ADVERTISEMENT

₹ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಚಿಕ್ಕಜಾಜೂರು ಸಮೀಪದ ತಣಿಗೆಹಳ್ಳಿಯಲ್ಲಿ ಸಚಿವ ಆಂಜನೇಯ ಗ್ರಾಮ ವಾಸ್ತವ್ಯ ನಾಳೆ

ಜೆ.ತಿಮ್ಮಪ್ಪ
Published 24 ಜೂನ್ 2017, 5:31 IST
Last Updated 24 ಜೂನ್ 2017, 5:31 IST

ಚಿಕ್ಕಜಾಜೂರು:  ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಸಮೀಪದ ತಣಿಗೆಹಳ್ಳಿಯಲ್ಲಿ ಜೂನ್‌ 25ರಂದು ಗ್ರಾಮ ವಾಸ್ತವ್ಯ ಹೂಡ ಲಿದ್ದು, ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದರು.

ಸಚಿವರು ಉಳಿದುಕೊಳ್ಳುವ ಮನೆ, ಕಾರ್ಯಕ್ರಮ ನಡೆಯುವ ಸ್ಥಳ, ಗ್ರಾಮದ ಸ್ಥಿತಿ–ಗತಿಗಳ ಬಗ್ಗೆ ಚರ್ಚಿಸಿದರು.

ಕಾರ್ಯಕ್ರಮದ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ‘25ರಂದು ರಾತ್ರಿ ಆಂಜನೇಯ ಅವರು ತಣಿಗೆಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು, ಗ್ರಾಮಸ್ಥ ರೊಂದಿಗೆ ಚರ್ಚಿಸಲಿದ್ದಾರೆ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗು ತ್ತಿದ್ದು, ಒಟ್ಟು ₹ 3 ಕೋಟಿ ಹಣ ಬಿಡು ಗಡೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಹಿರೇಕಂದವಾಡಿಯಿಂದ ತಣಿಗೆಹಳ್ಳಿ ಗ್ರಾಮಕ್ಕೆ ಡಾಂಬರ್‌ ರಸ್ತೆ, ಆದರ್ಶ ಗ್ರಾಮ ಯೋಜನೆಯಡಿ ₹ 40 ಲಕ್ಷ, ಪರಿಶಿಷ್ಟ ಜಾತಿ, ಪಂಗಡದ ಯೋಜನೆ ಯಡಿ ₹ 60 ಲಕ್ಷ, ಸೇವಾಲಾಲ್‌ ಸಮುದಾಯ ಭವನ ನಿರ್ಮಾಣಕ್ಕೆ ₹ 12.5 ಲಕ್ಷ, ಗ್ರಾಮದ ಯುವಕರಿಗೆ ಕ್ರೀಡಾ ಸಾಮಗ್ರಿ, ಗ್ರಾಮದ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯ ಧನ, 100 ಫಲಾನುಭವಿಗಳಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡಲಿದ್ದಾರೆ. ಪರಿಶಿಷ್ಟ ಜಾತಿಯ 15 ಜನರಿಗೆ, ಪರಿಶಿಷ್ಟ ಪಂಗಡದ 6 ಮಂದಿಗೆ ಮತ್ತು ಇತರೆ ಜಾತಿಯ ಒಬ್ಬ ಫಲಾನುಭವಿಗೆ ಹಕ್ಕುಪತ್ರ ವಿತರಿಸಲಿದ್ದಾರೆ’ ಎಂದು ಹೇಳಿದರು.

ಬಿ.ದುರ್ಗ: ಜೂನ್‌ 25ರಂದು ಬೆಳಿಗ್ಗೆ ಬಿ.ದುರ್ಗ ಗ್ರಾಮದಲ್ಲಿ ಪರಿಶಿಷ್ಟಜಾತಿ, ಪಂಗಡದ ಯೋಜನೆಯಡಿ ₹ 50 ಲಕ್ಷದ ಕಾಮಗಾರಿ, ₹ 12.5 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ, ಬಸ್‌ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.

