ADVERTISEMENT

ಸ್ಮಾರ್ಟ್‌ ನಗರಿಯಲ್ಲಿ ಕುದುರೆ ಸವಾರಿ...

ನಗರದಲ್ಲಿ ತರಬೇತಿ ಶಾಲೆ ಆರಂಭ: ದೇಶಿ, ವಿದೇಶಿ ತಳಿಯ ಕುದುರೆಗಳು ಲಭ್ಯ

ಬಾಲಚಂದ್ರ ಎಚ್.
Published 15 ಮೇ 2017, 5:02 IST
Last Updated 15 ಮೇ 2017, 5:02 IST
ಸ್ಮಾರ್ಟ್‌ ನಗರಿಯಲ್ಲಿ ಕುದುರೆ ಸವಾರಿ...
ಸ್ಮಾರ್ಟ್‌ ನಗರಿಯಲ್ಲಿ ಕುದುರೆ ಸವಾರಿ...   
ದಾವಣಗೆರೆ: ದುಬಾರಿ ಹವ್ಯಾಸ ಎಂದೇ ಕರೆಸಿಕೊಳ್ಳುವ ‘ಹಾರ್ಸ್‌ ರೈಡಿಂಗ್‌’ (ಕುದುರೆ ಸವಾರಿ) ಮಹಾನಗರ ಗಳಿಗಷ್ಟೇ ಸೀಮಿತವಾಗಿತ್ತು. ಜೀವನ ಶೈಲಿ, ಅಭಿರುಚಿ ಬದಲಾದಂತೆ ಹಾರ್ಸ್‌ ರೈಡಿಂಗ್ ತರಬೇತಿ ಶಾಲೆಗಳು ನಗರ ಪ್ರದೇಶಗಳಿಗೂ ವಿಸ್ತಾರಗೊಳ್ಳುತ್ತಿವೆ. ಈಗ ಸ್ಮಾರ್ಟ್‌ಸಿಟಿ ದಾವಣಗೆರೆಗೂ ಇಂಥ ಒಂದು ಶಾಲೆ ಕಾಲಿಟ್ಟಿದೆ.
 
ನಗರದ ಬಂಬೂಬಜಾರ್‌ನಲ್ಲಿರುವ ಶಾರದಾ ರೈಸ್‌ಮಿಲ್‌ ಕಾಂಪೌಂಡ್‌ನಲ್ಲಿ ಒಂದು ವರ್ಷದಿಂದ ದಾವಣಗೆರೆ ಹಾರ್ಸ್‌ ರೈಡಿಂಗ್ ಶಾಲೆ ತರಬೇತಿ ನೀಡುತ್ತಿದೆ. ದೇಶಿ ಹಾಗೂ ವಿದೇಶಿ ತಳಿಯ ಕುದುರೆಗಳು ಇಲ್ಲಿದ್ದು, ಕುದುರೆ ಸವಾರಿ ಕಲಿಯಲು ಆಸಕ್ತಿ ಇರುವವರಿಗೆ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಸ್ಟಡ್‌ ಫಾರ್ಮ್‌ ಮಾಲೀಕ ರಾಜೇಶ್‌ ಸಿಂಗ್‌.
 
‘ಹಾರ್ಸ್‌ ರೈಡಿಂಗ್, ಥೆರಪಿ ರೈಡಿಂಗ್, ಡ್ರೆಸ್ಸೇಜ್‌, ಷೋ ಜಂಪಿಂಗ್, ಪೋಲೊ, ಸೈಕಲ್‌ ಪೊಲೊ, ಆರ್ಚರಿ, ಏರ್‌ಗನ್‌ ಶೂಟಿಂಗ್ ಹೀಗೆ ಹಲವು ವಿಭಾಗಗಳಲ್ಲಿ ತರಬೇತಿ ನೀಡಲಾಗು ವುದು. ಪ್ರತಿದಿನ ಬೆಳಿಗ್ಗೆ 6ರಿಂದ 8 ಹಾಗೂ ಸಂಜೆ 5ರಿಂದ 8ರವರೆಗೆ ಶಾಲೆ ತೆರೆದಿರಲಿದ್ದು, 50ಕ್ಕೂ ಹೆಚ್ಚು ಮಂದಿ ಕಲಿಕೆಯಲ್ಲಿದ್ದಾರೆ. ಕ್ಲಾಸ್‌ಗೆ ₹ 200 ಶುಲ್ಕವಿದೆ’ ಎನ್ನುತ್ತಾರೆ ಅವರು.
 
ಕೇವಲ ಸವಾರಿ ಮಾಡುವುದು ಮಾತ್ರವಲ್ಲ; ದೈಹಿಕ ಹಾಗೂ ಮಾನಸಿಕ ಸದೃಢತೆಗೂ ಕುದುರೆ ಸವಾರಿ ಸಹಕಾರಿ. ಕೆಲಸದ ಒತ್ತಡ, ಬೆನ್ನುನೋವು, ಗ್ರಹಿಕಾ ಸಾಮರ್ಥ್ಯವೃದ್ಧಿಗೂ ಕೋರ್ಸ್‌ಗಳಿವೆ. ಎಲ್ಲ ವಯೋಮಾನದವರೂ ತರಬೇತಿ ಪಡೆಯಬಹುದು.
 
