ADVERTISEMENT

ಹಾಪ್ಕಾಮ್ಸ್‍ ಮಳಿಗೆಗಳಲ್ಲಿ ಸಿರಿಧಾನ್ಯ

4-5 ದಿನಗಳಿಂದ ಆರಂಭ, ಅಧಿಕೃತ ಮಾರಾಟಕ್ಕೆ ಶೀಘ್ರ ಚಾಲನೆ

ಗಾಣಧಾಳು ಶ್ರೀಕಂಠ
Published 20 ಮಾರ್ಚ್ 2017, 6:00 IST
Last Updated 20 ಮಾರ್ಚ್ 2017, 6:00 IST
ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿರುವ ಎಸ್ ಪಿ ಕಚೇರಿ ಪಕ್ಕದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಸಿರಿಧಾನ್ಯಗಳ ಪೊಟ್ಟಣ ಪ್ರದರ್ಶಿಸುತ್ತಿರುವ ಮಳಿಗೆ ಉಸ್ತುವಾರಿ.
ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿರುವ ಎಸ್ ಪಿ ಕಚೇರಿ ಪಕ್ಕದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಸಿರಿಧಾನ್ಯಗಳ ಪೊಟ್ಟಣ ಪ್ರದರ್ಶಿಸುತ್ತಿರುವ ಮಳಿಗೆ ಉಸ್ತುವಾರಿ.   

ಚಿತ್ರದುರ್ಗ: ಈ ನವಣೆ, ಸಾಮೆ, ಹಾರಕ.. ಎಲ್ಲಿ ಸಿಗುತ್ತವೆ ಅಂತ ಹುಡುಕಿ ಸಾಕಾಯ್ತು. ಅಲ್ರೀ.. ಈ ಕೆಎಂಎಫ್‍ ನವರು ಮಿಲ್ಕ್ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಮಾರಿದ ಹಾಗೆ  ಹಾಪ್‌ಕಾಮ್ಸ್‌ನವರು ಹಣ್ಣುಗಳಂತೆ ಈ ಸಿರಿಧಾನ್ಯಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಾರದೇ?

ಹೀಗೆ ಗೆಳೆಯರ ಬಳಿ ಚರ್ಚಿಸುತ್ತಿದ್ದವರಿಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಜಿಲ್ಲಾ ಹಾಪ್‍ ಕಾಮ್ಸ್‍ ಸಂಸ್ಥೆ  ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆಯಂತಹ ಸಿರಿಧಾನ್ಯಗಳನ್ನು ಜಿಲ್ಲೆಯ ಎಲ್ಲ ಹಾಪ್‍ ಕಾಮ್ಸ್ ಮಳಿಗೆಗ­ಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಮೊದಲ ಹಂತವಾಗಿ ನಾಲ್ಕೈದು ದಿನಗಳಿಂದ ನಗರದ ಹಾಪ್‍ ಕಾಮ್ಸ್‍ ಮಳಿಗೆಯಲ್ಲಿ ಸಿರಿಧಾನ್ಯಗಳ ಮಾರಾಟವನ್ನು ಆರಂಭಿಸಿದೆ.

ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಮೂಡಿದೆ. ಹೆಚ್ಚು ನಾರಿನಂಶವಿರುವ ಆಹಾರ ಪದಾರ್ಥಗಳು ಮಧುಮೇಹ, ರಕ್ತದೊಡ ಸೇರಿದಂತೆ ಹಲವು ರೋಗಗಳ ನಿಯಂತ್ರಣಕ್ಕೆ ನೆರವಾಗುತ್ತವೆ ಎಂಬ ತಜ್ಞರ ಅಭಿಪ್ರಾಯಕ್ಕೆ ಜನರು ತಲೆದೂಗಿದ್ದಾರೆ.  ಹಾಗಾಗಿ ನಾರಿನ ಅಂಶ ಹೆಚ್ಚಿರುವ ಸಿರಿಧಾನ್ಯಗಳ ಸೇವನೆಗೆ ನಾಗರಿಕರು ಮುಂದಾಗಿದ್ದಾರೆ. ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಗರದ ಆರೇಳು ಕಡೆಗಳಲ್ಲಿ ಸಿರಿಧಾನ್ಯ ಮಾರಾಟ ಮಾಡಲಾಗುತ್ತಿದೆ.

‘ಸಿರಿಧಾನ್ಯಗಳ ಬೆಲೆ ದುಬಾರಿ ಆಯ್ತು’ ಎಂದು ಕೆಲವು ಗ್ರಾಹಕರಿಂದ  ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸಿರಿಧಾನ್ಯಗಳನ್ನು  ಪೂರೈಸಲು ಹಾಪ್‌ಕಾಮ್ಸ್‍ ಮುಂದಾಗಿದೆ.

