ADVERTISEMENT

ಉಪ್ಪಳದ ನಾಲ್ವರು ಆರೋಪಿಗಳ ವಶ

ಖಾಲಿಯಾ ರಫೀಕ್ ಕೊಲೆ ಪ್ರಕರಣ: ರಿವಾಲ್ವರ್‌, ತಲವಾರು ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:08 IST
Last Updated 18 ಫೆಬ್ರುವರಿ 2017, 7:08 IST
ಉಳ್ಳಾಲ:  ರೌಡಿ ಖಾಲಿಯಾ ರಫೀಕ್ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಹಾಗೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಹಿಂದೆ ನಡೆಸಿದ ಕೊಲೆಗೆ ಪ್ರತೀಕಾರವಾಗಿ ಹಾಗೂ ವೈಯಕ್ತಿಕವಾಗಿ ಹಲ್ಲೆ ನಡೆಸಿದ ಕಾರಣ ಪೂರ್ವ ಯೋಜಿತವಾಗಿ ಆರೋಪಿಗಳು ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. 
 
ಉಪ್ಪಳ ಮೂಲದವರಾದ  ನೂರ್ ಆಲಿ,  ರಶೀದ್, ಪದ್ದು ಯಾನೆ ಪದ್ಮ ನಾಭ,  ರವೂಫ್ ಪೊಲೀಸರ ವಶದಲ್ಲಿ ರುವವರು. ಆರೋಪಿಗಳಿಂದ  ಕೃತ್ಯಕ್ಕೆ ಬಳಸಲಾದ ತಲವಾರು ಹಾಗೂ ರಿವಾಲ್ವರನ್ನು  ಉಪ್ಪಳದ ನೂರ್‍ಆಲಿ ಮನೆ ಸಮೀಪದಿಂದ  ವಶಕ್ಕೆ ಪಡೆದುಕೊಳ್ಳಲಾಗಿದೆ. 
 
ಕೋಟೆಕಾರು ಸಮೀಪ ಇದೇ 15ರಂದು  ಲಾರಿಯಿಂದ  ಕಾರಿಗೆ ಡಿಕ್ಕಿ ಹೊಡೆದು ಖಾಲಿಯಾ ರಫೀಕ್ ಮೇಲೆ ತಲವಾರಿನಿಂದ  ದಾಳಿ ನಡೆಸಿ, ಗುಂಡು ಹಾರಿಸಿ ಕೊಲ್ಲಲಾಗಿತ್ತು. ಆತನ ಜತೆಗಿದ್ದ ಸ್ನೇಹಿತ ಜಾವೇದ್ ಎಂಬಾತನ ಮೇಲೂ ತಂಡ ತಲವಾರಿನಿಂದ ದಾಳಿ ನಡೆಸಿತ್ತು.  ಪ್ರಾಥಮಿಕ ಹಂತದ ತನಿಖೆಯಲ್ಲಿ  ಕೃತ್ಯದಲ್ಲಿ ಏಳು ಜನರು ಭಾಗಿಯಾಗಿ ರುವುದು  ಗೊತ್ತಾಗಿತ್ತು.  ಸದ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ , ಸಿಸಿಬಿ ಪೊಲೀಸರು ಮಂಜೇಶ್ವರ ಪೊಲೀಸರ ಸಹಕಾರದೊಂದಿಗೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 
 
ತಿಂಗಳ ಹಿಂದೆ ಸ್ಕೆಚ್: ಒಂದು ತಿಂಗಳಿನಿಂದ ಖಾಲಿಯಾ ರಫೀಕ್ ನಿರ್ಜನ ಪ್ರದೇಶದಲ್ಲಿ ಹಾಗೂ  ಕರ್ನಾಟ ಕದತ್ತ ಬರುವುದನ್ನು  ವಿರೋಧಿ ಬಣ ಕಾದು ಕುಳಿತಿತ್ತು.  ಮೊದಲಿಗೆ ನೇತ್ರಾವತಿ ಸೇತುವೆಯಲ್ಲಿ  ಜನರು ಯಾರೂ ಇರದಿರುವುದರಿಂದ  ಕೃತ್ಯಕ್ಕೆ ಸಂಚು ರೂಪಿಸಿದ್ದರೂ, ಒಂದು ಮಾರ್ಗವಿದ್ದ ಹಿನ್ನೆಲೆಯಲ್ಲಿ  ಲಾರಿಯನ್ನು ತರಲು ಕಷ್ಟ ವಾಗಿದ್ದರಿಂದ ಅಲ್ಲಿ ಅಸಾಧ್ಯವಾಗಿತ್ತು. ಅದಕ್ಕಾಗಿ  ಕೋಟೆಕಾರಿನಲ್ಲಿ  ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. 
 
