ADVERTISEMENT

‘ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:20 IST
Last Updated 23 ಜುಲೈ 2017, 10:20 IST

ಮೂಡುಬಿದಿರೆ: ಅಪರಾಧ ಪ್ರಕರಣಗಳು ಘಟಿಸಿದಾಗ ಜನ ಪ್ರಾಮಾಣಿಕವಾಗಿ ಮತ್ತು ನಿರ್ಭಯವಾಗಿ ಕಾನೂನು ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ನೈಜ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. ಇದು ನಾಗರಿಕರ ಜವಾಬ್ದಾರಿ. ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.

ಸಾರ್ವಜನಿಕರ ಸಹಕಾರ ದೊರೆತಾಗ ಜನರ ಸಮಸ್ಯೆಗ ಳಿಗೆ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾ ಗುತ್ತದೆ ಎಂದು  ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹನುಮಂತರಾಯ ಹೇಳಿದರು. ಮೂಡುಬಿದಿರೆ ಸ್ವರ್ಣ ಮಂದಿರ ದಲ್ಲಿ ಶನಿವಾರ ಸಂಜೆ ಮಂಗಳೂರು ನಗರ ಪೊಲೀಸ್ ಹಮ್ಮಿಕೊಂಡ ಸುಧಾರಿತ ಬೀಟ್ ವ್ಯವಸ್ಥೆಯ ‘ನಾಗರೀಕ ಮತ್ತು ಸದಸ್ಯರ ಸಭೆ’ಯನ್ನುದ್ದೇಶಿಸಿ ಮಾತನಾಡಿದರು.

ಯಾವ ದೇಶದಲ್ಲೂ ಜೀರೊ ಕ್ರೈಮ್(ಸೊನ್ನೆ ಅಪರಾಧ) ಇಲ್ಲ. ಆದರೆ ಅಪರಾಧ ಪ್ರಕರಣಗಳು ಕಡಿಮೆ ಇರುವ ದೇಶವನ್ನು ಕಾಣಬಹುದು. ಭಾರತ ರಾಮರಾಜ್ಯದ ಕನಸು ಕಾಣುತ್ತಿದೆ. ಅದರ ಹತ್ತಿರಕ್ಕೆ ಬರುವ ಪ್ರಯತ್ನ ನಾವು ಮಾಡಬೇಕು. ಜನ ಮತ್ತು ಪೊಲೀಸ್ ಇಲಾಖೆ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸಲು ಪೊಲೀಸ್ ಬೀಟ್ ಉತ್ತಮ ವ್ಯವಸ್ಥೆ ಎಂದು ಅವರು ಹೇಳಿದರು. 

ADVERTISEMENT

ಎಸಿಪಿ ರಾಜೇಂದ್ರ ಅವರು ಮಾತನಾಡಿ, ‘ಜನರ ಬಳಿ ಪೊಲೀಸರು ಹೋಗುವುದು ಮತ್ತು ಪೊಲೀಸರು ಜನಸ್ನೇಹಿಗಳಾಗುವುದು ಸುಧಾರಿತ ಪೊಲೀಸ್ ಬೀಟ್ ವ್ಯವಸ್ಥೆಯ ಉದ್ದೇಶ. ಇಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಸ್ಥಳೀಯ ಸಮಸ್ಯೆ, ಆಗು ಹೋಗುಗಳನ್ನು ಬೀಟ್ ಪೊಲೀಸ್ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬ ಹುದು’ ಎಂದರು.
ಕಲಾವಿದ ರಾಜೇಶ್ ಭಟ್ ನಿರೂಪಿಸಿದರು.

ಎಸ್.ಐ ದೇಜಪ್ಪ ವಂದಿಸಿದರು.  ಜಿಲ್ಲಾ ಪಂಚಾಯತಿ ಸದಸ್ಯ ಸುಚರಿತ ಶೆಟ್ಟಿ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಮಾಜಿ ಸದಸ್ಯ ಕೃಷ್ಣರಾಜ ಹೆಗ್ಡೆ, ರೈತ ಸಂಘದ ರಾಜವರ್ಮ ಬೈಲಂಗಡಿ, ಸುರೇಶ್ ಕುಮಾರ್, ಯಾದವ ಶೆಟ್ಟಿ, ಬಳಕೆದಾರರ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಲಕ್ಷಣ ಬನ್ನಡ್ಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.