ADVERTISEMENT

‘ಹಾಲಿನ ಪುಡಿ ಘಟಕ ಸ್ಥಾಪಿಸಿ...’

ಮೈಸೂರಿನಲ್ಲಿ ನಡೆದ ‘ಜನ–ಮನ’ದಲ್ಲಿ ಮುಖ್ಯಮಂತ್ರಿಗೆ ಸಲಹೆ ನೀಡಿದ ಜಿಲ್ಲೆಯ ರೈತರು

ಗಾಣಧಾಳು ಶ್ರೀಕಂಠ
Published 30 ಜೂನ್ 2015, 9:53 IST
Last Updated 30 ಜೂನ್ 2015, 9:53 IST

ಚಿತ್ರದುರ್ಗ: ‘ಹಾಲಿನ ಪೌಡ್ರು ಕಾರ್ಖಾನೆಯನ್ನು ನಮ್ಮ ರಾಜ್ಯದಲ್ಲೇ ಮಾಡ್ರಿ, ಹಾಲು ಉತ್ಪಾದನೆ ಮಾಡುವ ರೈತರಿಗಾದರೂ ಸಹಾಯವಾಗುತ್ತೆ, ದುಬಾರಿ ಹಣ ಕೊಟ್ಟು ಪೌಡ್ರು ಮಾಡ್ಸೋದಾದ್ರೂ ತಪ್ಪುತ್ತೆ, ಸರ್ಕಾರಕ್ಕೂ ದುಡ್ಡು ಉಳಿಯುತ್ತೆ...’

ಇದು ಯಾವುದೋ ಯೋಜನಾ ಆಯೋಗದ ಆಯುಕ್ತರೋ, ಹಾಲು ಮಹಾಮಂಡಳದ ಅಧಿಕಾರಿಗಳೋ ಸರ್ಕಾರಕ್ಕೆ ನೀಡಿದ ಸಲಹೆಯಲ್ಲ. ಬರದನಾಡು ಚಿತ್ರದುರ್ಗದ ಹೈನುಗಾರ ರೈತರಿಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕ ಕುಳಿತು, ಮುಲಾಜಿಲ್ಲದೇ ನೀಡಿದ ಸಲಹೆ!

ಇದೇ 27ರಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ‘ಜನ–ಮನ’ ಕಾರ್ಯಕ್ರಮದಲ್ಲಿ, ಜಿಲ್ಲೆಯ ‘ಕ್ಷೀರಧಾರಾ’ ಯೋಜನೆಯ ಪ್ರತಿನಿಧಿ ಗಳಾಗಿ ಭಾಗವಹಿಸಿದ್ದ ಬೇತೂರಿನ ನಟರಾಜ್ ಮತ್ತು ಬಸವನ ಶಿವನಕೆರೆಯ ಚಂದ್ರಪ್ಪ ಮುಖ್ಯಮಂತ್ರಿಗೆ ಹೀಗೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಜೊತೆಗೆ ಕುಳಿತು ಸಂವಾದದಲ್ಲಿ ಪಾಲ್ಗೊಂಡ ರೈತರು, ಮಹಿಳೆಯರು ತಾವು ಸಂವಾದಿಸಿದ ವಿಷಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಪೌಡರ್ ಘಟಕ ಸ್ಥಾಪಿಸಿ: ‘ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಿಸಿ ಹೈನೋದ್ಯಮಕ್ಕೆ ಉತ್ತೇಜನ ನೀಡಿದ ಮೇಲೆ ಹಾಲಿನ ಇಳುವರಿ ಹೆಚ್ಚಾಗಿದೆ. ಪರಿಣಾಮವಾಗಿ ರೈತರಿಗೆ ನೀಡುವ ಹಾಲಿನ ಬೆಲೆಯನ್ನು ಕಡಿಮೆ ಮಾಡ ಲಾಗಿದೆ. ಶಿವಮೊಗ್ಗ ಮಹಾಮಂಡಳದಲ್ಲಿ ಲೀಟರ್‌ಗೆ ₨ 1.50 ಹಾಗೂ  ತುಮಕೂರಿ ನಲ್ಲಿ ₨ 2.50 ನೀಡಲಾಗುತ್ತಿದೆ. ಇದರಿಂದ ರೈತರಿಗೆ ಹಿನ್ನಡೆಯಾಗಿದೆ’ ಎಂದು ಮುಖ್ಯಮಂತ್ರಿ ಎದುರು ರೈತರು  ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