ನಂತರ ಕಲ್ಲವ್ವನಾಗತಿಹಳ್ಳಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಯೋಜನೆಯಡಿ ₹ 30 ಲಕ್ಷ ವೆಚ್ಚದ ಕಾಮಗಾರಿ, ಶುದ್ಧ ನೀರಿನ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಿರೇಕಂದವಾಡಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ, ಪರಿಶಿಷ್ಟ ಜಾತಿ, ಪಂಗಡದ ಯೋಜನೆಯಡಿ ₹ 40 ಲಕ್ಷದ ಕಾಮಗಾರಿ ಹಾಗೂ ₹ 12.5 ಲಕ್ಷ ವೆಚ್ಚದಲ್ಲಿ ಬಸವ ಭವನ ಮತ್ತು ಬಸ್‌ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿ ಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಾಯಸ, ಮುದ್ದೆ ಊಟ: ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನಕ್ಕೆ ಪಾಯಸ, ಅನ್ನ, ಸಾಂಬಾರು, ಎರಡು ಬಗೆಯ ಪಲ್ಯ, ಉಪ್ಪಿನಕಾಯಿ ಹಾಗೂ ಸಾರ್ವಜನಿಕ ಸಭೆ ಮುಗಿದ ನಂತರ ರಾತ್ರಿಯ ಊಟಕ್ಕೆ ರಾಗಿ ಮುದ್ದೆ, ಅನ್ನ ಸಾಂಬಾರ್‌ ಮಾಡಿಸುವಂತೆ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ತಹಶೀಲ್ದಾರ್‌ ಸೋಮಶೇಖರಪ್ಪ, ಉಪತಹಶೀಲ್ದಾರ್‌ ಸಿದ್ದಪ್ಪ, ಪಿಡಿಒ ಶಶಿಕುಮಾರ್‌, ಕಾಂಗ್ರೆಸ್‌ ಮುಖಂಡ ರಾದ ಬಿ.ದುರ್ಗ ಎಚ್‌.ಟಿ. ಹನುಮಂತಪ್ಪ, ಪಾಡಿಗಟ್ಟೆ ಸುರೇಶ್‌, ಮಹಾಂತೇಶ್‌, ವೆಂಕಟೇಶ್‌, ಜಿಲ್ಲಾ ಪಂಚಾಯ್ತಿ ಹಾಗೂ ಲೋಕೋಪ ಯೋಗಿ ಇಲಾಖೆ ಎಂಜಿನಿಯರ್‌ ಹಾಜರಿದ್ದರು.
***

ಅಭಿವೃದ್ಧಿ ನಿರೀಕ್ಷೆಯಲ್ಲಿ ಗ್ರಾಮಸ್ಥರು
ಚಿಕ್ಕಜಾಜೂರು: 
ಸಚಿವರು ಗ್ರಾಮ ವಾಸ್ತವ್ಯ ಮಾಡುತ್ತಾರೆ ಎಂದಾಕ್ಷಣ ಆ ಜನ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಕನಸು ಕಾಣುತ್ತಾರೆ.

ತಣಿಗೆಹಳ್ಳಿ ಗ್ರಾಮದ ಟಿ.ಆರ್‌. ಈಶ್ವರನಾಯ್ಕ ಅವರ ಮನೆಯಲ್ಲಿ ಆಂಜನೇಯ ಅವರು ಇದೇ ಭಾನುವಾರ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಚರಂಡಿ, ರಸ್ತೆ ನಿರ್ಮಾಣ, ಸಮುದಾಯ ಭವನ, ದೇವಸ್ಥಾನ, ಕುಡಿಯುವ ನೀರಿನ ಪೂರೈಕೆ, ಸಾಗುವಳಿ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಲು ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.

ಕೃಷಿ ಮುಖ್ಯ ಕಸುಬು: ಗ್ರಾಮದಲ್ಲಿ ಶೇ 90ರಷ್ಟು ಬಂಜಾರರಿದ್ದಾರೆ. ಒಟ್ಟು 390 ಮನೆಗಳ ಪೈಕಿ 340 ಬಂಜಾರ ಕುಟುಂಬಗಳಿವೆ. 2500ಕ್ಕೂ ಹೆಚ್ಚು ಜನ ಸಂಖ್ಯೆ ಇದೆ. 35 ಪರಿಶಿಷ್ಟ ಪಂಗಡದ ಕುಟುಂಬ, ಐದು ಪರಿಶಿಷ್ಟ ಜಾತಿ, ಮೂರು ಮಡಿವಾಳ, ಎರಡು ಕಮ್ಮಾರ ಮತ್ತು ಒಂದು ಲಿಂಗಾಯಿತ ಕುಟುಂಬ ಸಾಮರಸ್ಯದಿಂದ ಬದುಕು ನಡೆಸುತ್ತಿವೆ. ಕೃಷಿ ಜನರ ಮುಖ್ಯ ಕಸುಬು. ಕೆಲವು ಕೃಷಿ ಕಾರ್ಮಿಕರಾಗಿ, ಮತ್ತೆ ಕೆಲವರು ಸಮೀಪದ ಮೈನಿಂಗ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ.

ಶಿಕ್ಷಣಕ್ಕೆ ಆದ್ಯತೆ: ಇಲ್ಲಿನ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಬಂಜಾರ ತಾಂಡದಲ್ಲಿ ಐವರು ಎಂಜಿನಿಯರಿಂಗ್‌ ಮುಗಿಸಿ ಉದ್ಯೋಗದಲ್ಲಿದ್ದಾರೆ. ಒಬ್ಬ ಎಂ.ಟೆಕ್‌ ಪದವಿ ಪಡೆದು ನೌಕರಿ ಮಾಡುತ್ತಿದ್ದಾರೆ. 10 ಜನ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 12 ಜನ ಬಿಇಡಿ, ಡಿಇಡಿ ಶಿಕ್ಷಣ ಮುಗಿಸಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿದ್ದಾರೆ.

ಸುಮಾರು 40 ಜನ ಪದವೀಧರರಾಗಿದ್ದಾರೆ. ಸದ್ಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಹಾಗೂ ಡಿಪ್ಲೊಮಾ ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಮುಗಿಸಿದವರು ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗದಲ್ಲಿ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಟಿ.ಎಂ. ಕುಮಾರಸ್ವಾಮಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.