ADVERTISEMENT

13 ವರ್ಷ ಕಳೆದರೂ ಮುಗಿಯದ ಕಾಮಗಾರಿ

ಹಿರಿಯೂರಿನಉಡುವಳ್ಳಿ ಕೆರೆಗೆ ಪೂರಕ ನಾಲೆ; ಹಣ ಪೂರೈಕೆಯಾಗದೆ ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 31 ಮೇ 2016, 10:21 IST
Last Updated 31 ಮೇ 2016, 10:21 IST
ಹಿರಿಯೂರು ತಾಲ್ಲೂಕಿನ ಕತ್ತೆಹೊಳೆ ಕೆರೆಯ ದೃಶ್ಯ
ಹಿರಿಯೂರು ತಾಲ್ಲೂಕಿನ ಕತ್ತೆಹೊಳೆ ಕೆರೆಯ ದೃಶ್ಯ   

ಹಿರಿಯೂರು: ತಾಲ್ಲೂಕಿನ ಉಡುವಳ್ಳಿ ಕೆರೆಗೆ ಕತ್ತೆಹೊಳೆಯಿಂದ ಸುಮಾರು ₹ 2 ಕೋಟಿ ವೆಚ್ಚದ ಪೂರಕ ನಾಲೆ ನಿರ್ಮಾಣ ಕಾಮಗಾರಿಗೆ 2003 ಜೂನ್ 16ರಂದು ಆಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಸೌಭಾಗ್ಯ ಬಸವರಾಜನ್ ಗುದ್ದಲಿ ಪೂಜೆ ನೆರವೇರಿಸಿದ್ದರು. 13 ವರ್ಷಗಳ ನಂತರ ಅವರಿಗೆ ಮತ್ತೊಮ್ಮೆ ಅಧ್ಯಕ್ಷೆಯಾಗುವ ಭಾಗ್ಯ ಒಲಿದಿದೆ. ಆದರೆ, ಪೂರಕ ನಾಲೆ ಕಾಮಗಾರಿ  ಪೂರ್ಣಗೊಳ್ಳುವ ಭಾಗ್ಯ ಬಂದಿಲ್ಲ!

1975ರಲ್ಲಿ ತಾಲ್ಲೂಕಿನ ಹಾಲು ಮಾದೇನಹಳ್ಳಿ ಸಮೀಪವಿರುವ ಕತ್ತೆಹೊಳೆ ಎಂಬಲ್ಲಿ ನಿರ್ಮಿಸಿರುವ ಸಣ್ಣಕೆರೆಯಿಂದ ಉಡುವಳ್ಳಿ ಕೆರೆಗೆ ಪೂರಕ ನಾಲೆ ಕಾಮಗಾರಿಯನ್ನು ಆರಂಭದಲ್ಲಿ ಬೃಹತ್ ಯಂತ್ರಗಳ ಮೂಲಕ ನಡೆಸಲಾಗಿತ್ತು. ಇದನ್ನು ಕಂಡ ಸ್ಥಳೀಯರು ಒಂದೇ ವರ್ಷದಲ್ಲಿ ಉಡುವಳ್ಳಿ ಕೆರೆ ಭರ್ತಿಯಾಗುತ್ತದೆ ಎಂದು ಊಹಿಸಿದ್ದರು.   ಸೋಮೇ ರಹಳ್ಳಿ ತಾಂಡಾ, ಹುಲು ಗಲಕುಂಟೆ, ಪರಮೇನಹಳ್ಳಿ, ಚಳ ಮಡು, ಗಾಂಧೀನಗರ, ಇದ್ದಲ ನಾಗೇನಹಳ್ಳಿ  ಜಮೀನುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಕನಸು ಕಂಡಿದ್ದರು.

1994ರಲ್ಲಿ ಯೋಜನೆಯ ರೂಪುರೇಷೆ: ಉಡುವಳ್ಳಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯದಿಂದ 1994ರಲ್ಲಿ  ಪೂರಕನಾಲೆ ಯೋಜನೆಯ ರೂಪು ರೇಷೆ ಸಿದ್ಧಗೊಂಡಿತ್ತು.  ಅರಣ್ಯ ಇಲಾಖೆಯಲ್ಲಿ ನಾಲೆ ಹಾದು ಹೋಗು ತ್ತಿದ್ದ ಕಾರಣ ಕೇಂದ್ರದ ನಿರಾಕ್ಷೇಪಣಾ ಪತ್ರ ದೊರೆಯುವಲ್ಲಿ ವಿಳಂಬವಾಗಿತ್ತು. ಜನಪ್ರತಿನಿಧಿಗಳ ಮೇಲೆ ಸ್ಥಳೀಯರ ಒತ್ತಡ ಹೆಚ್ಚಿದ್ದರಿಂದ  1999ರಲ್ಲಿ ಯೋಜನೆಯ ಕಡತಕ್ಕೆ ಮತ್ತೆ ಜೀವ ಬಂದಿತ್ತು. ಸಂಬಂಧಿಸಿದ ಎಲ್ಲಾ ಇಲಾಖೆಗಳ ಅನುಮೋದನೆ ಪಡೆದು ₹ 2 ಕೋಟಿ ಹಣ ಬಿಡುಗಡೆಯಾಗಿ 2003 ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತು. ಒಟ್ಟು 7.5 ಕಿ.ಮೀ. ನಾಲೆ ನಿರ್ಮಿಸುವ ಕಡೆ 5.5 ಕಿ.ಮೀ. ನಾಲೆ ನಿರ್ಮಿಸಿದ ನಂತರ ಸ್ಥಗಿತಗೊಂಡ ಕಾಮಗಾರಿ ಮತ್ತೆ ಆರಂಭ ವಾಗಲೇ ಇಲ್ಲ ಎಂದು ಅಚ್ಚುಕಟ್ಟು ಪ್ರದೇಶದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಬೃಹತ್ ಗಾತ್ರದ ಆಧುನಿಕ ಯಂತ್ರ ಬಳಸಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸದ ಕಾರಣ ಕಾಮಗಾರಿಗೆ ಸಂಪೂರ್ಣ ಗ್ರಹಣ ಹಿಡಿಯಿತು. ಇದಾದ ಮೇಲೆ ₹ 2 ಕೋಟಿ ವೆಚ್ಚದ ಕಾಮಗಾರಿಗೆ ₹ 4 ಕೋಟಿ ಬೇಕಾಗುತ್ತದೆ ಎಂದು ಪರಿಷ್ಕೃತ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ 11ನೇ ಹಣಕಾಸು ಆಯೋಗಕ್ಕೆ ವರದಿ ಸಲ್ಲಿಸಿ, ಹಣವೂ ಮಂಜೂರಾಗಿತ್ತು. ಅದೇ ವೇಳೆಗೆ ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ನಾಲೆ ಕಾಮಗಾರಿ ಮತ್ತೊಮ್ಮೆ ನನೆಗುದಿಗೆ ಬಿದ್ದಿತು ಎಂದು ಗ್ರಾಮಸ್ಥರು ದೂರುತ್ತಾರೆ.

