ADVERTISEMENT

10 ಗೋಶಾಲೆಗಳಲ್ಲಿ 20 ಸಾವಿರ ರಾಸುಗಳು!

ನಾಲ್ಕೈದು ಗೋಶಾಲೆ ಆರಂಭ ಸಾಧ್ಯತೆ

ಗಾಣಧಾಳು ಶ್ರೀಕಂಠ
Published 17 ಜನವರಿ 2017, 7:13 IST
Last Updated 17 ಜನವರಿ 2017, 7:13 IST
10 ಗೋಶಾಲೆಗಳಲ್ಲಿ 20 ಸಾವಿರ ರಾಸುಗಳು!
10 ಗೋಶಾಲೆಗಳಲ್ಲಿ 20 ಸಾವಿರ ರಾಸುಗಳು!   

ಚಿತ್ರದುರ್ಗ: ಜಿಲ್ಲೆಯಲ್ಲಿ ಆರಂಭಿಸಿರುವ 10 ಗೋಶಾಲೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ರಾಸುಗಳು ಆಶ್ರಯಪಡೆದಿವೆ. ಇನ್ನೂ ಏಳೆಂಟು ಸಾವಿರ ರಾಸುಗಳಿಗಾಗಿ ನಾಲ್ಕೈದು ಗೋಶಾಲೆಗಳನ್ನು ಆರಂಭಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ!

ಸಾಮಾನ್ಯವಾಗಿ ಬೇಸಿಗೆಯಲ್ಲಿ ಗೋಶಾಲೆಗಳನ್ನು ಆರಂಭಿಸಲು ಒತ್ತಾಯ ಕೇಳಿಬರುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲೇ ಗೋಶಾಲೆ ಆರಂಭಿಸಲು ಕೂಗು ಕೇಳಿಬಂತು. ಚಳಿಗಾಲ ಆರಂಭಕ್ಕೆ ಮುನ್ನ ನಾಲ್ಕೈದು ಗೋಶಾಲೆಗಳು ಆರಂಭವಾದವು.

ಈಗ ಅವುಗಳ ಸಂಖ್ಯೆ 10ಕ್ಕೆ ಏರಿದೆ. ಆದರೂ, ತುರ್ತಾಗಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ (ತುರವನೂರು) ಹಾಗೂ ಹೊಸದುರ್ಗ ತಾಲ್ಲೂಕುಗಳಲ್ಲಿ ಐದಾರು ಗೋಶಾಲೆ ಆರಂಭಿಸಲು ರೈತರು, ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ.

ಪ್ರಸ್ತುತ ಹಿರಿಯೂರು ತಾಲ್ಲೂಕಿನಲ್ಲಿ ಎರಡು, ಚಳ್ಳಕೆರೆ ತಾಲ್ಲೂಕಿನಲ್ಲಿ ನಾಲ್ಕು, ಮೊಳಕಾಲ್ಮುರಿನಲ್ಲಿ ಮೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರಿನಲ್ಲಿ ಒಂದು ಗೋಶಾಲೆ ಚಾಲ್ತಿಯಲ್ಲಿದೆ.

ಪ್ರತಿ ಗೋಶಾಲೆಗೆ ಕನಿಷ್ಠ ಆರೇಳು ಕಿ.ಮೀ ದೂರದಿಂದ ರೈತರು ರಾಸುಗಳನ್ನು ಹೊಡೆದು ತರುತ್ತಾರೆ. ದೂರದ ಗೋಶಾಲೆಗಳಿಗೆ ರಾಸುಗಳನ್ನು ಕರೆದೊಯ್ಯಲು ಹಿಂದೇಟು ಹಾಕುವ ರೈತರೂ ಇದ್ದಾರೆ.

