ADVERTISEMENT

‘ಕಾರ್ಮಿಕರ ಅಭಿವೃದ್ಧಿಯಾಗದೆ ಪ್ರಗತಿ ಸಾಧ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:49 IST
Last Updated 20 ಏಪ್ರಿಲ್ 2017, 7:49 IST

ಸುಳ್ಯ:  ‘ಕಾರ್ಮಿಕ ವರ್ಗದ ಅಭಿವೃದ್ಧಿ ಯಾಗದೆ ದೇಶದ  ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್‌ ಹೇಳಿದರು.ಸುಳ್ಯದಲ್ಲಿ ಮಂಗಳವಾರ ಜರುಗಿದ ಸಿಐಟಿಯು 2ನೇ ತಾಲ್ಲೂಕು ಸಮ್ಮೇಳ ನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸಮಾಜದ ಆರ್ಥಿಕ ಚಕ್ರ ತಿರುಗುವಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಮಹತ್ವದ್ದಾಗಿದೆ. ಅಂತಹ ಕಾರ್ಮಿಕ ವರ್ಗದ ಪರವಾದ ನೀತಿಗಳನ್ನು ಜಾರಿಗೊಳಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕಾರಕ್ಕೇರಿದ ಬಳಿಕ, ಬಂಡವಾಳಶಾಹಿಗಳ ಹಾಗೂ ಮಾಲೀಕರ ಪರವಾದ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗಕ್ಕೆ ದ್ರೋಹ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ, ಗುತ್ತಿಗೆ ಕಾರ್ಮಿಕರು, ಸ್ಕೀಂ ಕಾರ್ಮಿಕರು ಸೇರಿದಂತೆ ದೇಶದ ಕೋಟ್ಯಂತರ ಸಂಖ್ಯೆಯ ಅಸಂಘಟಿತ ಕಾರ್ಮಿಕರ ಸಂಕಷ್ಟವನ್ನು ಅರಿಯಲು ಸರ್ಕಾರಗಳು ಮುಂದಾಗುತ್ತಿಲ್ಲ. ನೋಟು ರದ್ದತಿ ಯಿಂದ ಲಕ್ಷಾಂತರ ಕಾರ್ಮಿಕರು ಕೆಲಸಗಳನ್ನು ಕಳೆದುಕೊಂಡು ಇಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಕಾನೂನುಗಳನ್ನು ರಕ್ಷಿಸಿ, ದೇಶವನ್ನು ರಕ್ಷಿಸಿ ಎಂಬ ಘೋಷಣೆಗಳೊಂದಿಗೆ ದುಡಿಯುವ ವರ್ಗ ಒಂದಾಗಿ ಸಂಘಟಿತ ಹೋರಾಟವನ್ನು ನಡೆಸಬೇಕಾಗಿದೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ರಾಬರ್ಟ್ ಡಿಸೋಜ, ‘ರಾಜ್ಯ ಸರ್ಕಾರ ಕೂಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಂಗನವಾಡಿ ಕಾರ್ಯ ಕರ್ತೆಯರ ನೋವನ್ನು ಕೇಳಬೇಕಾದ ಸರ್ಕಾರ, ಅವರ ಹೋರಾಟವನ್ನೇ ಮುರಿಯಲು ಪ್ರಯತ್ನ ನಡೆಸಿದೆ. ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲೂ ಕಾರ್ಮಿಕರ ಪರವಾದ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ. ಪಶ್ಚಿಮ ಬಂಗಾಳ ಮಾದರಿಯಂತೆ ಭವಿಷ್ಯನಿಧಿ ಯೋಜನೆಗೆ ಉತ್ಸುಕತೆ ತೋರಿಸುತ್ತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸಲು ತಯಾರಿಲ್ಲ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ. ಜೋನಿ ಮಾತನಾಡಿ, ‘ಸಮಾಜದಲ್ಲಿ ತೀರಾ ನಿಕೃಷ್ಟವಾಗಿ ಬದುಕುತ್ತಿರುವ ಕಾರ್ಮಿಕರ ಹಕ್ಕು ಬಾಧ್ಯತೆಗಳ ಬಗ್ಗೆ ಅವಿರತವಾಗಿ ಶ್ರಮಿಸುತ್ತಿರುವ ಸಿಐ ಟಿಯು ಇಂದು ದೇಶದಲ್ಲೇ ಬಲಿಷ್ಠ ಕಾರ್ಮಿಕ ಸಂಘಟನೆಯಾಗಿದೆ. ಸಿಐ ಟಿಯು ಕಾರ್ಮಿಕ ವರ್ಗದ ಆಶಾ ಕಿರಣವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.