ADVERTISEMENT

ಸಾಲ ನೀಡದಿದ್ದರೆ ಪ್ರಕರಣ ದಾಖಲಿಸಿ

ಚಿತ್ರದುರ್ಗ: ಜಿಲ್ಲಾ ಮಟ್ಟದ ಬ್ಯಾಂಕರ್ಸ್‌ ಸಭೆಯಲ್ಲಿ ಸಂಸದ ಬಿ.ಎನ್. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:44 IST
Last Updated 8 ಮಾರ್ಚ್ 2017, 10:44 IST
ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌್್ಸಗಳ ಸಭೆಯಲ್ಲಿ ಸಂಸದ ಚಂದ್ರಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್‌ ಪಾಟೀಲ್  ಇದ್ದರು.
ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌್್ಸಗಳ ಸಭೆಯಲ್ಲಿ ಸಂಸದ ಚಂದ್ರಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್‌ ಪಾಟೀಲ್ ಇದ್ದರು.   

ಚಿತ್ರದುರ್ಗ:  ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ (ಎಸ್‌ಸಿಪಿ, ಟಿಎಸ್‌ಪಿ) ಸಾಲ ನೀಡದ ಬ್ಯಾಂಕ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಸದ ಬಿ.ಎನ್. ಚಂದ್ರಪ್ಪ ಜಿಲ್ಲಾ  ಪಂಚಾಯ್ತಿ ಸಿಇಒ ಮತ್ತು ಲೀಡ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌್್ಸಗಳ ಸಭೆ ಅಧ್ಯಕ್ಷತೆ ವಹಿಸಿ
ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಸಾಲಕ್ಕಾಗಿ ಪದೇ ಪದೇ ಬ್ಯಾಂಕ್‌ಗಳಿಗೆ ಅಲೆದಾಡಬಾರದು.

ಫಲಾನುಭವಿಗಳು ಸಂಬಂಧಿಸಿದ ಎಲ್ಲ ದಾಖಲೆ ನೀಡಿದರೂ ಸಾಲ ವಿತರಿಸದೇ ಇದ್ದರೆ  ಅಂಥ ಬ್ಯಾಂಕ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಲಾಖೆವಾರು ಪ್ರಗತಿ ಪರಿಶೀಲನೆ ವೇಳೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾಧಿಕಾರಿ ರಮೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡ  ಚಂದ್ರಪ್ಪ, ‘ನಿಗಮದಿಂದ ವಿವಿಧ ಸಾಲ ಸೌಲಭ್ಯ ನೀಡಲು ಫಲಾನುಭವಿಗ­ಳನ್ನು ಆಯ್ಕೆಗಾಗಿ ನಡೆಸಿರುವ ಸಭೆಯ ವಿಷಯವನ್ನು ನನ್ನ ಗಮನಕ್ಕೆ ತಂದಿಲ್ಲ. ನಾನು ನಿಗಮದ ಸದಸ್ಯನಾಗಿದ್ದು, ನಾನಿಲ್ಲದೇ ಸಭೆ ಹೇಗೆ ಮಾಡಿದ್ದೀರಿ?’ ಎಂದು ಅವರು ಪ್ರಶ್ನಿಸಿದರು.

‘ಮೊದಲು ಆಯ್ಕೆ ಪ್ರಕ್ರಿಯೆ ರದ್ದುಗೊಳಿಸಿ. ಪುನಃ ಸಭೆ ನಡೆಸಿ ಆಯ್ಕೆ ಮಾಡಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ನಾನು ವಿಷಯ ಪ್ರಸ್ತಾಪಿಸಿದ್ದೆ.  ನಾನು ಹೇಳಿ ಎರಡು ತಿಂಗಳು ಕಳೆದರೂ ಮೌನ ವಹಿಸಿದ್ದೀರಿ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಕೂಡ ಹೇಳಿದ್ದಾರೆ. ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಬೇಕು’ ಎಂದು ರಮೇಶ್‌ ಅವರಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಶ್ರೀರಂಗಯ್ಯ, ‘ಪ್ರಸಕ್ತ ಸಾಲಿನಲ್ಲಿ ನಿಗದಿ ಮಾಡಿರುವ ಗುರಿ ಎಷ್ಟು ? ನಿಮ್ಮ ಸಾಧನೆ ಏನು ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ 330 ನಿಗದಿಯಾಗಿದ್ದು, 100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ, ‘ಮಾರ್ಚ್ 7 ಮುಗಿಯುತ್ತಾ ಬಂದರೂ ಯಾಕೆ ಇನ್ನೂ 230 ಫಲಾನುಭವಿಗಳನ್ನು ಬಾಕಿ ಉಳಿಸಿಕೊಂಡಿದ್ದೀರಿ? ಎಂದು ಮರು ಪ್ರಶ್ನಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್‌ ಪಾಟೀಲ್ ಮಾತನಾಡಿ, ‘ಸರ್ಕಾರ ನಿಯ­ಮದ ಪ್ರಕಾರ ಸಭೆ ನಡೆಸಿಯೇ ಫಲಾನುಭವಿಗಳ ಆಯ್ಕೆ ಮಾಡಬೇಕು. ಯಾವ ನಿಮಗಿಷ್ಟ ಬಂದಂತೆ ಎಲ್ಲೆಂದರಲ್ಲಿ ಫಲಾನುಭವಿಗಳ ಆಯ್ಕೆ ಮಾಡಬಾರದು’ ಎಂದು ಸೂಚಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ರಮೇಶ್ ಸಂಸದರ ಆಕ್ಷೇಪಗಳಿಗೆ ಉತ್ತರಿಸಿ, ‘ಯಾವುದೇ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನ ಆಗಬೇಕು. ಶಾಸಕರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಹತ್ತು ಸಲ ಲಿಖಿತವಾಗಿ ಪತ್ರ ಬರೆದು ಫಲಾನುಭವಿಗಳ ಆಯ್ಕೆ ಮಾಡಿ ಎಂದು ಶಾಸಕರಿಗೆ ಮನವಿ ಮಾಡಿದ್ದೇನೆ. ಆದರೆ, ಅವರು ಸ್ಪಂದಿಸದಿದ್ದರೆ, ನಾನೇನು ಮಾಡಲು ಸಾಧ್ಯ ?’ ಎಂದು ಸಭೆಗೆ ಮಾಹಿತಿ ನೀಡಿದರು.

ಬೇಸರಗೊಂಡ ಸಂಸದರು ‘ಈ ರೀತಿಯ ಸಬೂಬುಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಆಯ್ಕೆಯಲ್ಲೇ ಗೊಂದಲವಿದ್ದಂತೆ ಕಾಣುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿದ್ದರೆ ನಿಗಮದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಕೆ  ನೀಡಿದರು.

ಜಿಲ್ಲಾಧಿಕಾರಿ ಶ್ರೀರಂಗಯ್ಯ ‘ಬೇರೆ ಬೇರೆ ಇಲಾಖೆಗಳಿಂದ ನಿಯೋಜಿತರಾಗಿ ಬರುತ್ತೀರಿ. ಈ ಇಲಾಖೆಗಳ ಕೆಲಸ ಕಾರ್ಯ ನಿಮಗೆ ಗೊತ್ತಿರುವುದಿಲ್ಲ. ಆದ್ದರಿಂದ ಕಾಯ್ದೆ, ಕಾನೂನುಗಳನ್ನು ಓದಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜ್, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿರುಪಾಕ್ಷಪ್ಪ, ನಬಾರ್ಡ್‌ನ ಎಜಿಎಂ ಸುವರ್ಣಾ ಮಾಲಿನಿ  ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.