ADVERTISEMENT

‘ದೇಶೀಯ ಕ್ರೀಡೆಗಳಿಗೂ ರಾಷ್ಟ್ರೀಯ ಮನ್ನಣೆ’

ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 9:11 IST
Last Updated 30 ಸೆಪ್ಟೆಂಬರ್ 2014, 9:11 IST

ಚಿತ್ರದುರ್ಗ: ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕ್ರೀಡಾಪಟುಗಳ ಶಕ್ತಿ ವೃದ್ಧಿಯಾಗುತ್ತದೆ. ಜತೆಗೆ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಜಯಮ್ಮ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಮದಕರಿ ನಾಯಕ ವಿದ್ಯಾಸಂಸ್ಥೆ ಹಾಗೂ ಹಿರೇಗುಂಟನೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2014–15ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಗುರು – ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರಬೇಕು. ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು, ವಿದ್ಯಾರ್ಥಿಗಳನ್ನು ಪ್ರೀತಿಸುವ ಮತ್ತು ಶಿಕ್ಷಿಸುವ ಎರಡೂ ಗುಣ ಬೆಳೆಸಿಕೊಂಡು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುವಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಮಕ್ಕಳಿಗೆ ರಾಷ್ಟ್ರದ ನಾಯಕರಾಗುವಂತಹ ಎಲ್ಲ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಉತ್ತಮ ಹವ್ಯಾಸ ಮೈಗೂಡಿಸಿಕೊಂಡು ದೇಶ ಮತ್ತು ಸಮಾಜಕ್ಕೆ ಸತ್ಪ್ರಜೆಗಳಾಗಬೇಕು. ಜತೆಗೆ ತಾಯ್ನಾಡಿನ ಋಣ ತೀರಿಸಲು ಶ್ರಮಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಿರಿ.ಎಂ.ಜಾನಕಲ್‌ ಮಾತನಾಡಿ, ಏಷ್ಯನ್‌ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಾಧನೆ ಮೆಚ್ಚುವಂತಹದ್ದು. ಶೈಕ್ಷಣಿಕ ಹಂತದಲ್ಲಿ ಹಿಂದೆ ಗುರು ಮುಂದೆ ಗುರಿ ಹೊಂದಿದ್ದರೆ, ಸಾಧನೆ ಮಾಡಿ ಇತಿಹಾಸದ ಪುಟ ಸೇರಬಹುದು. ಪ್ರಸ್ತುತ ಕ್ರಿಕೆಟ್‌ ಹೊರತುಪಡಿಸಿ ಇತರೆ ದೇಶೀಯ ಕ್ರೀಡೆಗಳಿಗೂ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಮನ್ನಣೆ ದೊರೆಯುತ್ತಿದ್ದು, ಕ್ರೀಡಾಪಟುಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ಬೋರಪ್ಪ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ರಮೇಶ್‌, ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜ್ಞಾನಮೂರ್ತಿ, ಪ್ರಾಂಶುಪಾಲರಾದ ಹನುಮಂತಪ್ಪ, ನಾಗವೇಣಿ ಇತರರು ಇದ್ದರು. ನರಸಿಂಹಮೂರ್ತಿ ಸ್ವಾಗತಿಸಿದರು. ರಿಸ್ವಾನ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT