ADVERTISEMENT

ಕಾಂಗ್ರೆಸ್‌ ಗೆಲುವಿಗೆ ಹೊಸ ಸೂತ್ರ

ಕೊಟ್ಟು– ತೆಗೆದುಕೊಳ್ಳುವ ತಂತ್ರಕ್ಕೆ ಮುಂದಾದ ಖಾದರ್

ಚಿದಂಬರ ಪ್ರಸಾದ್
Published 23 ಏಪ್ರಿಲ್ 2018, 11:39 IST
Last Updated 23 ಏಪ್ರಿಲ್ 2018, 11:39 IST

ಮಂಗಳೂರು: ಈ ಬಾರಿಯ ಚುನಾವಣೆ ಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಬಾವುಟ ಹಾರಿಸಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿವೆ. ಇದರ ಪರಿಣಾಮ ಪ್ರತಿ ಕ್ಷೇತ್ರದಲ್ಲೂ ರಾಜಕೀಯ ತಂತ್ರಗಾ ರಿಕೆ ತೀವ್ರವಾಗುತ್ತಿದೆ. ಕೊಟ್ಟು– ತೆಗೆ ದುಕೊಂಡರೂ ಸರಿ, ಕ್ಷೇತ್ರವನ್ನು ಉಳಿ ಸಿಕೊಳ್ಳಲೇಬೇಕು ಎನ್ನುವ ತಂತ್ರಗಾರಿಕೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಬಿರುಸುಗೊಂಡಿದೆ.

ಪ್ರಮುಖವಾಗಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಇಂಥದ್ದೊಂದು ರಾಜಕೀಯ ಸೂತ್ರವನ್ನು ರೂಪಿಸ ಲಾಗುತ್ತಿದೆ ಎನ್ನುವ ಮಾತುಗಳು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಬಾರಿ ತಮ್ಮ ಪ್ರಮುಖ ಪ್ರತಿಸ್ಪರ್ಧಿ, ಮಾಜಿ ಮೇಯರ್‌ ಕೆ. ಆಶ್ರಫ್‌ ಅವರನ್ನು ಹೇಗಾದರೂ ಮಾಡಿ, ಕಣದಿಂದ ಹಿಂದಕ್ಕೆ ಸರಿಸಬೇಕು ಎನ್ನುವ ಯೋಜನೆ ರೂಪಿಸಿದ ಸಚಿವ ಯು.ಟಿ. ಖಾದರ್‌, ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಇದಕ್ಕೆ ಜೆಡಿಎಸ್‌ನ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಬಿ.ಎ. ಮೊಹಿಯುದ್ದೀನ್‌ ಬಾವ ಅವರ ಸಹೋದರ ಬಿ.ಎಂ. ಫಾರೂಕ್‌ ಅವರ ಸಹಾಯ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಂಗಳೂರು ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಅಧಿಕವಾಗಿದ್ದು, ಒಂದು ವೇಳೆ ಕೆ. ಆಶ್ರಫ್‌ ಅವರು ಜೆಡಿಎಸ್‌ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದೇ ಆದಲ್ಲಿ, ಯು.ಟಿ. ಖಾದರ್ ಅವರ ನಾಗಾಲೋಟಕ್ಕೆ ಸ್ವಲ್ಪ ಮಟ್ಟಿಗೆ ತಡೆ ಬೀಳುವುದು ನಿಶ್ಚಿತ. ಇನ್ನೊಂದೆಡೆ ಎಸ್‌ಡಿಪಿಐ, ಸಿಪಿಎಂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿ ಯಲಿದ್ದು, ಮುಸ್ಲಿಂ ಮತಗಳು ವಿಭಜನೆ ಆಗಲಿವೆ ಎನ್ನುವ ಆತಂಕ ಖಾದರ್‌ ಅವರನ್ನು ಕಾಡುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಕೆ.ಅಶ್ರಫ್‌ ಸ್ಪರ್ಧಿಸದಂತೆ ನೋಡಿಕೊಳ್ಳುವುದೇ ಖಾದರ್‌ ಮುಂದಿರುವ ಪ್ರಮುಖ ಸವಾಲಾಗಿದೆ.

