ADVERTISEMENT

ಇಂದಿನಿಂದ ಖಾಸಗಿ ಬಸ್‌ ದರ ಹೆಚ್ಚಳ

ಎಲ್ಲ ಸಿಟಿ ಬಸ್‌ಗಳಲ್ಲಿ ಪ್ರತಿ ಟಿಕೆಟ್‌ಗೆ ₹1ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:14 IST
Last Updated 25 ಏಪ್ರಿಲ್ 2018, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಡೀಸೆಲ್‌ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಿಡಿಭಾಗಗಳು, ಆಯಿಲ್‌, ಟಯರ್‌, ಚಾಸಿಸ್‌ ದರ, ಬಾಡಿ ಬಿಲ್ಡಿಂಗ್‌, ವಿಮೆ ಕಂತು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಬಸ್‌ ನಿರ್ವಹಣೆ ಗಗನಕ್ಕೇರುತ್ತಿದೆ. ನಷ್ಟವನ್ನು ಸರಿದೂಗಿಸಲು ಜಿಲ್ಲೆಯಲ್ಲಿ ಬಸ್‌ ಪ್ರಯಾಣದರವನ್ನು ಬುಧವಾರ (ಇದೇ 25)ದಿಂದ ₹1 ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್‌ ಪರ್ತಿಪಾಡಿ ತಿಳಿಸಿದ್ದಾರೆ.

2014 ರ ಜುಲೈ 1 ರಂದು ದರ ಏರಿಕೆ ಮಾಡಲಾಗಿತ್ತು. ಆದರೆ, 2015 ರ ಜನವರಿ 12 ರಂದು ಡೀಸೆಲ್‌ ದರ ಇಳಿಕೆಯಾಗಿದ್ದನ್ನು ಪರಿಗಣಿಸಿ, ಪ್ರಯಾಣ ದರವನ್ನು ₹1 ರಷ್ಟು ಕಡಿಮೆ ಮಾಡಲಾಗಿತ್ತು. ಆದರೆ, 2016 ರ ನವೆಂಬರ್‌ 15 ರಂದು ಮತ್ತೆ ಡೀಸೆಲ್‌ ದರ ₹56.25 ಕ್ಕೆ ಏರಿಕೆಯಾಗಿದ್ದು, ಇದೀಗ ಮತ್ತೆ ಡೀಸೆಲ್‌ ದರ ₹66.31 ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಸ್‌ ಪ್ರಯಾಣದರ ಏರಿಕೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಬಸ್‌ ಉದ್ಯಮ ನಡೆಸುವುದೇ ಕಷ್ಟಕರವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ಪ್ರತಿ ಟಿಕೆಟ್‌ನ ಮೇಲೆ ₹1 ಮಾತ್ರ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ರಾಜ್ಯ ಸರ್ಕಾರ 2013 ರ ಜುಲೈ 31 ರಂದು ಹೊರಡಿಸಿದ ಅಧಿ ಸೂಚನೆಯ ಪ್ರಕಾರ ಕಾಲಕಾಲಕ್ಕೆ ಡೀಸೆಲ್‌, ಆಯಿಲ್‌, ಸ್ಟೀಲ್‌ ದರ ಹೆಚ್ಚಳ, ತೆರಿಗೆ ಏರಿಕೆಯಾದರೆ, ಅದಕ್ಕೆ ಅನುಗುಣವಾಗಿ ಪ್ರತಿ ಕಿ.ಮೀ.ಗೆ ಪ್ರತಿ ಸೀಟ್‌ಗೆ 4 ಪೈಸೆ ಸರ್‌ಚಾರ್ಜ್‌ ಏರಿಸಲು ಅವಕಾಶವಿದೆ. ಇದೀಗ ಹಲವಾರು ದರಗಳು ಏರಿಕೆಯಾಗಿದ್ದು, ಅದರ ಸರ್‌ಚಾರ್ಜ್ ಅನ್ನು ₹1 ರಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿ ಸಮುದಾಯ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಎಲ್ಲ ಎಕ್ಸ್‌ಪ್ರೆಸ್‌ ಮತ್ತು ಸರ್ವೀಸ್‌ ಬಸ್‌ಗಳ ಪ್ರಯಾಣ ದರ ಏಪ್ರಿಲ್‌ 16 ರಿಂದಲೇ ಏರಿಕೆಯಾಗಿದ್ದು, ಪೂರ್ವ ವಲಯ ಬಸ್‌ ಮಾಲೀಕರ ಒಕ್ಕೂ ಟದ ಎಲ್ಲ ಸರ್ವೀಸ್‌ ಬಸ್‌ಗಳಲ್ಲೂ ಬುಧವಾರದಿಂದ ಪ್ರಯಾಣ ದರ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ವತಿಯಿಂದ ಎಲ್ಲ ಸಿಟಿ ಬಸ್‌ ಗಳಲ್ಲಿ 1 ರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶೇ 75 ರಷ್ಟು ರಿಯಾಯಿತಿ ದರ ಹಾಗೂ 8 ನೇ ತರಗತಿಯಿಂದ ಉಳಿದೆಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಶೇ 60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದು ಎಂದಿನಂತೆಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

1980 ರಿಂದ ಇದುವರೆಗೆ ಬಸ್‌ ಮಾಲೀಕರಿಂದ ವಿದ್ಯಾರ್ಥಿ ಸಮು ದಾಯಕ್ಕೆ ರಿಯಾಯಿತಿ ರೂಪದಲ್ಲಿ ₹14, 37,15,630 ಕೊಡುಗೆ ನೀಡಲಾಗಿದೆ. ಬಸ್‌ನ ಎಲ್ಲ ನಿರ್ವಾ ಹಕರು, ಚಾಲಕರು, ವಿದ್ಯಾರ್ಥಿ ಸಮುದಾಯ ಹಾಗೂ ಪ್ರಯಾಣಿಕರ ಜತೆಗೆ ಗೌರವಯುತವಾಗಿ ಹಾಗೂ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.