ADVERTISEMENT

40 ವರ್ಷಗಳ ಬಳಿಕ ತುಂಬುತ್ತಿದೆ ಗೂಡನೂರನಳ್ಳಿ ಕೆರೆ: ರೈತರಿಗೆ ಸಂತಸ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:58 IST
Last Updated 10 ಸೆಪ್ಟೆಂಬರ್ 2017, 8:58 IST
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಗೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಗೋಶಾಲೆ ಜಲಾವೃತವಾಗಿದ್ದು, ರೈತರು ಜಾನುವಾರು ಸಾಗಿಸಲು ಹರಸಾಹಸ ಪಡುತ್ತಿರುವುದು.
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಗೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಗೋಶಾಲೆ ಜಲಾವೃತವಾಗಿದ್ದು, ರೈತರು ಜಾನುವಾರು ಸಾಗಿಸಲು ಹರಸಾಹಸ ಪಡುತ್ತಿರುವುದು.   

ಹಿರಿಯೂರು: ಹಲವು ದಿನಗಳ ನಂತರ ತಾಲ್ಲೂಕಿಗೆ ವರುಣನ ಕೃಪೆಯಾಗಿದೆ. ಈಶ್ವರಗೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ 121 ಮಿ.ಮೀ ದಾಖಲೆ ಮಳೆಯಾಗಿದೆ. ಇದು ಹಲವು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಚೆಕ್ ಡ್ಯಾಂ, ಒಡ್ಡು ಒಡೆದಿರುವ ಕೆಲವು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಹಿರಿಯೂರಿನಲ್ಲಿ 45.2 ಮಿ.ಮೀ, ಸೂಗೂರಿನಲ್ಲಿ 28.3, ಇಕ್ಕನೂರಿನಲ್ಲಿ 25.8 ಮಿ.ಮೀ, ಬಬ್ಬೂರಿನಲ್ಲಿ 20 ಮಿ.ಮೀ ಹಾಗೂ ಜವನಗೊಂಡನಹಳ್ಳಿಯಲ್ಲಿ 14 ಮಿ.ಮೀ ಮಳೆಯಾಗಿದೆ. ಜವನಗೊಂಡನಹಳ್ಳಿ ಹೋಬಳಿ ಹೊರತು ಪಡಿಸಿದರೆ ತಾಲ್ಲೂಕಿನ ಉಳಿದ ಕಡೆ ಚೆಕ್ ಡ್ಯಾಂಗಳು, ಒಡ್ಡುಗಳು ತುಂಬಿದೆ.

ಕೆರೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಬಂದಿದೆ. ಒಂದೆರಡು ದಿನ ಮಳೆ ಮುಂದುವರಿದರೆ ಹಲವು ಕೆರೆಗಳು ಭರ್ತಿಯಾಗುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ವೆಂಕಟೇಶಯ್ಯ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಯರಬಳ್ಳಿ ಸಮೀಪ ದೊಡ್ಡ ಸೇತುವೆ ಹಳ್ಳ ಶುಕ್ರವಾರ ರಾತ್ರಿಯಿಂದ ತುಂಬಿ ಹರಿಯುತ್ತಿರುವುದರಿಂದ ಗೂಡನೂರನಹಳ್ಳಿಯ ಹೊಸ ಮತ್ತು ಹಳೆಯ ಕೆರೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಎರಡೂ ಕೆರೆಗಳು ತುಂಬುವ ಸಾಧ್ಯತೆ ಇದೆ. 40 ವರ್ಷಗಳ ನಂತರ ಈ ಕೆರೆಗಳು ಭರ್ತಿಯಾಗುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ ಎಂದು ಯರಬಳ್ಳಿ ರಾಜಣ್ಣ ತಿಳಿಸಿದ್ದಾರೆ.

ಕಂದಿಕೆರೆ ಗ್ರಾಮದ ಕೆರೆ ಅರ್ಧ ಭರ್ತಿಯಾಗಿದ್ದು, ಒಂದೆರಡು ದಿನ ಮಳೆ ಮುಂದುವರಿದರೆ ಭರ್ತಿಯಾಗುವ ಸಂಭವ ಇದೆ. ರೈತರ ಹೊಲಗಳಲ್ಲಿನ ಒಡ್ಡುಗಳು, ಚೆಕ್ ಡ್ಯಾಂಗಳು ತುಂಬಿ ಹರಿದಿದೆ. ಕೆಲವು ಕಡೆ ಒಡೆದು ಹೋಗಿದ್ದು, ಶೇಂಗಾ ಹಾಗೂ ಕೆಲ ಬೆಳೆಗಳಿಗೆ ಅಪಾರ ಹಾನಿಯಾಗಿದೆ.

ಕಂದಿಕೆರೆ ಗ್ರಾಮದ ಪುಟ್ಟಮ್ಮ ಹಾಗೂ ಅನಿತಾ ಎನ್ನುವವರು ಅಂಬೇಡ್ಕರ್ ಯೋಜನೆಯಡಿ ನಿರ್ಮಿಸಿಕೊಂಡಿದ್ದ ಮನೆಗಳು ಭಾಗಶಃ ಬಿದ್ದು ಹೋಗಿವೆ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ನೀಲಮ್ಮ ರಂಗಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.