ADVERTISEMENT

ಸೌಲಭ್ಯ ಒದಗಿಸದಿದ್ದರೆ ಶಾಸಕರ ವಿರುದ್ಧ ಮೊಕದ್ದಮೆ

ವಾಲ್ಮೀಕಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 12:29 IST
Last Updated 4 ಅಕ್ಟೋಬರ್ 2018, 12:29 IST

ಚಿತ್ರದುರ್ಗ:ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಅ.24 ರೊಳಗೆ ಸರ್ಕಾರದ ವಿವಿಧ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ, ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ವಿರುದ್ಧ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್ ತಿಳಿಸಿದರು.

ಅರ್ಹರಿಗೆ ನೀಡುವಂಥ ಸೌಲಭ್ಯದಲ್ಲಿ ಲೋಪ ಕಂಡು ಬಂದರೆ, ಶಾಸಕರ ವಿರುದ್ಧಲೋಕಾಯುಕ್ತ ಹಾಗೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಕ್ಷೇತ್ರದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ 2017-18ನೇ ಸಾಲಿನಲ್ಲಿ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ವಾಹನ ಸಾಲ ಸೌಲಭ್ಯ ಹಾಗೂ ಸ್ವಸಹಾಯ ಸಂಘಗಳ ಅಭಿವೃದ್ಧಿಗಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಆದರೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿ ಕಾರಣದಿಂದಾಗಿ ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು ಎಂದರು.

ADVERTISEMENT

ಚುನಾವಣೆ ಫಲಿತಾಂಶದ ನಂತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಎಂ. ಚಂದ್ರಪ್ಪ ಅವರುಎಚ್. ಆಂಜನೇಯ ಅವರಿಂದಾದ ಆಯ್ಕೆ ಪಟ್ಟಿ ತಡೆಹಿಡಿಯಲು ನಿಗಮದ ವ್ಯವಸ್ಥಾಪಕರಿಗೆ ಮೌಖಿಕ ಹಾಗೂ ಲಿಖಿತ ಪತ್ರ ಬರೆದಿದ್ದಾರೆ. ಅಲ್ಲದೆ, ಈ ಹಿಂದೆ ಆಯ್ಕೆಯಾದ ಯಾವ ಫಲಾನುಭವಿಗೂ ವಿವಿಧ ಯೋಜನೆಯಡಿ ಸೌಲಭ್ಯ ನೀಡದಂತೆ ಸೂಚಿಸಿದ್ದಾರೆ. ಈ ಮೂಲಕ ಶಾಸಕರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿನ ನಿರ್ಗತಿಕರ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ನೀಡುವಂಥ ಯೋಜನೆ ತಲುಪಬೇಕಾದ್ದು, ಶಾಸಕರ ಕರ್ತವ್ಯ. ಆದರೆ, ಅದನ್ನು ಅವರು ಮಾಡುತ್ತಿಲ್ಲ. ಆದ್ದರಿಂದ ಈ ಹಿಂದೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಖುದ್ದು ಪರಿಶೀಲಿಸಬೇಕು ಎಂದು ಒತ್ತಾಯಿಸಿದ ತಿಪ್ಪೇಶ್, ಈ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ರಾಮಸಾಗರ ಮಂಜು, ಸಂಚಾಲಕ ಮೋಹನ್ ತಳವಾರಹಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಗೌರಿರಾಜ್‌ಕುಮಾರ್, ಮುಖಂಡರಾದ ಶಿವಪ್ರಸಾದ್, ಸೂರನಹಳ್ಳಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.