ADVERTISEMENT

ಜಗದೀಶ್ ಕಾರಂತ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 8:52 IST
Last Updated 22 ಸೆಪ್ಟೆಂಬರ್ 2017, 8:52 IST
ಜಗದೀಶ್ ಕಾರಂತ
ಜಗದೀಶ್ ಕಾರಂತ   

ಮಂಗಳೂರು: ಸೆಪ್ಟೆಂಬರ್ 15ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೋಮು ಗಲಭೆ ನಡೆಸುವುದಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮತ್ತು ಪೊಲೀಸ್ ಅಧಿಕಾರಿಯನ್ನು ತಲೆ ಬೋಳಿಸಿ, ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ ವಿರುದ್ಧ ಪೊಲೀಸರು ಬುಧವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಖಾದರ್‌ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕಾರಂತ ಮಾಡಿದ್ದ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರಂತ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಬುಧವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕಾರಂತ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್ ರೆಡ್ಡಿ ಅವರಿಗೆ ನಿರ್ದೇಶನ ನೀಡಿದ್ದರು.

ಕಾರಂತ ವಿರುದ್ಧ ವಿವಿಧ ಧರ್ಮದ ಜನರ ನಡುವೆ ದ್ವೇಷ ಬಿತ್ತುವಂತಹ ಭಾಷಣ ಮಾಡಿರುವುದು (ಐಪಿಸಿ ಸೆಕ್ಷನ್ 505(1)ಸಿ ), ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು, ಜನಾಂಗ, ಧರ್ಮ, ಜಾತಿ ಆಧಾರದಲ್ಲಿ ಜನರ ನಡುವೆ ದ್ವೇಷ ಬಿತ್ತಲು ಯತ್ನ (ಐಪಿಸಿ ಸೆಕ್ಷನ್ 505(2)), ಭಾಷಣ, ಸಂಜ್ಞೆ ಅಥವಾ ದೃಶ್ಯಾವಳಿಗಳ ಮೂಲಕ ಕೋಮುದ್ವೇಷ ಹಬ್ಬಿಸಲು ಯತ್ನಿಸಿರುವುದು (ಐಪಿಸಿ ಸೆಕ್ಷನ್ 153(ಎ) ಮತ್ತು ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ADVERTISEMENT

‘ಹಲವು ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ಪೊಲೀಸ್ ಅಧಿಕಾರಿ ಹೀಗೆಯೇ ಮಾಡುತ್ತಿದ್ದರು. ವರ್ತನೆ ಬದಲಿಸಿಕೊಳ್ಳದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುತ್ತದೆ ಎಂದು ಆ ಅಧಿಕಾರಿಗೆ ಎಚ್ಚರಿಕೆ ನೀಡಿದ್ದೆ. ಅವರ ವರ್ತನೆ ಹಾಗೆಯೇ ಇತ್ತು. ಪರಿಣಾಮವಾಗಿ ಸುರತ್ಕಲ್ ಹೊತ್ತಿ ಉರಿದಿತ್ತು. ಹಲವು ಹೆಣಗಳು ಉರುಳಿದ್ದವು. ಸಬ್ ಇನ್‌ಸ್ಪೆಕ್ಟರ್ ಖಾದರ್ ವರ್ತನೆ ಬದಲಿಸಿಕೊಳ್ಳದಿದ್ದರೆ ಪುತ್ತೂರು ಹಳೆ ಸುರತ್ಕಲ್ ಆದೀತು’ ಎಂದು ಕಾರಂತ ತಮ್ಮ ಭಾಷಣದಲ್ಲಿ ಹೇಳಿದ್ದರು.

‘ಖಾದರ್ ಹಿಂದೂಗಳ ವಿರುದ್ಧ ಇದೇ ರೀತಿ ನಡೆದುಕೊಂಡರೆ ಆತನ ತಲೆ ಬೋಳಿಸಿ, ಬೆತ್ತಲೆ ಮಾಡಿ, ಕತ್ತೆಯ ಮೇಲೆ ಮೆರವಣಿಗೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿರುವುದು ವಿಡಿಯೊ ದೃಶ್ಯಾವಳಿಯಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.