜೂನ್ 2016, 7:44 IST

ಚಿತ್ರದುರ್ಗ: ತಾಲ್ಲೂಕಿನ ಸೊಂಡೆಕೊಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಣ್ಣನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಶಾಲೆಯ ಮುಂಭಾಗದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಬೆಳಿಗ್ಗೆ 9.40ಕ್ಕೆ ಶಾಲೆಗೆ ಬೀಗ ಹಾಕಿದರು. ಈ ಸಂದರ್ಭದಲ್ಲಿ ಶಾಲೆಯಿಂದ ಹೊರಗೆ ಬಂದ ಮಕ್ಕಳು ಸಹ ಗ್ರಾಮಸ್ಥರೊಂದಿಗೆ ಕೈಜೋಡಿಸಿ ಮಧ್ಯಾಹ್ನ 12.30ರವರೆಗೂ ಪ್ರತಿಭಟನೆ ನಡೆಸಿದರು.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೂ ಒಟ್ಟು 99 ವಿದ್ಯಾರ್ಥಿಗಳಿದ್ದಾರೆ. ಒಬ್ಬ ಮುಖ್ಯ ಶಿಕ್ಷಕರು, ಇಬ್ಬರು ಸಹ ಶಿಕ್ಷಕರಿದ್ದಾರೆ. 1ರಿಂದ 3ನೇ ತರಗತಿವರೆಗೂ ನಲಿ–-ಕಲಿ ಯೋಜನೆಯಡಿ ಒಬ್ಬ ಸಹ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಮತ್ತೊಬ್ಬ ಸಹ ಶಿಕ್ಷಕರು 4ರಿಂದ 7ನೇ ತರಗತಿವರೆಗೂ ಒಂದೇ ಕೊಠಡಿಯಲ್ಲಿ ಪಾಠ ಮಾಡುತ್ತಿದ್ದು, ಮಕ್ಕಳ ಕಲಿಕೆಯಲ್ಲಿ ಗುಣಮಟ್ಟ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ಶಾಲೆಯ ತರಗತಿಗಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಕ್ಲಸ್ಟರ್‌ ಮಟ್ಟದ ಅಧಿಕಾರಿ ನೆಪಮಾತ್ರಕ್ಕೆ ಪರಿಶೀಲನೆಗಾಗಿ ಆಗಮಿಸುತ್ತಾರೆ ಎಂದು ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಆದರೆ ಮಕ್ಕಳ ವಿದ್ಯಾಭ್ಯಾಸದ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದರು.

ವರ್ಷಕ್ಕೂ ಅಧಿಕ ಸಮಯದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಈ ಶಾಲೆಯಲ್ಲಿ ದೊರೆಯುತ್ತಿಲ್ಲ. ಶಾಲೆಯ ಅವ್ಯವಸ್ಥೆ ನೋಡಿದ ಕೆಲ ಪೋಷಕರು ವರ್ಗಾವಣೆ (ಟಿಸಿ) ಪತ್ರ ತೆಗೆದುಕೊಂಡು ಬೇರೆ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಅವನತಿಗೆ ಸಮರ್ಪಕ ಶಿಕ್ಷಕರ ನೇಮಕ ಆಗದಿರುವುದು ಕೂಡ ಬಹುಮುಖ್ಯ ಕಾರಣ ಎಂದು ಆರೋಪಿಸಿದರು.

ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಈ ಕುರಿತು ಚಿಂತನೆ ನಡೆಸಿ ಅಗತ್ಯ ಇರುವೆಡೆ ಶಿಕ್ಷಕರನ್ನು ನೇಮಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಸಿದ್ದಪ್ಪ, ಕುಮಾರ್‌, ಶಶಿಕುಮಾರ, ಹನುಮಂತ, ಚಂದ್ರಪ್ಪ, ತಿಮ್ಮಯ್ಯ, ಗಿರೀಶ್‌, ಉಮೇಶ್‌, ಹನುಮಂತಪ್ಪ, ಪರಮೇಶ್‌ ಸೇರಿದಂತೆ ಶಾಲೆಯ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.