ADVERTISEMENT

ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ

ಆರೋಗ್ಯ ಸಚಿವ ರಮೇಶ್ ಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:32 IST
Last Updated 16 ಜನವರಿ 2017, 5:32 IST
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ   

ಕೋಟ (ಬ್ರಹ್ಮಾವರ): ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತಂದಲ್ಲಿ ಪ್ರಾಮಾಣಿಕ ವ್ಯಕ್ತಿಗಳ ಆಯ್ಕೆಯೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕಪ್ಪು ಹಣದ ಹಾವಳಿಯಿಂದ ದೇಶ ಮುಕ್ತವಾಗುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ಕೋಟ ಶಿವರಾಮ ಥೀಂ ಪಾಕ್ ನಲ್ಲಿ ಭಾನುವಾರ ಕೋಟತಟ್ಟು ಗ್ರಾಮ ಪಂಚಾಯಿತಿ ನಗದು ರಹಿತ- ಜನರ ಹಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಪ್ಪುಹಣದ ಹಾವಳಿಯಿಂದ ಬಡ ವರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಕಪ್ಪು ಹಣ ದೇಶದ ಅಭಿವೃದ್ಧಿಗೆ ಶತ್ರುವಾಗಿದೆ. ಬಡವರ ಶ್ರಮದ ದುಡಿಮೆ ಯನ್ನು ಇದು ಅವಮಾನಿಸುತ್ತಿದೆ. ಭ್ರಷ್ಟಾಚಾರದ ಬೆಳೆವಣಿಗೆಗೆ ಕಾರಣವಾ ಗಿರುವ ಈ ಹಾವಳಿಗೆ ಕಡಿವಾಣ ಹಾಕಲು ಎಲ್ಲರೂ ಪಕ್ಷಭೇದ ಮರೆತು ದೇಶದ ಹಿತವನ್ನು ಮುಖ್ಯವಾಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಜಾರಿಗೆ ತಂದಿರುವ ನಗದು ರಹಿತ ವ್ಯವಹಾರ ಪಾರದರ್ಶಕ ಆಡಳಿತಕ್ಕೆ ನಿದರ್ಶನವಾಗಿದೆ. ಇತರೆ ಗ್ರಾಮಗಳಿಗೆ ಮಾದರಿಯಾಗಿದೆ. ರಾಜ್ಯದ ಗ್ರಾಮೀಣಾ ಭಿವೃದ್ದಿ ಸಚಿವರೊಂದಿಗೆ ಚರ್ಚಿಸಿ, ಈ ಮಾದರಿಯನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿಕೊಳ್ಳುವ ಕುರಿತಂತೆ ಹಿರಿಯ ಅಧಿಕಾರಿಗಳ ತಂಡವನ್ನು ಇಲ್ಲಿಗೆ ಕಳುಹಿಸಿ, ವರದಿ ಪಡೆದು ರಾಜ್ಯದ ಎಲ್ಲ ಜಿಲ್ಲೆಗಳ ಕನಿಷ್ಠ 2 ಗ್ರಾಮ ಪಂಚಾಯಿತಿಗಳಲ್ಲಾದರೂ ನಗದು ರಹಿತ ವ್ಯವಹಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಐಶ್ವರ್ಯ ಪ್ರದರ್ಶನ, ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಣಕ್ಕೆ ಯಾವಾಗ ಬೆಲೆ, ಗೌರವ ಸಿಗುತ್ತದೆಯೋ ಅಂದು ಭಾರತ ಮಾತೆಯ ಕೀರ್ತಿ ಪ್ರಪಂಚದಾದ್ಯಂತ ಹರಡುತ್ತದೆ ಎಂದ ಅವರು, ಇಂದು ಒಂದು ಸಿನಿಮಾಕ್ಕೆ ₹ 200, 300ಕೋಟಿ ವೆಚ್ಚ ಆಗುತ್ತಿದೆ. ಅದರ ದುಪಟ್ಟು ಹಣ ಗಳಿಕೆಯಾಗುತ್ತದೆ. ಇಂತಹ ಸಿನಿಮಾಗಳಿಂದ ಯಾವುದೇ ಸಂದೇಶವೂ ಸಿಗುವುದಿಲ್ಲ. ಇದನ್ನು ನಿಯಂತ್ರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೋಟತಟ್ಟು ಗ್ರಾಮ ಪಂಚಾಯಿತಿಯಲ್ಲಿ 1,032 ಕುಟುಂಬಗಳು ಇದ್ದು, ಪಂಚಾಯಿತಿಗೆ  ಸಂಬಂಧಿಸಿದ ಎಲ್ಲ ಶುಲ್ಕಗಳನ್ನು ನಗದು ರಹಿತವಾಗಿಯೇ ಪಾವತಿಸಲು ಅನುಕೂಲವಾಗುವಂತೆ ಎಲ್ಲ ಕುಟುಂಬಗಳಿಗೂ ಬ್ಯಾಂಕ್ ಖಾತೆ ತೆರೆಸಿ, ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸೋಮವಾರದಿಂದ ಪಂಚಾಯಿತಿ ಕಟ್ಟಡ ಪರವಾನಗಿ, ಮನೆ ತೆರಿಗೆ , ನೀರಿನ ತೆರಿಗೆ ಸೇರಿದಂತೆ ಎಲ್ಲ ವ್ಯವಹಾರಗಳು ನಗದು ರಹಿತವಾಗಿ ನಡೆಯಲಿವೆ ಎಂದು ತಿಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್‌ ತಜ್ಞ ಜನಾರ್ದನ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಸಾಂಸ್ಕೃತಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಕುಂದಾಪುರದ ಚೆನ್ನಪ್ಪ ಮ್ಯೊಲಿ, ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್, ಕೋಟತಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಲೋಕೇಶ್ ಶೆಟ್ಟಿ, ಡಾ.ಕಾರಂತ ಹುಟ್ಟೂರ ಪ್ರತಿಷ್ಠಾನ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಮೋದ್ ಹಂದೆ ಸ್ವಾಗತಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಪಿಡಿಒ ಸತೀಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.