ADVERTISEMENT

ಶೇಂಗಾ ಬೀಜಕ್ಕೆ ಆಗ್ರಹಿಸಿ ರಸ್ತೆ ತಡೆ

ಚಳ್ಳಕೆರೆ: ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬ ಆರೋಪ; ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 9:45 IST
Last Updated 30 ಜೂನ್ 2015, 9:45 IST
ಚಳ್ಳಕೆರೆಯಲ್ಲಿ ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬ ಖಂಡಿಸಿ ರೈತರು ಸೋಮವಾರ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ಚಳ್ಳಕೆರೆಯಲ್ಲಿ ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬ ಖಂಡಿಸಿ ರೈತರು ಸೋಮವಾರ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.   

ಚಳ್ಳಕೆರೆ: ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ಸೋಮವಾರ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸಮೀಪದ ವಾಲ್ಮೀಕಿ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿದರು.ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕೃಷಿ ಇಲಾಖೆಗೆ ಬಂದಿದ್ದ ರೈತರು, ಶೇಂಗಾ ಬಿತ್ತನೆ ಬೀಜದ ಟೋಕನ್‌ಗಾಗಿ ಕಾದು ಕುಳಿತಿದ್ದರು.

ಮಹಿಳೆಯರು ಮತ್ತು ನೂರಾರು ರೈತರು ಪಹಣಿ ಸೇರಿದಂತೆ ಅಗತ್ಯ ದಾಖಲೆಗಳ ಸಹಿತ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದರು. ಆದರೆ, ಕೇವಲ ಬೆರಳೆಣಿಕೆಯಷ್ಟಿದ್ದ ಕೃಷಿ ಇಲಾಖೆ ಸಿಬ್ಬಂದಿ, ರೈತರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಕೃಷಿ ಇಲಾಖೆ ಆವರಣದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ, ಸಮೀಪದ ವಾಲ್ಮೀಕಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು.

ರಸ್ತೆ ತಡೆ ನಡೆದ ಸ್ಥಳಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಜಿ.ಎಸ್‌.ಸ್ಫೂರ್ತಿ ಭೇಟಿ ನೀಡಿ, ಈಗಾಗಲೇ ಶೇಂಗಾ ಖರೀದಿ ಮಾಡಲಾಗಿದ್ದು, ತ್ವರಿತವಾಗಿ ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಟೋಕನ್‌ ವಿತರಣೆ ಮಾಡಲಾಗುವುದು. ನಂತರ ಬಿತ್ತನೆ ಬೀಜ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಹಾಯಕ ನಿರ್ದೇಶಕರ ಭರವಸೆಯಿಂದ ಪ್ರತಿಭಟನೆ ಹಿಂಪಡೆದ ರೈತರು ಟೋಕನ್‌ ಪಡೆಯಲು ಕೃಷಿ ಇಲಾಖೆಗೆ ತೆರಳಿ, ಸರದಿ ಸಾಲಿನಲ್ಲಿ ನಿಂತು ಟೋಕನ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.