ADVERTISEMENT

ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 7:22 IST
Last Updated 21 ನವೆಂಬರ್ 2017, 7:22 IST

ಚಳ್ಳಕೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ತೀರಾ ಹಿಂದುಳಿದಿದೆ ಎಂದು ಹಿರಿಯೂರು ಕ್ಷೇತ್ರದ ಶಾಸಕ ಡಿ. ಸುಧಾಕರ್ ಹೇಳಿದರು. ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಅಗತ್ಯ. ಪಂಚಮಸಾಲಿ ಸಮುದಾಯ ವೀರರಾಣಿ ಚೆನ್ನಮ್ಮನ ಸಾಹಸಮಯ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷ ನಾಗನಗೌಡ ಮಾತನಾಡಿ, ಶಿಥಿಲಗೊಂಡಿರುವ ಚೆನ್ನಮ್ಮನ ಮನೆಯನ್ನು ದುರಸ್ತಿಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಮಾಡಿದರು.

ADVERTISEMENT

ಸಂಘದ ಮಾಜಿ ಗೌರವಾಧ್ಯಕ್ಷ ಬಾವಿ ಬೆಟ್ಟದ ಅವರು, ‘ರಾಜಕೀಯವಾಗಿ ತೀರಾ ಹಿಂದುಳಿದಿರುವ ಪಂಚಮಸಾಲಿ ಸಮುದಾಯವನ್ನು ‘2 ಎ’ಗೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಚ್.ಎಸ್.ತಿಪ್ಪೇಸ್ವಾಮಿ ಸಮುದಾಯದ ಮುಖಂಡ ಉಮಾಪತಿ ಹಾಜರಿದ್ದರು.

ಮೆರವಣಿಗೆ: ನಗರದಲ್ಲಿ ಹಮ್ಮಿಕೊಂಡಿದ್ದ ಚೆನ್ನಮ್ಮನ ಭಾವಚಿತ್ರದ ಮೆರವಣಿಗೆಗೆ ರಘುಮೂರ್ತಿ ಚಾಲನೆ ನೀಡಿದರು. ಡೊಳ್ಳು, ತಮಟೆ ಹಾಗೂ ವೀರಗಾಸೆ ಜನಪದ ಕಲಾಮೇಳದ ಕಲಾವಿದರೊಂದಿಗೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.