ADVERTISEMENT

ನೀರು ಸೋರಿಕೆ: ಗೇಟ್‌ಮನ್ ಮುನ್ನೆಚ್ಚರಿಕೆಯಿಂದ ತಪ್ಪಿದ ಅವಘಡ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:50 IST
Last Updated 9 ಫೆಬ್ರುವರಿ 2018, 9:50 IST

ಚಿಕ್ಕಜಾಜೂರು: ಕುಡಿಯುವ ನೀರು ಸರಬರಾಜು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬುಧವಾರ ರಾತ್ರಿ ಭಾರಿ ಪ್ರಮಾಣದ ನೀರು ಸೋರಿಕೆಯಾಗಿ, ರೈಲ್ವೆ ಹಳಿಗಳೇ ಕಂಪಿಸಿವೆ. ಸಮೀಪದ ಸಾಸಲು ಭೂತಪ್ಪ ದೇವಸ್ಥಾನದ ಬಳಿ ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಕೊಳವೆಗಳನ್ನು ಹಾಕಲಾಗಿದೆ.

ಈಮಾರ್ಗದಲ್ಲಿ ರೈಲ್ವೆ ಹಳಿಗಳಿದ್ದು, ಅವುಗಳ ಕೆಳ ಭಾಗದಲ್ಲಿ ಕೊಳವೆಗಳು ಹಾದುಹೋಗಿವೆ. ಬುಧವಾರ ರಾತ್ರಿ 9.30ರ ಸುಮಾರಿನಲ್ಲಿ ರೈಲ್ವೆ ಹಳಿಯ ಪಕ್ಕದಲ್ಲೇ ಕೊಳವೆಯಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿದ್ದರಿಂದ ಹಳಿಗಳು ಸಂಪೂರ್ಣವಾಗಿ ನಡುಗುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗೇಟ್‌ಮನ್ ಸಮಯಪ್ರಜ್ಞೆ: ರೈಲ್ವೆ ಗೇಟ್ ಸಮೀಪದಲ್ಲೇ ಭಾರಿ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದುದನ್ನು ಕಂಡ ರಾತ್ರಿ ಪಾಳಿಯ ಪ್ಯಾಟ್ರೋಲ್‌ಮನ್ ಬಾಳಪ್ಪ ತೇವರಟ್ಟಿ ಅವರು ಚಿಕ್ಕಜಾಜೂರಿನ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಎಲ್ಲಾ ಪ್ಯಾಸೆಂಜರ್, ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲುಗಳು ಸೋರಿಕೆ ಸ್ಥಳದಲ್ಲಿ ಪ್ರತಿ ಗಂಟೆಗೆ 8–10 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸುವಂತೆ ಸೂಚಿಸಲಾಗಿತ್ತು. ಅಲ್ಲದೆ, ಈ ಬಗ್ಗೆ ದಾವಣಗೆರೆ, ಹುಬ್ಬಳ್ಳಿ, ಮೈಸೂರು ವಿಭಾಗದ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಡರಾತ್ರಿವರೆಗೂ ನೀರು ಸೋರಿಕೆ: ನೀರು ಸರಬರಾಜು ಲ್ಲಿಸಿದ್ದರೂ ಕೊಳವೆಯಲ್ಲಿ ಸಂಗ್ರಹವಾದ ನೀರು ರಾತ್ರಿ 1.45ರವರೆಗೂ ಸೋರಿಕೆಯಾಗುತ್ತಿತ್ತು. ನಂತರ ನೀರು ನಿಂತಿತು ಎಂದು ರೈಲ್ವೆ ಗೇಟ್‌ಮನ್‌ ಶ್ರೀನಿವಾಸ್ ಹೇಳಿದರು.

ದುರಸ್ತಿ ಕಾಮಗಾರಿಗೆ ಸೂಚನೆ: ಶುಕ್ರವಾರ ಮುಂಜಾನೆ 6 ಗಂಟೆ ಒಳಗೆ ದುರಸ್ತಿ ಮಾಡಿಸಬೇಕು. ತಪ್ಪಿದಲ್ಲಿ ನಗರಸಭೆ ವಿರುದ್ಧ ರೈಲ್ವೆ ಇಲಾಖೆ ಕ್ರಮ ಜರುಗಿಸಲಿದೆ ಎಂದು ರೈಲ್ವೆ ಸಹಾಯಕ ವಿಭಾಗೀಯ ಎಂಜಿನಿಯರ್ ಋತ್ವಿಕ್ ಶರ್ಮ, ಚಿತ್ರದುರ್ಗ ನಗರಸಭೆಯ ಸಹಾಯಕ ಎಂಜಿನಿಯರ್ ಕಿರಣ್ ಅವರಿಗೆ ತಾಕೀತು ಮಾಡಿದರು. ರೈಲ್ವೆ ಪಿಡಬ್ಲ್ಯೂಡಿ ಎಂಜಿನಿಯರ್ ವಿಶ್ವನಾಥ್, ಚಿಕ್ಕಜಾಜೂರಿನ ರೈಲ್ವೆ ತಾಂತ್ರಿಕ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.