ADVERTISEMENT

ಸರ್ವಾಧಿಕಾರದಿಂದ ಮೀಸಲಾತಿಗೆ ಕಂಟಕ

ರಾಜ್ಯ ಎಸ್‌ಸಿ–ಎಸ್‌ಟಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಡಾ. ಸಣ್ಣರಾಮನಾಯ್ಕ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:27 IST
Last Updated 13 ಮಾರ್ಚ್ 2017, 5:27 IST
ಸರ್ವಾಧಿಕಾರದಿಂದ ಮೀಸಲಾತಿಗೆ ಕಂಟಕ
ಸರ್ವಾಧಿಕಾರದಿಂದ ಮೀಸಲಾತಿಗೆ ಕಂಟಕ   

ಚಿತ್ರದುರ್ಗ: ‘ದೇಶದಲ್ಲಿ ಸರ್ವಾಧಿಕಾರ ಧೋರಣೆ ಹೆಚ್ಚಾಗುತ್ತಿದ್ದು,  ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಐದು ವರ್ಷಗಳಲ್ಲಿ  ಪರಿಶಿಷ್ಟರಿಗಿರುವ ಮೀಸಲಾತಿ ಸೌಲಭ್ಯವೂ ಉಳಿಯುವುದಿಲ್ಲ’  ಎಂದು ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರ ಒಕ್ಕೂಟದ ಗೌರವಾಧ್ಯಕ್ಷ ಡಾ. ಸಣ್ಣರಾಮನಾಯ್ಕ್ ಆತಂಕ ವಕ್ತಪಡಿಸಿದರು.

ನಗರದ ಅಮೃತ್ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿ ‘ಮುಂಬಡ್ತಿ ಮೀಸಲಾತಿ’ ಕುರಿತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ‘ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿಯ ಚಾರಿತ್ರಿಕ ಹಿನ್ನೆಲೆ’ ಕುರಿತು ಅವರು ವಿಷಯ ಮಂಡಿಸಿದರು.

‘ದೇಶದಲ್ಲಿ ಸರ್ವಾಧಿಕಾರವನ್ನು ಹುಟ್ಟು ಹಾಕುವಲ್ಲಿ ನಮ್ಮ ಪಾತ್ರವೂ ಇದೆ. ಇತ್ತೀಚೆಗಿನ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಶೇ 60ರಷ್ಟು ಮುಸ್ಲಿಂ ಸಮುದಾಯದವರು, ಶೇ 60ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸನಾತನ ಮಂದಿಯನ್ನು ಬೆಂಬಲಿಸುವ ಪಕ್ಷವನ್ನೇ ಆರಿಸಿದ್ದಾರೆ. ಈ ಮೂಲಕ ನಮ್ಮ ತಲೆ ಮೇಲೆ ನಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಯಾರಿಗೆ ಯಾವ ವಿಷಯನ್ನು ಹೇಗೆ ಹೇಳುವುದು?’  ಎಂದು ಪ್ರಶ್ನಿಸಿದರು. 

‘ಸಂವಿಧಾನದಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕೆಂಬ ಉಲ್ಲೇಖವಿದ್ದರೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲ.  ಸಂವಿಧಾನದ ಹಕ್ಕುಗಳು  ರಚನೆಯಾಗುವ ಶಾಸನಗಳನ್ನು ಜನರಿಗೆ ತಲುಪಿಸುವಂತಹ ಕಾರ್ಯಾಂಗದಲ್ಲೂ ಮುಕ್ಕಾಲು ಪಾಲು ಮೇಲ್ವರ್ಗದವರೇ ಇದ್ದು, ಅಲ್ಲೂ ದಲಿತ ವಿರೋಧಿ ಧೋರಣೆ ಚಾಲ್ತಿಯಲ್ಲಿದೆ. ಇಂಥವರಿಂದ ತಳಸಮುದಾಯದವರಿಗೆ ಅನು ಕೂಲಗಳನ್ನು ನಿರೀಕ್ಷಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ದಲಿತ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾವಾರು ಕೋಟಿ  ರೂಪಾಯಿ ಬಿಡುಗಡೆ ಮಾಡುತ್ತದೆ. ಅದರಲ್ಲಿ ಶೇ 25ರಷ್ಟು ಹಣ ಸಮುದಾಯದ ಏಳಿಗೆಗೆ ವಿನಿಯೋಗವಾದರೆ  ಶೇ 75ರಷ್ಟು ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ‘ ಎಂದು ವಿಶ್ಲೇಷಿಸಿದರು.
‘ಸಂವಿಧಾನದ ಪರಿಚ್ಛೇದ 16(4) ಮತ್ತು 16(4ಎ) ಪ್ರಕಾರ ಪರಿಶಿಷ್ಟ ಜಾತಿ, ವರ್ಗಗಳಿಗೆ ಬಡ್ತಿ ಮೀಸಲಾತಿ ಕೊಡಬೇಕೆಂಬ ಉಲ್ಲೇಖವಿದೆ. ಅದನ್ನು 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದರು. ಅದರಲ್ಲಿ ಮೀಸಲಾತಿ ನೀಡಲು ಎಸ್‌ಸಿ/ಎಸ್‌ಟಿ ಸಿಬ್ಬಂದಿ ಇಲ್ಲದಿದ್ದಾಗ ಅದನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬೇಕೆಂಬ ನಿಯಮವಿತ್ತು.ದಲಿತ ನೌಕರರಲ್ಲಿ ದಕ್ಷತೆ, ಪ್ರಾಮಾಣಿಕತೆ, ಪ್ರತಿಭಾವಂತರಿದ್ದರೂ  ಅಂಥವರನ್ನು ಗುರುತಿಸುವ ಮನಸ್ಸುಗಳಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಪಂಗಡಗಳಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡಬೇಕೆಂದು 1992ರಲ್ಲಿ ಸರ್ಕಾರ ಆದೇಶ ಹೊರಡಿಸಿದಾಗ ನ್ಯಾಯಾ ಲಯವು ಅದಕ್ಕೆ ಸಮ್ಮತಿಸಿತು.  ಇದರಿಂದ ಅಷ್ಟು ವರ್ಷ ಪದೋನ್ನತಿ ಯಿಲ್ಲದೆ ನೊಂದಿದ್ದ ಪರಿಶಿಷ್ಟರ ನೌಕರರ ಬಾಳಲ್ಲಿ ಆಶಾಕಿರಣ ಮೂಡಿತು. ಆಗ ಬ್ಯಾಕ್‌ಲಾಗ್ ಹುದ್ದೆಗಳನ್ನು ಸಹ ಭರ್ತಿ ಮಾಡಲಾಯಿತು’ ಎಂದರು.

‘ಸಣ್ಣ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್‌ಗಳಿಗೆ  ಕಾನೂನಿನ ಅನ್ವಯದಂತೆ ಎ ಗ್ರೇಡಿನ ಕಿರಿಯ ಶ್ರೇಣಿಯವರೆಗೆ  ಬಡ್ತಿ ಸವಲತ್ತು ದೊರಕಿತು. ಅದರ ಫಲವಾಗಿ ಕೆಳಹಂತದ ದಲಿತ ನೌಕರರು ಅಧಿಕಾರಿಗಳಿಗೆ ಸಂವಿಧಾನದ ಆಶಯದಂತೆ ಹುದ್ದೆ ನಿರ್ವಹಿಸಿದರು. ಇದರಿಂದ ಮೇಲ್ವರ್ಗದ ನೌಕರರಲ್ಲಿ ಅಸಮಾಧಾನ ಪ್ರಾರಂಭವಾಗಿ ಕೆಇಟಿಗೆ ಅರ್ಜಿ ಸಲ್ಲಿಸಿದರು. ಕೊನೆಗೂ ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯಿತು’ ಎಂದು    ವಿವರಿಸಿದರು.

ಕಾರ್ಯಕ್ರಮವನ್ನು ಡಿಡಿಪಿಐ ರೇವಣಸಿದ್ದಪ್ಪ ಉದ್ಘಾಟಿಸಿದರು. ತಹಶೀಲ್ದಾರ್ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು.  ಎಸ್ ಸಿ, ಎಸ್‌ ಟಿ ನೌಕರ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಮಾತನಾಡಿದರು. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮಗಳು ಮತ್ತು ಪರಿಹಾರಗಳು ಕುರಿತು ಹಿರಿಯ ವಕೀಲ ಎಚ್.ಎಂ.ಎಸ್‌ ನಾಯಕ ವಿಷಯ ಮಂಡಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ್, ಕೆ.ಕೆ.ಕಮಾನಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.