‘ವಿದೇಶಗಳು ಹಾಗೂ ಮೆಟ್ರೋನಗರಗಳಲ್ಲಿ ಹಾರ್ಸ್‌ ರೈಡಿಂಗ್‌ ಕ್ರೇಜ್‌ ಹೆಚ್ಚು. ವರ್ಷದ ಹಿಂದೆ ಹವ್ಯಾಸಕ್ಕಾಗಿ ಸಹೋದರ ಸೋನು ಸಿಂಗ್‌ ಜತೆಗೂಡಿ ಹೈದರಾಬಾದ್‌ನಿಂದ ಎರಡು ಕುದುರೆ ಖರೀದಿಸಿ ತಂದೆ. ಜನರು ಆಸಕ್ತಿಯಿಂದ ಕುದುರೆಗಳನ್ನು ನೋಡಿದರು.
 
ಕೆಲವರು ಕುದುರೆ ಸವಾರಿ ತರಬೇತಿ ನೀಡುವಂತೆ ಒತ್ತಾಯಿಸಿದರು. ಕೊನೆಗೆ ಹೈದರಾಬಾದ್‌ನಿಂದ ಟ್ರೇನರ್‌ ಶೋಯೆಬ್ ತಾಜ್‌ ಅವರನ್ನು ಕರೆತರಬೇಕಾಯಿತು. ಜೊತೆಗೆ ವಿದೇಶಿ ಕುದುರೆಗಳನ್ನು ಆಮದು ಮಾಡಿಕೊಳ್ಳ ಬೇಕಾಯಿತು’ ಎಂದು ದಾವಣಗೆರೆ ಹಾರ್ಸ್‌ ರೈಡಿಂಗ್ ಶಾಲೆ ತೆರೆದ ಸಂದರ್ಭ ವನ್ನು ವಿವರಿಸಿದರು ರಾಜೇಶ್‌ ಸಿಂಗ್‌.
 
ಬಂಡವಾಳ ಹೂಡಿ ಕುದುರೆಗಳನ್ನು ತಂದರೆ ಸಾಲದು, ಅವುಗಳ ನಿರ್ವಹಣೆ ಸವಾಲಿನ ಕೆಲಸ. ಮಾಲೀಕ ಕೆಲಸಗಾರ ನಾಗಿ ದುಡಿಯಬೇಕು. ಕುದುರೆಗಳ ಭಾವನೆ, ಬೇಕುಬೇಡಗಳನ್ನು ಅರಿಯ ಬೇಕು. ಮಕ್ಕಳಂತೆ ಪೋಷಿಸಬೇಕು. ನಿಯಮಿತ ಆರೋಗ್ಯ ತಪಾಸಣೆ, ಮಾಲಿಷ್‌, ಸ್ನಾನ ಹೀಗೆ ಅವುಗಳ ಅಗತ್ಯಗಳನ್ನು ಪೂರೈಸಬೇಕು ಎಂದು ಉದ್ಯಮದೊಳಗಿನ ಸವಾಲುಗಳನ್ನು ವಿವರಿಸಿದರು ಅವರು.
 
ತರಬೇತಿ ಪಡೆದವರಿಗೆ ದೆಹಲಿಯ ಕೇಂದ್ರ ಕಚೇರಿಯಿಂದ ಪ್ರಮಾಣಪತ್ರ ನೀಡಲಾಗುವುದು. ಕುದುರೆ ಸವಾರಿಯನ್ನು ವೃತ್ತಿಯಾಗಿಯೂ ತೆಗೆದುಕೊಳ್ಳಬಹುದು ಎಂದು ಸಿಂಗ್ ಮಾಹಿತಿ ನೀಡಿದರು.
****
ಫಾರ್ಮ್‌ನಲ್ಲಿರುವ ಕುದುರೆಗಳು
ಹೆಸರು: ದಿ ಲೀಡರ್‌ (ಕ್ಲಾಸ್‌ ಡರ್ಬಿ ಹಾರ್ಸ್‌)

ವಯಸ್ಸು: 8 ವರ್ಷ, ಅಮೆರಿಕಾ ಮೂಲ
ಹೈದರಾಬಾದ್, ಪುಣೆ, ಬೆಂಗಳೂರು, ಮೈಸೂರು ರೇಸ್‌ನಲ್ಲಿ ಸ್ಪರ್ಧೆ
ವಿಶೇಷತೆ: ರೇಸ್‌, ಪೊಲೋ, ಷೋ ಜಂಪಿಂಗ್‌ ಹಾರ್ಸ್‌ 5 ಅಡಿ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯ.
ಹೆಸರು: ಗೋಲ್ಡನ್‌ ಡ್ಯಾಷ್‌ (ಶಾರ್ಟ್‌ ರೇಸ್ ಕ್ವೀನ್‌)
ವಯಸ್ಸು: 5 ವರ್ಷ, ಆಸ್ಟ್ರೇಲಿಯಾ ಮೂಲ. ರೇಸ್‌; ಬೆಂಗಳೂರು, ಹೈದರಾಬಾದ್ ರೇಸ್‌ನಲ್ಲಿ ಸ್ಪರ್ಧೆ
ವಿಶೇಷತೆ: ಷೋ ಜಂಪಿಂಗ್ ಎಕ್ಸ್‌ಪರ್ಟ್‌
ವಯ್ಯಾರದ ನಡಿಗೆಗೆ ಹೆಸರುವಾಸಿ.

