ADVERTISEMENT

ಕಡಬ-ಸುಬ್ರಹ್ಮಣ್ಯ ಹೆದ್ದಾರಿ ಈಗ ಸುರ ಸುಂದರ

25 ವರ್ಷದ ಬಳಿಕ ರಸ್ತೆ ಅಭಿವೃದ್ಧಿ, ಅಗಲ

ಸಿದ್ದಿಕ್ ನೀರಾಜೆ
Published 16 ಫೆಬ್ರುವರಿ 2017, 8:48 IST
Last Updated 16 ಫೆಬ್ರುವರಿ 2017, 8:48 IST
ಉಪ್ಪಿನಂಗಡಿ: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ 25 ವರ್ಷಗಳ ಬಳಿಕ ಅಭಿವೃದ್ಧಿಯ ಕಾಯಕಲ್ಪ ದೊರೆತಿದೆ. ಹೆದ್ದಾರಿ ರಸ್ತೆ ಅಭಿವೃದ್ಧಿ, ಅಗಲ ಹೊಂದಿ ಸುರ ಸುಂದರಾಂಗನಂತೆ ಕಂಗೊಳಿಸತೊಡಗಿದೆ.
 
ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾ ರಿಯಿಂದ ಕವಲೊಡೆದು ಸುಬ್ರಹ್ಮಣ್ಯಕ್ಕೆ ಸಾಗುವ ಸುಮಾರು 52 ಕಿಲೋಮೀಟರ್ ರಸ್ತೆಯಲ್ಲಿ ಉಪ್ಪಿನಂಗಡಿಯ ಹಳೇಗೇಟು ಸುಬ್ರಹ್ಮಣ್ಯ ಕ್ರಾಸ್‌ನಿಂದ ಮರ್ಧಾಳ ತನಕ 30 ಕಿಲೋ ಮೀಟರ್ ರಸ್ತೆ ಅಗಲ ಗೊಳಿಸುವ ಕಾಮಗಾರಿಗೆ ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ₹ 29 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಇದರಲ್ಲಿ ಮರ್ಧಾಳದಿಂದ ಕೊಯಿಲ ತನಕ ₹ 22 ಕೋಟಿ ವೆಚ್ಚದ 23 ಕಿ.ಮೀ. ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ. ಕೊಯಿಲದಿಂದ ಉಪ್ಪಿನಂಗಡಿ ಹಳೇ ಗೇಟು ಸುಬ್ರಹ್ಮಣ್ಯ ಕ್ರಾಸ್ ತನಕ ₹ 7 ಕೋಟಿಯಲ್ಲಿ  6 ಕಿಲೋ ಮೀಟರ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ ಐದೂವರೆ ಮೀಟರ್ ಇದ್ದ ರಸ್ತೆ ಇದೀಗ 7 ಮೀಟರ್‌ಗೆ ಏರಿಕೆಯಾಗಿದೆ.
 
2 ವಿಧಾನ ಸಭಾ ಕ್ಷೇತ್ರ, ಅಭಿವೃದ್ಧಿ ಮರೀಚಿಕೆಯಾಗಿತ್ತು: ಈ ರಸ್ತೆ ಉಪ್ಪಿ ನಂಗಡಿ ಸಮೀಪದ ಕೆಮ್ಮಾರ ತನಕ ಪುತ್ತೂರು ವಿಧಾನ ಸಭಾ ಕ್ಷೇತ್ರವಾದರೆ ಅಲ್ಲಿಂದ ಸುಬ್ರಹ್ಮಣ್ಯ ತನಕ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಎರಡೂ ಕ್ಷೇತ್ರದ ಗಡಿಭಾಗದಲ್ಲಿ ಇದ್ದುದರಿಂದಾಗಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿತ್ತು.
 
20 ವರ್ಷದ ಹಿಂದೆ ಸುಳ್ಯ ಶಾಸಕ ಎಸ್. ಅಂಗಾರ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ದರ್ಬೆ-ಸುಬ್ರಹ್ಮಣ್ಯ, ಸುಳ್ಯ-ಸುಬ್ರಹ್ಮಣ್ಯ, ಮರ್ಧಾಳ-ಪೆರಿಯಶಾಂತಿ, ಸುಬ್ರಹ್ಮಣ್ಯ-ಗುಂಡ್ಯ ಮುಂತಾದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವಾಗ ಉಪ್ಪಿ ನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆಯನ್ನೂ ಮೇಲ್ದರ್ಜೆಗೆ ಏರಿಸುವಲ್ಲಿ ಸಫಲರಾಗಿ ದ್ದರು. ಈ ಮಧ್ಯೆ ಅಂದಿನ ಸಂಸದ ಧನಂಜಯ ಕುಮಾರ್ ಅವರ ಮುತು ವರ್ಜಿಯಲ್ಲಿ ಕೇಂದ್ರ ರಸ್ತೆ ನಿಧಿಯ ಅನು ದಾನದಲ್ಲಿ ಉಪ್ಪಿನಂಗಡಿಯಿಂದ ಕೆಮ್ಮಾರ ತನಕ ಐದು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದರು.
 