ADVERTISEMENT

ಮೂಡುಬಿದಿರೆ, ಬಂಟ್ವಾಳ, ಸುಳ್ಯ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು ಹಾಗೂ ಪುತ್ತೂರು ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಗೆಲುವನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಖಾದರ್ ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಏನಿದು ಸೂತ್ರ: ಖಾದರ್‌ ಅವರ ಕಾರ್ಯತಂತ್ರದಲ್ಲಿ ಮಂಗಳೂರು ಉತ್ತರ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಗಳಿಸುವಂತೆ ಮಾಡುವ ಸೂತ್ರವೊಂದನ್ನು ರೂಪಿಸಲಾಗಿದ್ದು, ಅದನ್ನು ಫಾರೂಕ್ ಅವರ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಫಾರೂಕ್‌ ಸಹೋದರ ಬಿ.ಎ. ಮೊಹಿಯುದ್ದೀನ್‌ ಬಾವಾ ಅವರ ಮಂಗಳೂರು ಉತ್ತರ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಮುನೀರ್ ಕಾಟಿಪಳ್ಳ ಅವರನ್ನು ಕಣದಿಂದ ಹಿಂದಕ್ಕೆ ಸರಿಸುವಂತೆ ಮಾಡುವಲ್ಲಿ ಖಾದರ್‌ ಪಾತ್ರ ನಿರ್ವಹಿಸಲಿದ್ದು, ಮಂಗಳೂರು ಕ್ಷೇತ್ರದಲ್ಲಿ ಕೆ.ಆಶ್ರಫ್‌ ಅವರ ಸ್ಪರ್ಧೆಗೆ ತಡೆ ಒಡ್ಡುವ ಹೊಣೆಗಾರಿಕೆಯನ್ನು ಫಾರೂಕ್‌ ಅವರಿಗೆ ವಹಿಸಲಾಗಿದೆ ಎಂಬ ಮಾತು ಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಕಾಟಿಪಳ್ಳ ಅವರನ್ನು ಕಣದಿಂದ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಸಚಿವ ಖಾದರ್‌ ಈಗಾಗಲೇ ಕೇರಳದ ಸಿಪಿ ಎಂ ನಾಯಕರ ಜತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನ ಲಾಗಿದ್ದು, ಇದರಿಂದ ಬಿ.ಎ. ಮೊಹಿಯು ದ್ದೀನ್‌ ಬಾವಾ ಅವರಿಗಿದ್ದ ಪ್ರಮುಖ ಚಿಂತೆಯೊಂದು ಕಡಿಮೆ ಆದಂತಾಗಲಿದೆ. ಇನ್ನು ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್‌ ಗೆಲುವು ಇನ್ನಷ್ಟು ಸುಲಭ ವಾಗಲಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ ಪಾಳೆಯದಲ್ಲಿ ನಡೆಯುತ್ತಿದೆ.

ಅಶ್ರಫ್‌ ಸ್ಪರ್ಧೆ ನಿಶ್ಚಿತ

ಈ ತಂತ್ರಗಾರಿಕೆಯ ಸುಳಿವು ಅರಿತಂತಿರುವ ಕೆ.ಅಶ್ರಫ್‌, ಈ ಬಾರಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿಯೇ ಸಿದ್ಧ ಎನ್ನುವ ನಿರ್ಧಾರ ಮಾಡಿದ್ದಾರೆ. ಜೆಡಿಎಸ್‌ ಎರಡನೇ ಪಟ್ಟಿಯಲ್ಲೂ ಕೆ.ಅಶ್ರಫ್‌ ಅವರ ಹೆಸರಿಲ್ಲ. ಹೀಗಾಗಿ ಒಂದು ವೇಳೆ ಜೆಡಿಎಸ್‌ನಿಂದ ಟಿಕೆಟ್‌ ಸಿಗದೇ ಇದ್ದರೂ, ಮಂಗಳೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಭಾನುವಾರ ಸಂಜೆ ನಗರದಲ್ಲಿ ಅಶ್ರಫ್‌ ತಮ್ಮ ಬೆಂಬಲಿಗರ ಸಭೆಯನ್ನೂ ನಡೆಸಿದ್ದಾರೆ. ಸೋಮವಾರದವರೆಗೆ ಜೆಡಿಎಸ್‌ನಿಂದ ಬಿ.ಫಾರ್ಮ್‌ ಸಿಗದೇ ಇದ್ದರೆ, ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ (ಇದೇ 24) ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

**

ಯಾವುದೇ ಗೊಂದಲವಿಲ್ಲ. ಮಂಗಳೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಇದೇ 24 ರಂದು ನಾಮಪತ್ರ ಸಲ್ಲಿಸುತ್ತೇನೆ 
– ಕೆ.ಅಶ್ರಫ್‌,‌ಮಾಜಿ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.