****
ಏಂಜೆಲ್‌ (ಶಟ್‌ಲ್ಯಾಂಡ್ ಪೋನಿ)

3 ವರ್ಷ: ಹೈದರಾಬಾದ್ ಮೂಲ
ಷೋ ಜಂಪಿಂಗ್ ಪರಿಣತಿ, ಪೊಲೊ ಎಕ್ಸ್‌ಪರ್ಟ್‌
ವಿಶೇಷತೆ: ಥೆರಪಿ ಹಾರ್ಸ್‌, 21 ಸುಳಿ
ಅದೃಷ್ಟದ ಕುದುರೆ ಎಂಬ ಖ್ಯಾತಿ
ಐಶ್ವರ್ಯಾ (ದಾವಣಗೆರೆ ಕಿಡ್‌)
4 ತಿಂಗಳು: ಚುರುಕುತನ, ವೇಗ
ದಾವಣಗೆರೆಯಲ್ಲಿ ಹುಟ್ಟಿದ ಕುದುರೆ
ಮಕ್ಕಳ ಪಾಲಿನ ಪ್ರೀತಿಯ ಐಶೂ

ADVERTISEMENT

****
ಅಭಿಮನ್ಯು (ಇಂಡಿಯನ್‌ ಬ್ರೀಡ್‌)
ಪಂಜಾಬಿ ಕಲಿಯಾ ವಾರ್ ಬ್ರೀಡ್‌
ಮಾಲೀಕರು: ರಾಘವೇಂದ್ರ ಶೆಟ್ಟಿ
ಇಂಡಿಯನ್‌  ಡ್ರೆಸ್ಸೇಜ್‌
ವಿಶೇಷತೆ: ಡಾನ್ಸ್‌ ಎಕ್ಸ್‌ಪರ್ಟ್‌

****
ಯುವರಾಜ್‌ (ರಾಜಸ್ತಾನ)

ಮಾಲೀಕರು: ಡಾ.ಪ್ರಶಾಂತ್‌
ವಯಸ್ಸು ಎರಡೂವರೆ ವರ್ಷ
ವಿಶೇಷತೆ: ರಾಯಲ್‌ ಮಾರ್‌ವಾರಿ ಬ್ಲಡ್‌ಲೈನ್‌,  ಷೋ ಜಂಪಿಂಗ್ ದೇಸಿ ತಳಿ

****

ಮಿಸ್ಟರ್ ಶಾನ್‌ (ಶಾರ್ಟ್‌ ಲ್ಯಾಂಡ್‌ ಪೋನಿ)
5 ವರ್ಷ: ಬ್ರಿಟಿಷ್‌ ಹಾರ್ಸ್‌
ಮಕ್ಕಳೂ ರೈಡ್‌ ಮಾಡಬಹುದು
ವಿಶೇಷತೆ: 6 ಅಡಿ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯ, ಷೋ ಜಂಪಿಂಗ್ ಪರಿಣತಿ, ಮಕ್ಕಳ ಪೊಲೋಗೂ ಬಳಕೆ

****

ಬಜ್‌ ವರ್ಲ್ಡ್‌ (ಇಂಗ್ಲಿಷ್‌ ಥರೊ ಬ್ರೀಡ್‌)
5 ವರ್ಷ: ಅಮೆರಿಕ ಮೂಲ
ವಿಶೇಷತೆ: ರೇಸ್‌ ಹಾರ್ಸ್‌, ಪ್ರೊಫೆಷನಲ್‌ ಷೋ ಜಂಪಿಂಗ್‌, ಸಾಧನೆ: ಹೈದರಾಬಾದ್ ರೇಸ್‌ನಲ್ಲಿ ಚಿನ್ನದ ಪದಕ.

****

ಆಹಾರ ಕ್ರಮ: ಆಸ್ಟ್ರೇಲಿಯನ್‌ ಓಟ್ಸ್‌, ಅಮೆರಿಕನ್‌ ಸ್ವೀಟ್ ಕಾರ್ನ್‌, ಪ್ರೊಟೀನ್ ಪೌಡರ್, ಕ್ಯಾಲ್ಶಿಯಂ ಪೌಡರ್, ಮೊಟ್ಟೆ, ಸೇಬು, ಹಾಲು, ತರಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.