‘5 ಕೆಜಿ ಮೇವಿಗಾಗಿ, ಒಬ್ಬ ವ್ಯಕ್ತಿ ಇಡೀ ದಿನ ದುಡಿಮೆ ಬಿಟ್ಟು, 8ರಿಂದ 10 ಕಿ.ಮೀ ದೂರದ ಗೋಶಾಲೆಗೆ ದನಗಳನ್ನು ಹೊಡೆದ­ಕೊಂಡು ಬರುವುದು ಕಷ್ಟ. ಅದರ ಬದಲು ಅಷ್ಟೇ ಮೇವನ್ನು ಗ್ರಾಮದ ರೈತರಿಗೆ ನೇರವಾಗಿ ತಲುಪಿಸಿದರೆ ಒಳ್ಳೆಯದಲ್ಲವೇ’ ಎಂದು ಆರ್‌.ಜೆ.ಹಳ್ಳಿ ರೈತ ಮಲ್ಲಿಕಾರ್ಜುನ್ ಪ್ರಶ್ನಿಸುತ್ತಾರೆ. ಹೀಗಿದ್ದರೂ ಸದ್ಯ ತೆರೆದಿರುವ ಗೋಶಾಲೆಗಳೆಲ್ಲ ಭರ್ತಿಯಾಗಿವೆ.

ಸದ್ಯ ನಾಲ್ಕು ಮೇವು ಬ್ಯಾಂಕ್‌:  ಹತ್ತು ಗೋಶಾಲೆಗಳಲ್ಲಿ ಉಚಿತ ಮೇವು, ನೀರು ವ್ಯವಸ್ಥೆ ಮಾಡಿದ್ದರೆ, ಮತ್ತೊಂದೆಡೆ ‘ಮೇವು ಬ್ಯಾಂಕ್‌’ಗಳನ್ನು ಆರಂಭಿಸಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ನಾಲ್ಕು ಮೇವು ಬ್ಯಾಂಕ್‌ಗಳು ಆರಂಭವಾಗಿವೆ.

ಪ್ರತಿ ಬ್ಯಾಂಕ್‌ನಲ್ಲಿ 15 ಟನ್ ಮೇವಿದೆ. ರೈತರಿಗೆ ಶೇ 50ರ(ಅರ್ಧ ಬೆಲೆ) ಬೆಲೆಯಲ್ಲಿ ಮೇವು ಪೂರೈಕೆ ಮಾಡಲಾಗುತ್ತಿದೆ. ಅಕ್ರಮ ಮೇವು ದಾಸ್ತಾನು ತಡೆಯಲು ಮೇವು ಖರೀದಿದಾರರು ಜಾನುವಾರು­ ದೃಢೀಕರಣ ಪತ್ರ ನೀಡಲು ಸೂಚಿಸಲಾಗಿದೆ. ಹಾಗೆಯೇ ವಾರಕ್ಕೆ ಒಂದು ಟನ್ ಮೇವು ಖರೀದಿಸಲು ಮಿತಿ ಹಾಕಲಾಗಿದೆ ಎಂದು ನಿಯಮ ನಿಬಂಧನೆಗಳನ್ನು ಪ್ರಸನ್ನ ವಿವರಿಸುತ್ತಾರೆ.

ಪರ್ಯಾಯ ಮೇವು ಬೆಳೆಸುವ ಪ್ರಯತ್ನ
ಬೇಸಿಗೆಯಲ್ಲಿ ಉಂಟಾಗುವ ಮೇವಿನ ಸಮಸ್ಯೆ ಪರಿಹಾರಕ್ಕಾಗಿ ಪರ್ಯಾಯ ಮೇವಿನ ಬೆಳೆ ಬೆಳೆಸುವ ಚಿಂತನೆ ನಡೆದಿದೆ. ಪಶುವೈದ್ಯಕೀಯ ಇಲಾಖೆ ಯವರು ಗಿನಿ ಗ್ರಾಸ್, ನೇಪಿಯರ್‌ ನಂತಹ ಎರಡು ತಿಂಗಳಲ್ಲಿ ಕೊಯ್ಲಿಗೆ ಬರುವ ಬಹುವಾರ್ಷಿಕ ಮೇವಿನ ಬೆಳೆಯನ್ನು ಕೆರೆ ಅಂಗಳದಲ್ಲಿ ಬೆಳೆಸುವ ಪ್ರಯತ್ನದಲ್ಲಿದ್ದಾರೆ. ‘ಚಳ್ಳಕೆರೆ ತಾಲ್ಲೂಕಿನ ರಾಣಿ ಕೆರೆಯಲ್ಲಿ ಈ ಪ್ರಯತ್ನ ನಡೆಸುವ ಚಿಂತನೆ ಮಾಡಿದ್ದೇವೆ. ಕೃಷಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಪ್ರಸನ್ನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೇವಿಗೆ ಕೊರತೆಯಿಲ್ಲ
ಬರಗಾಲದ ಹಿನ್ನೆಲೆಯಲ್ಲಿ ಮೇವು ಉತ್ಪಾದನೆ ಕಡಿಮೆಯಾಗಿದೆ. ಆದರೆ ಎಲ್ಲೆಲ್ಲಿ ಮೇವು ಲಭ್ಯವಿದೆಯೋ ಅಂಥ ಕಡೆಗಳಿಂದ ಮೇವು ತರಿಸಿ ದಾಸ್ತಾನು ಮಾಡಲಾಗಿದೆ. ಸದ್ಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಕಾವಲಲ್ಲಿ 200 ಟ್ರ್ಯಾಕ್ಟರ್‌ ಮೇವಿದೆ. ಚಿಕ್ಕಜಾಜೂರು ಎಪಿಎಂಸಿಯಲ್ಲೂ ದಾಸ್ತಾನು ಮಾಡಲಾಗಿದೆ.ಒಂದು ದನಕ್ಕೆ ಪ್ರತಿ ದಿನ 5 ಕೆ.ಜಿ ಮೇವು ಪೂರೈಸಲಾಗುತ್ತದೆ.