ಹತ್ಯೆ ದ್ವೇಷ ಮತ್ತು ವೈಯಕ್ತಿಕ ದ್ವೇಷ: ಕಾಲಿಯಾ ನೇತೃತ್ವದಲ್ಲಿ ತಂಡ 2013 ರಲ್ಲಿ ಮುತಾಲಿಬ್  ಎಂಬಾ ತನನ್ನು ಆತನ ಪತ್ನಿ ಕಣ್ಣೆದುರೇ  ಹತ್ಯೆ ನಡೆಸಿತ್ತು. ತದನಂತರ   ಮುತಾಲಿಬ್ ಸಹೋದರರಾದ   ಉಪ್ಪಳದ ನೂರ್ ಆಲಿ, ಕಸಾಯಿ ಶರೀಫ್  ಎಂಬವರು ಹಲವು ಬಾರಿ ಖಾಲಿಯಾನ ಹತ್ಯೆಗೆ ಯತ್ನಿಸಿದ್ದರು.  ಆದರೆ ಚಾಣಾಕ್ಷತನದ  ಖಾಲಿಯಾ  ತಪ್ಪಿಸುತ್ತಲೇ ಇದ್ದ. ಈ ನಡುವೆ ಉಪ್ಪಳದ ಕೈಕಂಬದಲ್ಲಿ ಎರಡು ತಂಡಗಳ ಮಧ್ಯೆ ಗುಂಡಿನ ದಾಳಿಯೇ ನಡೆದಿತ್ತು.  
 
ಪೊಲೀಸರ ವಶದಲ್ಲಿರುವ  ರವೂಫ್  ಎಂಬಾತನನ್ನು ಖಾಲಿಯಾ ಪಡೆ ತಿಂಗಳ ಹಿಂದೆ ಸಮುದ್ರ ತೀರಕ್ಕೆ ಕೊಂಡೊಯ್ದು ಕುತ್ತಿಗೆ ಮೇಲ್ಭಾಗವನ್ನು ಬಿಟ್ಟು, ಉಳಿದ ದೇಹವನ್ನು ಮರಳಿನಲ್ಲಿ ಹೂತುಹಾಕಿ ಬೆಳಗ್ಗಿನವರೆಗೂ ಹಲ್ಲೆ ನಡೆಸಿದ್ದರು.  ಇದರ ದ್ವೇಷವನ್ನು ಹೊಂದಿದ್ದ ರವೂಫ್ ,  ಹತ್ಯೆಗೀಡಾದ ಮುತಾಲಿಬ್  ಸಹೋದರ ನೂರ್ ಆಲಿ ಜತೆಗೆ ಸೇರಿಕೊಂಡು ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಅನ್ನುವ ಅಂಶ ಬೆಳಕಿಗೆ ಬಂದಿದೆ. 
 
ಮುಂಬೈಗೆ ತೆರಳುವವನಿದ್ದ:
 
ಖಾಲಿಯಾ ರಫೀಕ್  ಬುಧವಾರ ರಾತ್ರಿ ಮಹಾರಾಷ್ಟ್ರದ ಪುಣೆ ಕಡೆಗೆ ತೆರಳುವವನಿದ್ದ.  ಜೀವ ಬೆದರಿಕೆಯಿದ್ದ ಕಾರಣ ಸ್ವಲ್ಪ ಕಾಲ ಅಲ್ಲಿರುವ ಸ್ನೇಹಿತರೊಬ್ಬರ ಹೋಟೆಲ್‌ನಲ್ಲಿ ತಂಗುವ ಯೋಜನೆ ರೂಪಿಸಿದ್ದ. ಅದಕ್ಕಾಗಿ  ಉಪ್ಪಳದಿಂದ ಹೊಸಂಗಡಿವರೆಗೆ ಆಲ್ಟೋ ಕಾರಿನಲ್ಲಿ ಬಂದಾತ , ಅಲ್ಲಿಂದ ಕಾರು ಬದಲಾಯಿಸಿ  ರಿಟ್ಝ್ ಕಾರಿನಲ್ಲಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ  ಹೊರಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.