ADVERTISEMENT

ಹೊರಗುತ್ತಿಗೆ: ಕೆಡಿಪಿ ಸಭೆಯಲ್ಲಿ ವಾಕ್ಸಮರ

ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ನಿತೇಶ್ ಪಾಟೀಲ್ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:07 IST
Last Updated 12 ಜನವರಿ 2017, 11:07 IST
ಚಿತ್ರದುರ್ಗ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೊರಗುತ್ತಿಗೆ ಆಧಾರದಲ್ಲಿ ಎಂಜಿನಿಯರ್‌ಗಳ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿತೇಶ್ ಪಾಟೀಲ್ ಮತ್ತು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ ನಡುವೆ ಮಾತಿನ ಸಮರ ನಡೆಯಿತು.
 
ಕೆಡಿಪಿ ಸಭೆ ಆರಂಭದಲ್ಲೇ  ಆರ್. ಕೃಷ್ಣಮೂರ್ತಿ, ‘ಹೊರಗುತ್ತಿಗೆ ಆಧಾರ ದಲ್ಲಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿದ್ದು, ಅದರಲ್ಲಿ ಒಂದೇ ಜಾತಿಯವರನ್ನೇ ಆಯ್ಕೆ ಮಾಡಲಾಗಿದೆ. ಇದು ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ’ ಎಂದು ದೂರಿದರು.
 
ಸಿಇಒ ನಿತೇಶ್‌ ಪಾಟೀಲ್ ಪ್ರತಿಕ್ರಿಯಿಸಿ, ‘ಆರ್‌ಡಿಪಿಆರ್‌ ನಿಯಮದ ಪ್ರಕಾರವೇ ಸಂದರ್ಶನ ನಡೆಸಿ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಿದ್ದೇವೆ. ಅಧಿಕಾರಿಗಳು ಯಾವ ಜಾತಿಯನ್ನೂ ವಿರೋಧಿಸುವುದಿಲ್ಲ. ಎಲ್ಲ ಆಯ್ಕೆಗಳು ಪಾರದರ್ಶಕವಾಗಿವೆ. ಆಯ್ಕೆ ಪ್ರತಿಯನ್ನು ಇವತ್ತೇ ನಿಮಗೆ ತಲುಪಿಸುತ್ತೇವೆ. ಅದರಲ್ಲಿ ದೋಷ ಕಂಡು ಬಂದರೆ ಗಮನಕ್ಕೆ ತನ್ನಿ, ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.
 
ಈ ಪ್ರತಿಕ್ರಿಯೆಗೆ ಸಮಾಧಾನ ಗೊಳ್ಳದ ಕೃಷ್ಣಮೂರ್ತಿ, ‘10 ವರ್ಷಗಳಿಂದ ಇಂಥ ಉದ್ಯೋಗ­ಗಳಲ್ಲಿರುವ ಅನೇಕರನ್ನು ಏಕಾ ಏಕಿ ಈಗ ವಜಾ ಮಾಡಿದ್ದೀರಿ. ಈ ಉದ್ಯೋಗ ವನ್ನೇ ನಂಬಿ­ಕೊಂಡಿರುವವರ ಕಥೆ ಏನಾಗಬೇಕು’ ಎಂದು ಪ್ರಶ್ನಿಸಿದರು. ಇದಕ್ಕೆ ಮತ್ತೊಬ್ಬ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ಮೂರ್ತಿ ದನಿಗೂಡಿಸಿದರು.
 
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಇಒ, ‘ನರೇಗಾದಲ್ಲಿ ಕೆಲಸ ಮಾಡಲು ಜನರೇ ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಬಳಿ ಕೆಲವರು ಅಧಿಕಾರಿಗಳು ದೂರು ನೀಡಿದ್ದಾರೆ. ಅಂಥವರಿಂದ ಹೇಗೆ ಕೆಲಸ ಮಾಡಿಸಲು ಸಾಧ್ಯ. ಅದಕ್ಕೆ ಅಂಥವರನ್ನು ಕೆಲಸದಿಂದ ತೆಗೆದಿದ್ದೇವೆ. ಹಾಗೆಯೇ ಅಭಿವೃದ್ಧಿ ಕಾರ್ಯ ಕೈಗೊಳ್ಳದವರನ್ನು ವಜಾ ಮಾಡಿದ್ದೇವೆ. ಈ ಕುರಿತು ಪರಿಶೀಲನೆಗಾಗಿ ಮೂವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ಆ ತಂಡ ನೀಡಿದ ವರದಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.
 
ಚರ್ಚೆ ತಾರಕ್ಕೇರುತ್ತಾ, ಏರು ದನಿಯಲ್ಲಿ ಜಗಳ ನಡೆಯಲಾರಂಭಿಸಿತು. ಇದನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಧ್ಯೆ ಪ್ರವೇಶಿಸಿದರು. ‘ಈ ವಿಷಯವಾಗಿ ಎಲ್ಲರ ಮುಂದೆ ಜಗಳವಾಡುವುದು ಬೇಡ. ಸಭೆಗೆ ಅವಕಾಶ ಮಾಡಿಕೊಡಿ’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದು, ಕೆಡಿಪಿ ಸಭೆ ಆರಂಭಕ್ಕೆ ಅವಕಾಶ ಕಲ್ಪಿಸಿದರು. 
 
***
ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲ.  ಅಧಿಕಾರಿಗಳದ್ದೇ ದರ್ಬಾರು ನಡೆಯುತ್ತಿದೆ. ಈ ಜಿಲ್ಲಾ ಪಂಚಾಯ್ತಿ ಇರುವುದೇ ವೇಸ್ಟ್‌
–ಆರ್.ಕೃಷ್ಣಮೂರ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ 
 
***
ರಾಜ್ಯಕ್ಕೆ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮಾದರಿಯಾಗಿದೆ. ನಿಮಗೆ ಮಾದರಿ ಅಲ್ಲ ಎನ್ನಿಸಿದರೆ ಸುಮ್ಮನಿರಿ. ವೇಸ್ಟ್‌ ಎಂಬ ಹೇಳಿಕೆ ಸರಿಯಲ್ಲ.
– ನಿತೇಶ್‌ ಪಾಟೀಲ್, ಸಿಇಒ, ಜಿ.ಪಂ.,

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.