ಆರೇಳು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಜತೆಗೆ ಕನಿಷ್ಠ  800 ಎಕರೆ ಪ್ರದೇಶಕ್ಕೆ ನೀರುಣಿಸಬಹುದಾದ ಈ ಯೋಜನೆಯನ್ನು 2015ರ ಒಳಗೆ ಪೂರ್ಣಗೊಳಿಸುವುದಾಗಿ ಶಾಸಕ ಡಿ. ಸುಧಾಕರ್ ಭರವಸೆ ನೀಡಿದ್ದರು.

‘ಶಾಸಕರು ಹೇಳಿದ್ದ ಅವಧಿಯೂ ಮುಗಿದು ಮತ್ತೆ ಒಂದೂವರೆ ವರ್ಷ ಕಳೆದಿದೆ. ಈಗ ಕಾಮಗಾರಿ ಕುರಿತು  ಟೆಂಡರ್ ಪ್ರಕಟಣೆ ಆಗಿದೆ. ಈಗಲಾದರೂ ಕಾಮಗಾರಿ ವೇಗ ಪಡೆದು ಶಾಸಕರ ನೇತೃತ್ವದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದ ಸೌಭಾಗ್ಯ ಬಸವರಾಜನ್ ಅವರ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳ್ಳುವುದನ್ನು ನೋಡು ತ್ತೇವೋ ಇಲ್ಲವೋ?’ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಸಂಶಯ ವ್ಯಕ್ತಪಡಿಸುತ್ತಾರೆ.

‘ಪೂರಕ ನಾಲೆ ನಿರ್ಮಾಣಕ್ಕೆ ಪರಿಷ್ಕೃತ ಅಂದಾಜಿನಂತೆ ₹ 7.5 ಕೋಟಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಆರ್ಥಿಕ ಇಲಾಖೆಯ ಅನುಮೋದನೆಯೂ ದೊರೆತಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವುದೇ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಉಡುವಳ್ಳಿ ಕೆರೆಯಲ್ಲಿ ಕನಿಷ್ಠ ಐದಾರು ಅಡಿ ಹೂಳು ತುಂಬಿದ್ದು, ಹಿನ್ನೀರು ಪ್ರದೇಶದಲ್ಲಿ ಬಳ್ಳಾರಿ ಜಾಲಿ ಬೆಳೆದಿದೆ. ನಾಲೆ ಕಾಮಗಾರಿ ಮುಗಿಯುವುದರ ಒಳಗೆ ಹೂಳು, ಮುಳ್ಳು ತೆಗೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಕಾಮಗಾರಿ ಮಾಹಿತಿ
* ಕತ್ತೆಹೊಳೆ ಕೆರೆ ನಿರ್ಮಾಣಗೊಂಡಿದ್ದು 1975 ರಲ್ಲಿ.  
* 1994 ರಲ್ಲಿ ಉಡುವಳ್ಳಿ ಕೆರೆ ಪೂರಕ ನಾಲೆಗೆ ರೂಪುರೇಷೆ ಸಿದ್ಧ.  
* 1999 ರಲ್ಲಿ ಕಾಮಗಾರಿಗೆ ಎರಡನೇ ಬಾರಿ ಅನುಮೋದನೆ.
* 2003ರ ಜೂನ್ 6 ರಂದು ಸೌಭಾಗ್ಯ ಬಸವರಾಜನ್ ಅವರಿಂದ ಗುದ್ದಲಿ ಪೂಜೆ.
*  ಅಂದು ಕಾಮಗಾರಿಗೆ ₹ 2 ಕೋಟಿ, ಈಗ ₹ 7.5 ಕೋಟಿ.
*  ಕೆರೆಯ ಹೂಳು ತೆಗೆಸಲು ಗ್ರಾಮಸ್ಥರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.