ADVERTISEMENT

₹ 5.22 ಕೋಟಿ ವೆಚ್ಚದಲ್ಲಿ ‘ಗ್ರಾಮ ವಿಕಾಸ’

ದೊಗ್ಗನಾಳ್‌ನಲ್ಲಿ ಸಚಿವ ಆಂಜನೇಯ ಗ್ರಾಮವಾಸ್ತವ್ಯ, ವಿವಿಧ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:46 IST
Last Updated 17 ಏಪ್ರಿಲ್ 2017, 4:46 IST
₹ 5.22 ಕೋಟಿ ವೆಚ್ಚದಲ್ಲಿ ‘ಗ್ರಾಮ ವಿಕಾಸ’
₹ 5.22 ಕೋಟಿ ವೆಚ್ಚದಲ್ಲಿ ‘ಗ್ರಾಮ ವಿಕಾಸ’   
ಹೊಳಲ್ಕೆರೆ: ‘ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರ ಹುಟ್ಟೂರು ದೊಗ್ಗನಾಳ್‌ ಗ್ರಾಮವನ್ನು ₹ 5.22 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
 
ತಾಲ್ಲೂಕಿನ ದೊಗ್ಗನಾಳ್ ಗ್ರಾಮದಲ್ಲಿ ಭಾನುವಾರ ಗ್ರಾಮ ವಿಕಾಸ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
 
‘ನಂಜುಂಡಪ್ಪ ರಾಜ್ಯದ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಸಲಹೆ ಕೊಡುತ್ತಿದ್ದರು. ಹಿಂದುಳಿದ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ವರದಿ ನೀಡಿದ್ದರು. ಅವರ ವರದಿಯನ್ನು ಆಧರಿಸಿ ಸರ್ಕಾರ ಈಗಲೂ ಹಣ ಬಿಡುಗಡೆ ಮಾಡುತ್ತದೆ.
 
ಪ್ರಾದೇಶಿಕ ಅಸಮಾನತೆ ನಿವಾರಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ ರಾಜ್ಯ, ದೇಶದ ಅಭಿವೃದ್ಧಿಗೆ ಕಾರಣವಾದ ಅವರ ಸ್ವಗ್ರಾಮದಲ್ಲೇ ಮೂಲ ಸೌಕರ್ಯ ಇಲ್ಲದಿರುವುದು ದುರಂತ. ದೊಗ್ಗನಾಳ್ ಗ್ರಾಮದಲ್ಲಿ ಹೆಚ್ಚು ಜನ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಇದೇ ಗ್ರಾಮದ ಕೊಟ್ರೆ ನಂಜಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು’ ಎಂದರು.
 
‘ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಂಜುಂಡಪ್ಪ ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ತೆರವುಗೊಳಿಸಿ ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿ ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗುವುದು.
 
ದೊಗ್ಗನಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಂತಿ ಸಾಗರದಿಂದ ನೀರು ಒದಗಿಸಲು ಸುಮಾರು ₹ 60 ಕೋಟಿ ಅನುದಾನ ಬೇಕಾಗಿದ್ದು, ಮುಂದಿನ ಡಿಸೆಂಬರ್‌ ಒಳಗೆ ಇಲ್ಲಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. 
 
ದುಮ್ಮಿ, ಗೊಲ್ಲರಹಟ್ಟಿ, ಅಂಜನಾಪುರ, ಕಾಲ್ಕೆರೆ ಲಂಬಾಣಿಹಟ್ಟಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ತಹಶೀಲ್ದಾರ್ ಸೋಮಶೇಖರ್,  ತಾಲ್ಲೂಕು ಪಂಚಾಯ್ತಿ ಇಒ ಬಾಲಸ್ವಾಮಿ ದೇಶಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವನ ಗೌಡ್ರು, ಉಪಾಧ್ಯಕ್ಷೆ ಸುಧಾ ನಾಗರಾಜ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಚಂದ್ರಪ್ಪ, ಪಾಡಿಗಟ್ಟೆ ಸುರೇಶ್ ಇದ್ದರು.  
***
ಮುದ್ದೆ, ಬಸ್ಸಾರು ಊಟ
ಸಚಿವ ಎಚ್.ಆಂಜನೇಯ ದೊಗ್ಗನಾಳ್ ಗ್ರಾಮದ ಕೊಟ್ರೆ ನಾಗರಾಜ್ ಎಂಬುವರ ಮನೆಯಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಮಾಡಿದರು. ರಾತ್ರಿ ರಾಗಿ ಮುದ್ದೆ ಸೊಪ್ಪಿನ ಬಸ್ಸಾರು ಸವಿದರು.

ಭಾನುವಾರ ಬೆಳಿಗ್ಗೆ ಗ್ರಾಮದ ಎಲ್ಲಾ ಬೀದಿಗಳಲ್ಲಿ ವಾಯುವಿಹಾರ ಮಾಡಿದ ಅವರು ರಸ್ತೆ, ಚರಂಡಿ ನಿರ್ಮಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸ್ನಾನ ಮಾಡಿ ಉಪ್ಪಿಟ್ಟು, ಮಂಡಕ್ಕಿ ತಿಂಡಿ ಸೇವಿಸಿದರು.
***
ಆರ್ಥಿಕ ತಜ್ಞ ನಂಜುಂಡಪ್ಪ ಇಡೀ ರಾಜ್ಯದ  ಅಭಿವೃದ್ಧಿಗೆ ಕಾರಣರು. ಆದರೆ, ಅವರ ಹುಟ್ಟೂರು ದೊಗ್ಗನಾಳ್ ಗ್ರಾಮ ಸೌಕರ್ಯಗಳಿಂದ ವಂಚಿತವಾಗಿರುವುದು ದುರಂತ.
ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.