ADVERTISEMENT

₹ 6 ಕೋಟಿ ವೆಚ್ಚದ ಡೈಯಿಂಗ್ ಘಟಕ

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ರಮೇಶ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 5:55 IST
Last Updated 13 ಜುಲೈ 2017, 5:55 IST

ಚಿತ್ರದುರ್ಗ: ‘ಹಿರಿಯೂರು ತಾಲ್ಲೂಕು ಐಮಂಗಲ ಸಮೀಪ ₹6 ಕೋಟಿ ವೆಚ್ಚದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಕಲರಿಂಗ್ ಮತ್ತು ಡೈಯಿಂಗ್ ಘಟಕ ತೆರೆಯಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್.ರಮೇಶ್ ತಿಳಿಸಿದರು.

ನಗರದ ಐಶ್ವರ್ಯ ಫೋರ್ಟ್‌ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಮಂಗಲದಲ್ಲಿ ಮಂಡಳಿಗೆ ಸೇರಿದ ನಾಲ್ಕುಮುಕ್ಕಾಲು ಎಕರೆ ಜಮೀನಿದೆ. ಅದರಲ್ಲಿ ಈ ಘಟಕ ಸ್ಥಾಪಿಸಬಹುದು. ಇದರಿಂದ ಸುತ್ತಲಿನ ಸುಮಾರು 150 ಮಂದಿಗೆ ಉದ್ಯೋಗ ದೊರೆಯುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಈ ಘಟಕ ಸ್ಥಾಪನೆ ಆಗುವುದರಿಂದ ಸಂಚಾರ, ಸಾಗಾಟಕ್ಕೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಪ್ರಸ್ತುತ ಖಾದಿ ನೂಲಿಗೆ ಬಣ್ಣ ಹಾಕಿಸಲು ದೂರದ ಬೆಳಗಾವಿಗೆ ಹೋಗಬೇಕಿದೆ. ಇದರಿಂದ ಒಂದೊಂದು ಉತ್ಪನ್ನದ ಮೇಲೆ ₹15 ರಿಂದ ₹20 ಹೆಚ್ಚುವರಿ ಹಣ ವೆಚ್ಚವಾಗುತ್ತಿದೆ. ಡೈಯಿಂಗ್ ಘಟಕ ಆರಂಭವಾದರೆ, ಇಷ್ಟೇ ಹಣ ಗ್ರಾಹಕರಿಗೆ ಉಳಿತಾಯವಾಗುತ್ತದೆ. ನೂಲುದಾರರಿಗೂ ಪ್ರೋತ್ಸಾಹ ಸಿಗುತ್ತದೆ ಎಂದರು.

ADVERTISEMENT

‘ಜಿಲ್ಲೆಯಲ್ಲಿ 10 ಖಾದಿ ಮತ್ತು 8 ಉಣ್ಣೆ ಉದ್ದಿಮೆಗಳು ಸೇರಿದಂತೆ  ಒಟ್ಟು 18 ಖಾದಿ ಸಂಘ, ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. 1,300 ಕಸುಬುದಾರರು ಈ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 146 ಖಾದಿ ಸಂಘಗಳಿವೆ. 25 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೋದ್ಯೋಗದಲ್ಲಿ 75ಸಾವಿರ ಉದ್ದಿಮೆದಾರರಿದ್ದು, ಇದರಲ್ಲಿ ಶೇ 60ರಷ್ಟು ಮಹಿಳೆಯರಿದ್ದಾರೆ.

ಖಾದಿ ಮಂಡಳಿಗೆ 2014–15ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಉತ್ತಮ ‘ಖಾದಿ ಬೋರ್ಡ್’ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದರು. ‘ಖಾದಿ ಉದ್ದಿಮೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಖಾದಿ ಪ್ಲಾಜಾ ತೆರೆಯಲು ಕಳೆದ ಬಜೆಟ್‌ನಲ್ಲಿ ₹10 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದರು.

