ADVERTISEMENT

ಗಾಳಿಪಟ ಸೂತ್ರದ ದಾರ ಬದುಕಿನ ಸಂಕೇತವಾಗಲಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 10:06 IST
Last Updated 5 ಫೆಬ್ರುವರಿ 2018, 10:06 IST

ಹೊಸದುರ್ಗ: ಗಾಳಿಪಟದ ಸೂತ್ರದ ದಾರವನ್ನು ಎಲ್ಲರೂ ತಮ್ಮ ಭವಿಷ್ಯದ ಉಜ್ವಲ ಬದುಕಿನ ಸಂಕೇತವಾಗಿ ಬಳಸಿಕೊಳ್ಳಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗಾಳಿಪಟ ಉತ್ಸವ ಸ್ಪರ್ಧೆ, ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಮನಸ್ಸನ್ನು ಮುದಗೊಳಿಸುವಂತಹ ಗಾಳಿಪಟ ಉತ್ಸವ ಆಯೋಜಿಸಿರುವುದು ಹಾಗೂ ನೂರಾರು ಮಕ್ಕಳು ಭಾಗವಹಿಸಿರುವುದು ಸಂತಸದ ಸಂಗತಿ. ಆದರೆ, ಗಾಳಿಪಟ ವೇಸ್ಟ್‌ ಪೇಪರ್‌ ಎಂದು ತಾತ್ಸಾರ ಮಾಡಬಾರದು. ಬದಲಾಗಿ ಪ್ರತಿಯೊಬ್ಬರ ಬದುಕಿನ ಸಾಧನೆಯು ಕೂಡ ಗಾಳಿಪಟದಂತೆ ಎತ್ತರಕ್ಕೆ ಬೆಳೆಯಬೇಕು. ನಮಗೆ ಅಗೌರವ, ಅವಮಾನ ಮಾಡಿದವರು ನಮ್ಮತ್ತ ನೋಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಯುವ ಮುನ್ನ ಸಮಾಜ ಸ್ಮರಿಸುವಂತಹ ಉತ್ತಮ ಕಾಯಕ ಮಾಡಬೇಕು. ಪೋಷಕರು ಮಕ್ಕಳನ್ನು ಸಗಣಿಯ ಹುಳುಗಳನ್ನಾಗಿ ಮಾಡದೇ, ಸಾಧನೆಯ ಸಸಿಗಳನ್ನಾಗಿ ರೂಪಿಸಬೇಕು. ರಾಜಕೀಯ ಉಗ್ರಗಾಮಿಗಳಿಂದ ದ್ವೇಷ, ಅಸೂಯೆ, ವೈರತ್ವ ಮನೋಭಾವ ಹೆಚ್ಚಾಗುತ್ತಿದ್ದು, ಸಮಾಜವು ವಿನಾಶದತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಮನರಂಜನೆಯ ಮೌಲ್ಯ ಬೆಳೆಸಲು ಸಾಂಪ್ರದಾಯಿಕ ಆಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಪಟ್ಟಣದ ಸದ್ಗುರು ಆಯುರ್ವೇದಿಕ್‌ ಉತ್ಪನ್ನಗಳ ಮಾರಾಟದ ಮಾಲೀಕ ಡಿ.ಎಸ್‌.ಪ್ರದೀಪ್‌ ಮಾತನಾಡಿ, ‘ಮಕ್ಕಳು ಮೊಬೈಲ್‌ನಲ್ಲಿ ಆಟ ಆಡದಂತೆ ಪೋಷಕರು ಎಚ್ಚರ ವಹಿಸಬೇಕು. ಗಾಳಿಪಟದಂತಹ ಸಾಂಪ್ರದಾಯಿಕ ಆಟ ಆಡುವ ಮನೋಭಾವ ಬೆಳೆಸಬೇಕು. ಇಂತಹ ಆಟಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಹೊಸದುರ್ಗದ ಜನಸ್ನೇಹಿ ಕ್ಯಾಂಟೀನ್‌, ಎಸ್‌ಆರ್‌ಎಸ್‌ ಸೇವಾ ಪೌಂಢೇಷನ್‌, ಐಶ್ವರ್ಯ ಸ್ಟುಡಿಯೋ, ವಾಸವಿ ಹೆಲ್ತ್‌ ಕೇರ್‌ ಪ್ರಾಡಕ್ಟ್ಸ್‌, ಕೆ.ಎಸ್‌.ಕಲ್ಮಠ್‌ ಮೋಟಾರ್ಸ್‌,
ಸಾಯಿ ಮಕ್ಕಳ ಪ್ರಪಂಚ, ಶಿವ ಟ್ರೇಡರ್ಸ್‌, ವಿನಾಯಕ ಮೊಬೈಲ್‌ ಶಾಪ್‌, ಕಾಯಕ ಕಂಪ್ಯೂಟರ್ಸ್, ಬಸವೇಶ್ವರ ಸೂಪರ್‌ ಬಜಾರ್‌, ವೀರಭದ್ರೇಶ್ವರ ಬೋರ್‌ವೆಲ್ಸ್‌, ಅನ್ನಪೂರ್ಣೇಶ್ವರಿ ಮೊಬೈಲ್ಸ್‌ ಮತ್ತು ವೆರೈಟೀಸ್‌, ವೇದಾ ಟ್ರೈಲರ್‌ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ರಜೆ ದಿನವಾದ ಭಾನುವಾರ ನಡೆದ ಗಾಳಿಪಟ ಉತ್ಸವಕ್ಕೆ ಮಕ್ಕಳು ಭಾಗವಹಿಸಿದ್ದರು. ಪಟ ಪಟ ಗಾಳಿಪಟ ಹಾಡು ಮಕ್ಕಳ ಮನಸ್ಸಿಗೆ ಮುದವನ್ನುಂಟು ಮಾಡಿತು. ಮಕ್ಕಳು ಸೂತ್ರದಾರ ಹಿಡಿದು ಗಾಳಿಪಟವನ್ನು ಬಾನಂಗಳಕ್ಕೆ ಹಾರಿಸುವುದರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಕಂಡು ಬಂತು.

ಸಮಾಜ ಸೇವಕ ಎ.ಆರ್‌.ಶಮಂತ್‌, ಐಶ್ವರ್ಯ ಸ್ಟುಡಿಯೋ ಮಾಲೀಕ ಮಂಜು ಯಾದವ್‌, ಕುಂಚಿಟಿಗ ಸಮಾಜದ ಕೇಂದ್ರ ಸಮಿತಿ ಸದಸ್ಯ ಎಚ್‌.ಆರ್‌.ಕಲ್ಲೇಶಣ್ಣ, ಮೋಹನ್‌ ಗುಜ್ಜಾರ್‌, ನಿವೃತ್ತ ಶಿಕ್ಷಕ ಓಂಕಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.