‘ಒಂದು ಲೀಟರ್ ಹಾಲನ್ನು ಪೌಡರ್ ಮಾಡಲು ಹೊರ ರಾಜ್ಯದಲ್ಲಿ ₨ 8 ಖರ್ಚಾಗುತ್ತಿದೆ ಎಂದು ಕೇಳಿದ್ದೇವೆ. ಅದೇ ಹಾಲಿನ ಪುಡಿಯ ಘಟಕವನ್ನು ನಮ್ಮ ರಾಜ್ಯದಲ್ಲೇ ಸ್ಥಾಪಿಸಿ ಎಂದು ಸಲಹೆ ನೀಡಿದ್ದಾರೆ.

ಕಮಿಷನ್ ಹೆಚ್ಚು ಕೊಡಿ: ‘ಹೊರ ರಾಜ್ಯದ ಹಾಲು ಮಾರಾಟಕ್ಕೆ ಕಮಿಷನ್ ಹೆಚ್ಚು ಕೊಡುತ್ತಿದ್ದಾರೆ. ಹಾಗಾಗಿ, ಡೀಲರ್‌ಗಳು ಆ ಹಾಲನ್ನೇ ಹೆಚ್ಚಿಗೆ ಮಾರಾಟ ಮಾಡಲು ಆಸಕ್ತಿ ತೋರು ತ್ತಾರೆ. ಹಾಲಿನ ಪುಡಿ ಘಟಕ ಸ್ಥಾಪಿಸಿದರೆ, ಹೊರ ರಾಜ್ಯದ ಹಾಲಿಗೂ ತಡೆಯೊಡ್ಡಿ, ನಮ್ಮ ರೈತರು ಉತ್ಪಾದಿಸುವ ಹಾಲಿಗೆ ಉತ್ತಮ ಬೆಲೆ ನೀಡಬಹುದು’ ಎಂದು ರೈತರು ಮನವಿ ಮಾಡಿದ್ದಾರೆ.

‘ನಾವು ಇನ್ನು ಏನೇನೋ ಹೇಳುವು ದಿತ್ತು. ನಮ್ಮ ಊರಿಗೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ತರುವುದ ಕ್ಕಾಗಿ ₨ 50 ಖರ್ಚು ಮಾಡಬೇಕು. ಏಕೆಂದರೆ, ಬ್ಯಾಲಾಳಿನಲ್ಲಿ ನ್ಯಾಯಬೆಲೆ ಅಂಗಡಿ ಇದೆ. ಅಲ್ಲಿಗೆ ಆಟೊ ಚಾರ್ಜ್ ₨ 25, ಅಕ್ಕಿ ಮೂಟೆಗೆ ₨ 25. ಇಷ್ಟು ಕೊಟ್ಟು ಅಕ್ಕಿ ಖರೀದಿಸಬೇಕಾ ಎನ್ನಿಸುತ್ತದೆ. ಅದಕ್ಕೆ ನಮ್ಮೂರಿಗೊಂದು ನ್ಯಾಯಬೆಲೆ ಅಂಗಡಿ ಮಾಡಿಸಿ ಎಂದು ಕೇಳಬೇಕಿತ್ತು. ಆದರೆ, ನಮ್ಮ ಮಾತು ಅವರಿಗೆ ಕೇಳಿಸು ವುದು ಕಷ್ಟ ಎನ್ನಿಸಿ, ಸುಮ್ಮನಾಗಿಬಿಟ್ಟೆ’ ಎಂದು ಸಿರಿಗೆರೆ ಸಮೀಪದ ಬಸವನಶಿವನಕೆರೆಯ ರೈತ ಚಂದ್ರಪ್ಪ ನೆನಪಿಸಿಕೊಂಡರು.

ಕ್ಷೀರಧಾರಾ ಪ್ರತಿನಿಧಿಯಾಗಿ ಸಂವಾ ದದಲ್ಲಿ ಪಾಲ್ಗೊಂಡಿದ್ದ ಬೇತೂರಿನ ನಟರಾಜ್, 20 ಹಸುಗಳ ಒಡೆಯ. ನಿತ್ಯ 250 ಲೀಟರ್ ಹಾಲು ಹಾಕುತ್ತಿದ್ದಾರೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಸಮೃದ್ಧವಾಗಿ ಹೈನುಗಾರಿಕೆಯಲ್ಲಿ ತೊಡಗಿ ದ್ದಾರೆ. ಬಸವನ ಶಿವನಕೆರೆಯ ಚಂದ್ರಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜೊತೆಗೆ ರೈತ.

ಮಾಸಾಶನ ಸರಿಯಾಗಿ ಕೊಡಿ: ‘ತಿಂಗಳಿಗೆ ₨ 500 ಮಾಸಾಶನ ಅಂತ ಮುದುಕರಿಗೆ, ವಿಧವೆಯರಿಗೆ... ಮತ್ತಿತರರಿಗೆ ಸರ್ಕಾರ ಫಿಕ್ಸ್ ಮಾಡಿದೆ. ಆದರೆ, ತಿಂಗಳ ಕೊಡುವ ದುಡ್ಡನ್ನು, ಮೂರು ತಿಂಗಳಿ ಗೊಮ್ಮೆ ಕೊಟ್ಟರೆ ಹೆಂಗೆ ಮಾಡೋದು...’

‘ಮನಸ್ವಿನಿ’ ಸಾಮಾಜಿಕ ಭದ್ರತಾ ಯೋಜನೆ ಪ್ರತಿನಿಧಿಯಾಗಿ ಪಾಲ್ಗೊಂ ಡಿದ್ದ ಚಿತ್ರದುರ್ಗದ ಬುದ್ಧ ನಗರದ ಸೂರಮ್ಮ ಮುಖ್ಯಮಂತ್ರಿಗೆ ಸವಾಲು ಹಾಕುವ ರೀತಿಯಲ್ಲೇ ಪ್ರಶ್ನಿಸಿದರಂತೆ!.‘ಸರ್ಕಾರ ಮುದುಕರಿಗೆ, ವಿಧವೆ ಯರಿಗೆ, ಅಬಲೆಯರಿಗೆ ಆರ್ಥಿಕ ನೀಡು ತ್ತಿದೆ. ಆದರೆ, ಮಾಸಾಶನ ಕೇಳಿಕೊಂಡು ಅಂಚೆ ಕಚೇರಿಗೆ ಹೋದರೆ, ಖಜಾನೆಗೆ ಹೋಗಿ ಎನ್ನುತ್ತಾರೆ. ಎರಡೂ ಕಡೆಗೆ ಅಡ್ಡಾಡಿ ಸಾಕಾಗಿದೆ’ ಎಂದು ಸೂರಮ್ಮ ಅಲ್ಲೇ ದೂರಿದರು.