‘ಖಾದಿ ನೂಲು ತೆಗೆಯುವ ಕಸುಬುದಾರರಿಗೆ ಒಂದು ಅಡಿ ನೂಲಿಗೆ ₹3.50  ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದನ್ನು ₹7ಕ್ಕೆ ಹೆಚ್ಚಿಸಬೇಕು ಮತ್ತು ಒಂದು ಮೀಟರ್ ನೇಯ್ಗೆಗೆ ₹7 ಬದಲಾಗಿ ₹14 ನೀಡಬೇಕು ಎಂದು ಮಂಡಳಿಯ ಕಳೆದ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುಮೋದಿಸಿದರೆ ಖಾದಿ ಕಸುಬುದಾರರಿಗೆ ಅನುಕೂಲ ಆಗಲಿದೆ. ಅಲ್ಲದೇ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಹಕಾರಿ ಆಗಲಿದೆ’ ಎಂದರು.

ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ರಾಜು ಮಾತನಾಡಿ, ‘ಐಮಂಗಲದಲ್ಲಿ ಘಟಕ ಸ್ಥಾಪಿಸುವುದರಲ್ಲಿ ಯಾವುದೇ ತೊಡಕಿಲ್ಲ. ಘಟಕದಿಂದ ರಾಸಾಯನಿಕ ಯುಕ್ತ ತ್ಯಾಜ್ಯ ನೀರು ಹೊರ ಬರಲಿದ್ದು, ಅದನ್ನು ಶುದ್ಧೀಕರಿಸಿಯೇ ಹೊರಗೆ ಬಿಡಲಾಗುತ್ತದೆ. ಆದರೆ, ಘಟಕಕ್ಕೆ ಪ್ರತಿ ದಿನ ಕನಿಷ್ಠ ಒಂದು ಲಕ್ಷ ಲೀಟರ್ ನೀರು ಅಗತ್ಯವಿದೆ. ಅಷ್ಟು ನೀರಿನ ವ್ಯವಸ್ಥೆ ಅಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ.

ವಾಣಿವಿಲಾಸ ಸಾಗರ ಮತ್ತು ಬೇರೆ ಯಾವುದೇ ಮೂಲದಿಂದ ನೀರು ಪೂರೈಕೆ ಸಾಧ್ಯವಾದರೆ, ಘಟಕ ಸ್ಥಾಪಿಸಬಹುದು’ ಎಂದು ಅಭಿಪ್ರಾಯಪಟ್ಟರು. ಖಾದಿ ಮಂಡಳಿ ನಿರ್ದೇಶಕಿ ಆರತಿ ಮಹಡಿ ಶಿವಮೂರ್ತಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಖಾದಿ ಉತ್ಸವ ಮಾಡಬೇಕು ಎಂಬ ಬೇಡಿಕೆಗೆ ಅಧ್ಯಕ್ಷರು ಸಮ್ಮತಿಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಫಾತ್ಯರಾಜನ್, ಪ್ರೊಫೆಷನಲ್ ಸೆಲ್‌ನ ಅಧ್ಯಕ್ಷ ಮಹಡಿ ಶಿವಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್‌ ಅಲ್ಲಾಬಕ್ಷ್, ಖಾದಿ  ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಅವರೂ ಇದ್ದರು.

***

ಖಾದಿ ಸೊಸೈಟಿಗಳಿಗೆ ಅಧ್ಯಕ್ಷರ ಭೇಟಿ

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಇರುವ ನೂಲು ತೆಗೆಯುವ ಘಟಕಗಳು, ಮಗ್ಗಗಳಿಗೆ ಖಾದಿ ಮತ್ತು ಗ್ರಾಮೋದ್ಯಮ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್ ರಮೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಎಚ್. ಡಿ.ಪುರ, ಕೊಳಾಳ್, ಕಾವಾಡಿಗರ ಹಟ್ಟಿಯ ಘಟಕಗಳಿಗೆ ಭೇಟಿ ನೀಡಿದರು.

ನೂಲು ತೆಗೆಯುವ ಪ್ರಕ್ರಿಯೆ, ಬಟ್ಟೆ ತಯಾರಿ, ಬಟ್ಟೆಗಳ ಗುಣಮಟ್ಟ ಸೇರಿದಂತೆ, ಖಾದಿ ಉತ್ಪನ್ನಗಳನ್ನು ಪರಿಶೀಲಿಸಿ, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಅಧ್ಯಕ್ಷರೊಂದಿಗೆ ಮಂಡಳಿ ಸಿಇಒ ನವೀನ್ ರಾಜ್ ಕುಮಾರ್, ನಿರ್ದೇಶಕಿ ಆರತಿ ಮಹಡಿ ಶಿವಮೂರ್ತಿ ಸೇರಿದಂತೆ ಮಂಡಳಿಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.