ಗೋಶಾಲೆಯಲ್ಲಿ ಒಂದು ಸಾವಿರ ಜಾನುವಾರು­ಗಳಿದ್ದರೆ 5 ಟನ್ ಮೇವು ಬೇಕು. ಸದ್ಯ 10 ಗೋಶಾಲೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ರಾಸುಗಳಿವೆ. ನಿತ್ಯ ಕನಿಷ್ಠ 200 ಟನ್ ಮೇವು ಬೇಕಾಗುತ್ತದೆ’ ಎಂದು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಪ್ರಸನ್ನ ಅಂಕಿ ಅಂಶ ನೀಡುತ್ತಾರೆ. ಮೇವು ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು, ಮೇವು ಖಾಲಿಯಾದಂತೆ, ಗೋಶಾಲೆಗಳಿಗೆ ಟೆಂಡರ್‌ ದಾರರು ಮೇವು ಪೂರೈಸುತ್ತಾರೆ’ ಎಂದರು. ಗೋಶಾಲೆಗೆ ಅಕ್ಕಪಕ್ಕದ ಸಣ್ಣ ಹಳ್ಳಿಗಳಲ್ಲಿ ಆರಂಭಿಸುವ ಬಯಲು ಗೋಶಾಲೆಗಳನ್ನು ಲಿಂಕ್ ಮಾಡುತ್ತಿದ್ದಾರೆ.

ನಾಯಕನ­ಹಟ್ಟಿ ಸಮೀಪದ ಮಲ್ಲೂರಹಳ್ಳಿಯಲ್ಲಿ ಗೋಶಾಲೆ ತೆರೆದಿದ್ದು, ಅದನ್ನು ದೊಡ್ಡಉಳ್ಳಾರ್ತಿ ಗೋಶಾಲೆಗೆ ಲಿಂಕ್ ಮಾಡಲಾ­ಗಿದೆ. ಆ ಗೋಶಾಲೆ ಹೆಸರಲ್ಲೇ ಮೇವು ಪೂರೈಸಲಾಗುತ್ತಿದೆ’ ಎಂದು ಪ್ರಸನ್ನ ವಿವರಣೆ ನೀಡುತ್ತಾರೆ.  ತುರುವನೂರು ಸಮೀಪದ ಕೂನಬೇವು, ಬೆಳಘಟ್ಟ ಹೊಸದುರ್ಗ ತಾಲ್ಲೂಕು ಮಾಡದಕೆರೆ, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕು ಸೇರಿ 5ರಿಂದ 6 ಗೋಶಾಲೆಗಳು ಬೇಕು ಎಂದು ಜನಪ್ರತಿನಿಧಿಗಳು, ರೈತರು ಒತ್ತಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.  ಹೊಸ ಗೋಶಾಲೆ ಆರಂಭಿಸಲು ತಾಲ್ಲೂಕು ಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್‌ ಫೋರ್ಸ್ ಸಮಿತಿ ನಿರ್ಧಾರ ಕೈಗೊಳ್ಳಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.