ಸೂರಮ್ಮ ದೂರನ್ನು ದಾಖಲಿಸಿ ಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕ ರಾಮಯ್ಯ ಅವರಿಗೆ ಸೂಚಿಸಿದರು. ‘ಖಂಡಿತಾ ಈ ವಿಷಯ ವನ್ನು ಗಮನಿಸುತ್ತೇನೆ’ ಎಂದು ಭರವಸೆ ನೀಡಿರುವುದಾಗಿ ಸೂರಮ್ಮ ‘ಪತ್ರಿಕೆ’ಗೆ ಮಾಹಿತಿ ನೀಡಿದ್ದಾರೆ.‘ಸಿ.ಎಂ ಪಕ್ಕದಲ್ಲೇ ಕುಳಿತಿದ್ದೆ. ಬಹಳ ಭಯ ಆಯ್ತು. ಇನ್ನೂ ಏನೇನೋ ಮಾತಾಡಬೇಕು, ಕುಂದುಕೊರತೆ ಹೇಳಿಕೊಳ್ಳಬೇಕು ಎನ್ನಿಸಿತ್ತು. ಆದರೆ, ಒಂದು ಕಡೆ ಭಯವಿದ್ದುದ್ದರಿಂದ ಏನೂ ಮಾತನಾಡಲಿಲ್ಲ’ ಎಂದು ಗೌರಮ್ಮ ಹೇಳಿದರು.

ಜಿಲ್ಲೆಯಿಂದ 12 ಮಂದಿ
‘ಜನ–ಮನ’ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 12 ಮಂದಿಗೆ ಮುಖ್ಯಮಂತ್ರಿ ಜತೆ ಸಂವಾದದಲ್ಲಿ ಪಾಲ್ಗೊಳ್ಳಲು ಸರ್ಕಾರ ಸೂಚಿಸಿತ್ತು. ಆದರೆ, ಕಾರಣಾಂತರಗಳಿಂದ ಇಬ್ಬರು ಗೈರಾಗಿದ್ದರು. 10 ಮಂದಿ ಕಾರ್ಯಕ್ರಮದಲ್ಲಿದ್ದರು.

ಆಯಾ ಇಲಾಖೆ ಅಧಿಕಾರಿಗಳೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ‘ಕ್ಷೀರಧಾರೆ’ಯಿಂದ ಬೇತೂರು ನಟರಾಜ್, ಬಸವನ ಶಿವನಕೆರೆ ಚಂದ್ರಪ್ಪ, ‘ಮನಸ್ವಿನಿ’ ಯಿಂದ ಚಿತ್ರದುರ್ಗ ಬುದ್ಧ ನಗರದ ಸೂರಮ್ಮ, ‘ಅನ್ನಭಾಗ್ಯ’ ಯೋಜನೆ ಯಿಂದ ಸೈಯದ್ ಸಾದಿಕ್, ಗುರಪ್ಪ, ಶಂಕ್ರಪ್ಪ, ಮಂಜುನಾಥ್, ಕೃಷಿ ಭಾಗ್ಯದಿಂದ ನಾಗೇಂದ್ರಪ್ಪ, ಗಂಗಾಧರಪ್ಪ, ‘ವಿದ್ಯಾಸಿರಿ’ಯಿಂದ ಹಿರಿಯೂರಿನ ಲಕ್ಷ್ಮಿದೇವಿ ಪಾಲ್ಗೊಂಡಿದ್ದರು.ಓಬಕ್ಕ ಹಾಗೂ ಪ್ರಿಯಾಂಕಾ ಗೈರು ಹಾಜರಾಗಿದ್ದರು ಎಂದು ವಾರ್ತಾಧಿಕಾರಿ ಧನಂಜಯ ತಿಳಿಸಿದರು.

ಹಾಲಿನ ಪುಡಿಯ ಘಟಕವನ್ನು ನಮ್ಮ ರಾಜ್ಯದಲ್ಲೇ ಸ್ಥಾಪಿಸಿ. ಘಟಕದಿಂದ ದೊರೆಯುವ ಲಾಭವನ್ನು ಹಾಲು ಉತ್ಪಾದಕರಿಗೆ ಹಂಚಿ.ಮುಖ್ಯಮಂತ್ರಿಗೆ ರೈತರು ನೀಡಿದ ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.