ADVERTISEMENT

ಚತುರ್ವಿಂಶತಿ ತೀರ್ಥಂಕರರ ಆರಾಧನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 10:50 IST
Last Updated 30 ಜನವರಿ 2015, 10:50 IST

ಕಾರ್ಕಳ (ಹೆಬ್ರಿ): ಕಾರ್ಕಳ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಗೊಮ್ಮಟ ಬೆಟ್ಟದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ರಾಜಪುರೋಹಿತರ ನೇತೃತ್ವದಲ್ಲಿ ನಡೆ ಯುತ್ತಿದ್ದರೆ ಮಹಾಮಸ್ತಕಾಭಿಷೇಕ ಮಹೋತ್ಸವದ 9ನೇ ದಿನ ಪಟ್ಟಣ ಶೆಟ್ಟಿ ಮೈದಾನದ ಭೈರವರಸು ಸಭಾಮಂಟಪದ ವೀರಪಾಂಡ್ಯ ವೇದಿಕೆಯಲ್ಲಿ ಚತುರ್ವಿಂಶತಿ ತೀರ್ಥಂಕರರ ಆರಾಧನೆಯ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.

ಧ್ವಜಪೂಜೆ, ನೇಮಿನಾಥ ಮುನಿಮಹಾರಾಜರು ಬಾಹುಬಲಿ ಬೆಟ್ಟಕ್ಕೆ ಹೊರಡುವುದು. ನಿತ್ಯವಿಧಿ ಸಹಿತ ಗಂಧ ಯಂತ್ರಾರಾಧನೆ, ಮಂತ್ರನ್ಯಾಸ ಕಲಾರೋಪಣ ಪೂರ್ವಕ ಕೇವಲಜ್ಞಾನ ಕಲ್ಯಾಣದ ಬಳಿಕ ಮಧ್ಯಾಹ್ನ 12.06ರ ವೇಳೆಗೆ ನಯನೋನ್ಮಿಲನ ಕಾರ್ಯಕ್ರಮ ನಡೆಯಿತು.

ವೀರ ಪಾಂಡ್ಯ ವೇದಿಕೆಯಲ್ಲಿ ಅಷ್ಟವಿಧಾರ್ಚನೆ ಪೂಜಾ ವಿಧಾನದಲ್ಲಿ ಚತುರ್ವಿಂಶತಿ ತೀರ್ಥಂಕರರ ಆರಾಧನೆಯನ್ನು ರಾಜಪುರೋಹಿತರು ನಡೆಸಿ ಕೊಟ್ಟರು. ಭಗೀರಥ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು. ನವರತ್ನ ದೋಣಿ ಸಹಿತ ಆವರಣ, ವಜ್ರ ಮುತ್ತು ರತ್ನಗಳ ತೋರಣ ಬಂಗಾರದ ಮಾನಸ್ತಂಭ, ಜಿನಾಲಯ, ಚೈತ್ಯಭೂಮಿ, ನಾಟ್ಯ ಸೇವೆ, ಉಪವನ, ಧ್ವಜಭೂಮಿ, ಬೆಳ್ಳಿಕೋಟೆ, ಉನ್ನತ ಕೇಂದ್ರವಾದ ಎರಡು ಬಂಗಾರದ ಪೀಠ, ರತ್ನ ಪೀಠ, ಸುವರ್ಣ ಕಮಲ ಸಹಿತ ಪೀಠದಲ್ಲಿ ವಿರಾಜಮಾನ ನೇಮಿನಾಥ ಸ್ವಾಮಿಯ ಸಮವಸರಣ ಭಕ್ತಿಗಾನ ನೃತ್ಯ ವೈಭವ ನಡೆಯಿತು. ಸರ್ವಯಕ್ಷ ಧರ್ಮಚಕ್ರ ಹೊತ್ತು ವೀರ ಪಾಂಡ್ಯ ವೇದಿಕೆ ಸಮವಸರಣ ಮಂಟಪಕ್ಕೆ ಕೊಂಬು ಕಹಳೆ ವಾಧ್ಯ ಘೋಷದೊಂದಿಗೆ ಬಂದಿರುವುದು ಭಕ್ತಿ, ರಾಜವೈಭವದ ಕಳೆ ನೀಡಿತು. 11 ಮಂದಿ ಗಣಾ ಧಾರಿಗಳು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಅಷ್ಟವಿಧ ಅರ್ಚನೆಗಳು ನಡೆದವು.

ಕಾರ್ಕಳ ಜೈನಮಠದ ಲಲಿತಾಕೀರ್ತಿ ಭಟ್ಟಾರಕ ಸ್ವಾಮೀಜಿ, ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, 108 ಏಲಾಚಾರ್ಯ ನಿಜಾನಂದ ಮುನಿ ಮಹಾರಾಜರು, 108 ಚಿನ್ಮಯ ಸಾಗರ ಮುನಿ ಮಹಾರಾಜರು, ಪಾವನ ಕೀರ್ತಿ ಮುನಿಮಹಾರಾಜರು, ಪ್ರಸಂಗ ಸಾಗರ ಮುನಿ ಮಹಾರಾಜರು, ಶ್ರಾವಕ ಶ್ರಾವಕಿಯರು ಮತ್ತು ಭೈ  ರವರಸು ಸಭಾಮಂಟಪದಲ್ಲಿ ಜೈನ ಧರ್ಮ ಮತ್ತು ಸರ್ವಧರ್ಮದ ಸಾವಿರಾರು ಭಕ್ತ ಸಮೂಹ ಭಗವಾನ್ ನೇಮಿನಾಥ ಸ್ವಾಮಿಯ ಸಮವಸರಣ ಮತ್ತು ತೀರ್ಥಂಕರರ ಆರಾಧನೆಗೆ ಸಾಕ್ಷಿಯಾದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಶ್ರದ್ಧಾ, ಅಮೀತ್, ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ನಿರಂಜನ್ ಕುಮಾರ್, ಪದ್ಮಪ್ರಿಯ, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಮತ್ತು ಕುಟುಂಬಸ್ಥರು ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು.

ಬೆಂಗಳೂರಿನ ದಿವ್ಯಾಕುಮಾರ್ ಬಳಗದವರು ವಿಧಿಗಳನ್ನು ನೆರವೇರಿಸಿದರೆ ಅಜಿತ್ ಕುಮಾರ್ ಕೊಕ್ರಾಡಿ, ಮುನಿರಾಜ ರೆಂಜಾಳ ನಿರೂಪಿಸಿದರು.

–ಸುಕುಮಾರ್ ಮುನಿಯಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.