2011-12ರಲ್ಲಿ ಉಪ್ಪಿನಂಗಡಿ ಯಿಂದ ಸುಬ್ರಹ್ಮಣ್ಯ ತನಕದ ರಸ್ತೆಯನ್ನು ರಾಜ್ಯ ಸರ್ಕಾರ ₹ 30 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸ ಲಾಯಿತು. ಇದರಲ್ಲಿ ಅಲ್ಲಲ್ಲಿ ಮೋರಿ ನಿರ್ಮಾಣ, ಕೆಮ್ಮಾರ, ಪೆರಾಬೆ ಗ್ರಾಮದ ಕೋಚಕಟ್ಟೆ, ಬಜಕೆರೆ, ನೆಟ್ಟಣ ಮುಂತಾ ದೆಡೆ ಸೇತುವೆಗಳ ನಿರ್ಮಾಣ ಮಾಡಲಾಗಿತ್ತು.
 
ಅಂದು ರಾಜ್ಯದಲ್ಲಿ ಬಿಜೆಪಿ ಆಡಳಿತ ದಲ್ಲಿದ್ದಾಗ ಉಪ್ಪಿನಂಗಡಿ-ಕಡಬ-ಸುಬ್ರ ಹ್ಮಣ್ಯ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಿದರೆ, ಇದೀಗ ಕಾಂಗ್ರೆಸ್ ಸರ್ಕಾರ ರಸ್ತೆ ಅಗಲಗೊಳಿಸುವುದಕ್ಕೆ ಅನುದಾನ ಬಿಡುಗಡೆ ಮಾಡಿದೆ. ಅಂದು ಬಿಜೆಪಿ ನಾಯಕರುಗಳು ರಸ್ತೆಗೆ ಶಿಲಾ ನ್ಯಾಸ ನೆರವೇರಿಸಿ ಉದ್ಘಾಟನೆ ಮಾಡಿ ದ್ದರು. ಇಂದು ಕಾಂಗ್ರೆಸ್ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರನ್ನು ಕರೆಸಿ ಶಿಲಾನ್ಯಾಸ ನೆರವೇರಿಸಿ ನಮ್ಮ ಸಾಧನೆ ಎಂದು ಹೇಳಿ ಕೊಂಡಿದ್ದರು.
 
ಕಾಮಗಾರಿ ಬಗ್ಗೆ ಪ್ರಶಂಸೆ: ಕಳೆದ ಬಾರಿ ರಸ್ತೆ ಅಭಿವೃದ್ಧಿ ಮಾಡುವಾಗ ಉಪ್ಪಿನಂಗಡಿಯಿಂದ ಮರ್ಧಾಳ ತನಕ ಪವಿತ್ರಾ ಕನ್‌ಸ್ಟ್ರಕ್ಷನ್‌ನವರು ಕಾಮಗಾರಿ ನಡೆಸಿದ್ದರು. ಮರ್ಧಾಳದಿಂದ ಸುಬ್ರ ಹ್ಮಣ್ಯ ತನಕ ಹರೀಶ್ ಎನ್ನುವ ಗುತ್ತಿಗೆದಾರ ಕಾಮಗಾರಿ ನಡೆಸಿದ್ದರು. ಇದೀಗ ಮರ್ಧಾಳದಿಂದ ಕೊಯಿಲ ತನಕ ಅಗಲಗೊಳಿಸುವ ಕಾಮಗಾರಿ ಹೊಣೆಯನ್ನು ಪವಿತ್ರಾ ಕನ್‌ಸ್ಟ್ರಕ್ಷನ್‌ ನಿರ್ವಹಿಸಿದ್ದು, ಕಾಮಗಾರಿ ಬಗ್ಗೆ ಪ್ರಶಂಸೆಯ ಮಾತುಗಳು ವ್ಯಕ್ತವಾಗಿದೆ.
 
ಉಪ್ಪಿನಂಗಡಿ-ಕೊಯಿಲ ಮಾರ್ಚ್ ಅಂತ್ಯಕ್ಕೆ ಪೂರ್ಣ: ಉಪ್ಪಿನಂಗಡಿಯಿಂದ ಕೊಯಿಲ ತನಕದ ಕಾಮಗಾರಿ ಭರ ದಿಂದ ನಡೆಸುತ್ತಿದ್ದೇವೆ, ಶರೀಫ್ ಕನ್‌ ಸ್ಟ್ರಕ್ಷನ್ ಸಂಸ್ಥೆಯ ಮೂಲಕ 8 ಕಡೆಗಳಲ್ಲಿ ಸುಮಾರು ₹ 100 ಕೋಟಿ ಮಿಕ್ಕಿ ಕೆಲಸ ನಡೆಯುತ್ತಿದ್ದು, ಅವೆಲ್ಲ ವನ್ನು ಮಾರ್ಚ್ ತಿಂಗಳ ಒಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕಾಗಿದೆ. ಈ ಕಾಮಗಾರಿಗೆ ಜೂನ್ ತನಕ ಅವಧಿ ಇದ್ದು, ಮಾರ್ಚ್ ಅಂತ್ಯದಲ್ಲಿ ಕಾಮಗಾರಿ ಮುಗಿಸಲಿದ್ದೇವೆ ಎಂದು ಕಾಮಗಾರಿ ನಿರ್ವಹಿಸುತ್ತಿರುವ ಆರಿಫ್ ಪ್ರತಿಕ್ರಿಯಿಸಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.