ADVERTISEMENT

ಜಿಎಸ್‍ಟಿ: ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 5:31 IST
Last Updated 29 ಡಿಸೆಂಬರ್ 2017, 5:31 IST

ಸುರತ್ಕಲ್: 'ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ' ಎಂಬ ಅಪೂರ್ವ ಪರಿಕಲ್ಪನೆಯ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿಯ ಅಳವಡಿಕೆ ಆರ್ಥಿಕ ಕ್ಷೇತ್ರದಲ್ಲಿಯೇ ಕ್ರಾಂತಿಕಾರಕ ಹೆಜ್ಜೆಯಾಗಿದೆ’ ಎಂದು ಆರ್ಥಿಕ ತಜ್ಞ ಸಿಎ ಶ್ರೀಧರ ಕಾಮತ್ ಉಡುಪಿ ತಿಳಿಸಿದರು.

ಗೋವಿಂದ ದಾಸ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ವ್ಯವಹಾರ ಆಡಳಿತ ನಿರ್ವಹಣಾ ಉಪನ್ಯಾಸಕರ ಸಂಘದಿಂದ ಬಿಬಿಎಂ 6ನೇ ಸೆಮಿಸ್ಟರ್‍ನ ಬಿಸಿನೆಸ್ ಟ್ಯಾಕ್ಸೇಶನ್ ಪಠ್ಯದ ಪರಿಷ್ಕೃತ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿರುವ ಜಿಎಸ್‍ಟಿ ವಿಷಯದ ಕುರಿತ ವಿಶ್ವ ವಿದ್ಯಾಲಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರಕು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವಲ್ಲಿ ನೂತನ ಸವಾಲುಗಳಿದ್ದು, ಆರ್ಥಿಕ ಸುಧಾರಣೆಯೊಂದಿಗೆ ತೆರಿಗೆ ಸಂಗ್ರಹ ಪ್ರಮಾಣ ವರ್ಧಿಸಲಿದೆ. ತೆರಿಗೆ ಪ್ರಕ್ರಿಯೆ ನಿರ್ವಹಣೆಗೆ ಪರಿಣಿತರ ಅವಶ್ಯಕತೆ ಇದ್ದು, ಬಿ.ಕಾಂ, ಬಿಬಿಎಂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಎಂ.ವೆಂಕಟ್‌ರಾವ್‌ ಮಾತನಾಡಿ, ‘ಪಠ್ಯಕ್ರಮದಲ್ಲಿ ಜಿಎಸ್‍ಟಿ ಕುರಿತು ವಿಷಯ ಅಧ್ಯಯನ ಅಳವಡಿಸಿರುವುದು ಸ್ವಾಗತಾರ್ಹವಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.

ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ರತ್ನಾಕರ ರಾವ್ ವೈ.ವಿ, ವ್ಯವಹಾರ ಆಡಳಿತ ಶಿಕ್ಷಕರ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಸುಮನಾ ಸೋಮಪ್ಪ, ಕೋಶಾಧಿಕಾರಿ ಉದಯ ಶೆಟ್ಟಿ, ಕಾಲೇಜಿನ ಆಡಳಿತಾತ್ಮ ನಿರ್ದೇಶಕ ಮಧುಸೂಧನ ರಾವ್, ಪ್ರಾಚಾರ್ಯ ಡಾ.ಬಿ.ಮುರಳೀಧರ ರಾವ್, ಉಪ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು.

ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಗಣೇಶ್ ಆಚಾರ್ಯ ಸ್ವಾಗತಿಸಿದರು. ಶ್ರೀದೇವಿ ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕಿ ಶಿಲ್ಪಾರಾಣಿ ವಂದಿಸಿದರು. ಮಿಲಿಟಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.