ತುರುವನೂರು ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಅಂಚಿನಲ್ಲಿರುವ ಹಾಪ್‌ಕಾಮ್ಸ್‍ ಮಳಿಗೆಯಲ್ಲಿ ನಾಲ್ಕೈದು ದಿನಗಳಿಂದ ಸಿರಿಧಾನ್ಯಗಳ ಮಾರಾಟ ಆರಂಭವಾಗಿದೆ. ಗಟ್ಟಿಯಾದ ಪ್ಲಾಸ್ಟಿಕ್‍ ಕವರ್‍್ ನಲ್ಲಿ  ಸಿರಿಧಾನ್ಯಗಳನ್ನು ತುಂಬಿ, ಆಯಾ ಸಿರಿಧಾನ್ಯಗಳ ಹೆಸರು, ತೂಕ, ಬೆಲೆ, ಗುಣಮಟ್ಟ ಬಾಳಿಕೆ  ವಿವರವಿರುವ ಸ್ಟಿಕರ್ ಅಂಟಿಸಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.

ಎಲ್ಲ ಸಿರಿಧಾನ್ಯಗಳನ್ನು ಸಂಸ್ಕರಣಾ ಘಟಕಗಳಿಂದ ನೇರವಾಗಿ ಖರೀದಿಸಿ ಪೊಟ್ಟಣ ಮಾಡಿಸಲಾಗುತ್ತಿದೆ. ಹೀಗೆ ಸಗಟು ಖರೀದಿಯಿಂದಾಗಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಕೊಡಲು ಸಾಧ್ಯವಾಗುತ್ತಿದೆ ಎನ್ನುವುದು ಹಾಪ್‌ಕಾಮ್ಸ್‍ ಅಧ್ಯಕ್ಷ ತಿಮ್ಮಾರೆಡ್ಡಿ ಅಭಿಪ್ರಾಯ.

‘ಕಚ್ಚಾ ರೂಪದ ನವಣೆ ಮತ್ತು ಸಾಮೆ ಮಾತ್ರ ಲಭ್ಯವಾಗುತ್ತದೆ. ಆದರೆ ನವಣೆ ಹೊರುತುಪಡಿಸಿ ಬೇರೆ ಧಾನ್ಯಗಳನ್ನು ಸಂಸ್ಕರಿಸಲು ಇಲ್ಲಿ ಅವಕಾಶವಿಲ್ಲ. ಕಾರಣ, ಸಂಸ್ಕರಣಾ ಘಟಕಗಳಿಂದ ನೇರವಾಗಿ ಸಗಟು ರೂಪದಲ್ಲಿ ಖರೀದಿಸಲಾಗುತ್ತದೆ. ನಾಗರಿಕರಿಗೆ ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ’ ಎಂದರು.

‘ನಾಲ್ಕು ದಿನಗಳಿಂದ  ಈ ಪೊಟ್ಟಣಗಳನ್ನು ಗಾಜಿನ ಕಪಾಟಿನಲ್ಲಿಟ್ಟಿದ್ದೇವೆ. ಬಹಳಷ್ಟು ಜನ ಕೊರಲೆ, ಹಾರಕದ ಬಗ್ಗೆ ಮಾಹಿತಿ ಕೇಳಿಕೊಂಡು ಹೋಗಿದ್ದಾರೆ. ಈಗಾಗಲೇ ಕೆಲವರು ಖರೀದಿ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿಂದಲೇ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. 

ನಮ್ಮ ಮಳಿಗೆಯಲ್ಲಿ ಧಾನ್ಯಗಳನ್ನು ಇಟ್ಟಿರುವುದು ತುಂಬಾ ಅನುಕೂಲವಾಗಿದೆ  ಎಂದು ಗ್ರಾಹಕರು ಹೇಳುತ್ತಿದ್ದಾರೆ’ ಎಂದು ಮಳಿಗೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 22 ಹಾಪ್ ಕಾಮ್ಸ್ ಮಳಿಗೆಳಿದ್ದವು. ಸದ್ಯ ಅದರಲ್ಲಿ ಎರಡು ಕಾರ್ಯನಿರ್ವಹಿಸುತ್ತಿಲ್ಲ.  ಉಳಿದಿರುವ ಮಳಿಗೆಗಳಲ್ಲಿ ಶೀಘ್ರ ಸಿರಿಧಾನ್ಯಗಳ ಮಾರಾಟ ಆರಂಭಿಸಲಾಗುತ್ತದೆ. ಆ ವೇಳೆ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಾ­ಗುತ್ತದೆ’ ಎಂದು ತಿಮ್ಮಾರೆಡ್ಡಿ ತಿಳಿಸಿದ್ದಾರೆ.

*
ಕಳೆದ ವಾರವೇ ಹಾಪ್‍ ಕಾಮ್ಸ್ ನಲ್ಲಿ ಸಿರಿಧಾನ್ಯಗಳ ಮಾರಾಟ ಉದ್ಘಾಟನೆಯಾಗಬೇಕಿತ್ತು. ಪದಾರ್ಥಗಳು ಲಭ್ಯವಾಗದೇ ಅಧಿಕೃತ ಮಾರಾಟಕ್ಕೆ ಮುಂದಿನ ವಾರ ಚಾಲನೆ ನೀಡುತ್ತೇವೆ.
– ತಿಮ್ಮಾರೆಡ್ಡಿ,
ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT