ADVERTISEMENT

ಜಿಲ್ಲೆಯಲ್ಲಿ ಮತ್ತೆ ಪೊಲೀಸ್ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:15 IST
Last Updated 6 ಸೆಪ್ಟೆಂಬರ್ 2017, 7:15 IST

ಮಂಗಳೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ವಿರುದ್ಧ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್‌ ರ‍್ಯಾಲಿಗಾಗಿ ಹೊರ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ದಕ್ಷಿಣ ಕನ್ನಡ ಪ್ರವೇಶಿಸದಂತೆ ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲೆಯಲ್ಲೂ ರ‍್ಯಾಲಿ, ಪ್ರತಿಭಟನಾ ಸಭೆ ತಡೆಗೆ ಪೊಲೀಸ್‌ ಇಲಾಖೆ ಬಿಗಿ ತೀವ್ರ ಕಣ್ಗಾವಲು ಆರಂಭಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿ ಯುವ ಮೋರ್ಚಾದ ಬೈಕ್‌ ರ‍್ಯಾಲಿ ಮತ್ತು ಪ್ರತಿಭಟನಾ ಸಭೆಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಮಂಗಳವಾರವೇ ಮಂಗಳೂರಿನತ್ತ ಹೊರಟಿದ್ದ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಅಲ್ಲಲ್ಲಿ ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದಲ್ಲೂ ರ‍್ಯಾಲಿ ಮತ್ತು ಸಭೆಗೆ ಅನುಮತಿ ನಿರಾಕರಿಸಿಲ್ಲ. ಪೊಲೀಸ್‌ ಇಲಾಖೆಯ ಆದೇಶ ಉಲ್ಲಂಘಿಸಿ ರ‍್ಯಾಲಿ ಮತ್ತು ಪ್ರತಿಭಟನಾ ಸಭೆ ನಡೆಸುವುದಾಗಿ ಬಿಜೆಪಿ ಸವಾಲು ಹಾಕಿದೆ. ಅದನ್ನು ತಡೆಯಲು ಪೊಲೀಸರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ 135 ಸದಸ್ಯ ಬಲದ ಒಂದು ಕಂಪನಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ ಹತ್ತು ಮತ್ತು ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಐದು ತುಕಡಿಗಳು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ 100 ಪೊಲೀಸ್‌ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ADVERTISEMENT

ಒಂದು ವಾರದಿಂದಲೂ ನಗರದ ವಿವಿಧ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸುತ್ತಿರುವ ಪೊಲೀಸ್ ಪಡೆಗಳು, ಅಹಿತಕರ ಘಟನೆ ನಡೆದರೆ ಹತ್ತಿಕ್ಕಲು ಸಿದ್ಧವಿರುವುದಾಗಿ ಸಂದೇಶ ರವಾನಿಸುತ್ತಿವೆ. ಉಳ್ಳಾಲದ ಮೊಗವೀರಪಟ್ಣ, ಕೋಟೆಪುರ, ಕೋಡಿ, ಪ್ಯಾರೀಸ್‌ ಜಂಕ್ಷನ್‌, ತೊಕ್ಕೊಟ್ಟು ಜಂಕ್ಷನ್‌, ಕುತ್ತಾರ್‌ ಸೇರಿದಂತೆ ಹಲವು ಕಡೆಗಳಲ್ಲಿ ಮಂಗಳವಾರ ಪೊಲೀಸ್‌ ಪಡೆಗಳ ಪಥ ಸಂಚಲನ ನಡೆಯಿತು. ಕ್ಷಿಪ್ರ ಕಾರ್ಯಾಚರಣೆ ಪಡೆ, ಸಶಸ್ತ್ರ ಮೀಸಲು ಪಡೆ ಪೊಲೀಸರು, ಸಿವಿಲ್‌ ಪೊಲೀಸರು ಮತ್ತು ನಗರ ಪೊಲೀಸ್‌ ಕಮಿಷನರೇಟ್‌ನ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

‘ನಗರ ಪ್ರವೇಶಿಸುವ ಎಲ್ಲ ಕಡೆಗಳಲ್ಲಿ ವಾಹನಗಳ ತಪಾಸಣೆಗೆ ಸೂಚನೆ ನೀಡಲಾಗಿದೆ. ರ‍್ಯಾಲಿ ಉದ್ದೇಶದಿಂದ ಯಾವುದೇ ವ್ಯಕ್ತಿಗಳು ನಗರದೊಳಕ್ಕೆ ಬಂದು ಗುಂಪು ಸೇರದಂತೆ ಎಚ್ಚರ ವಹಿಸಲಾಗಿದೆ. ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲೂ ಗಸ್ತು ಹೆಚ್ಚಿಸಲಾಗಿದೆ’ ಎಂದು ನಗರದ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಗಳಲ್ಲಿ ತಪಾಸಣೆ: ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆಯ 15 ತುಕಡಿಗಳು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಲ್ಲ ಕಡೆಗಳಲ್ಲೂ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದರು.

ಮಡಿಕೇರಿ, ಹಾಸನ ಮತ್ತು ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ತನಿಖಾ ಠಾಣೆಗಳನ್ನು ಆರಂಭಿಸಲಾಗಿದೆ. ರ‍್ಯಾಲಿ ಉದ್ದೇಶಕ್ಕಾಗಿ ಜಿಲ್ಲೆ ಪ್ರವೇಶಿಸಲು ಬರುವವರನ್ನು ಅಲ್ಲಿಯೇ ತಡೆದು ವಾಪಸು ಕಳುಹಿಸಲಾಗುವುದು. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ರ‍್ಯಾಲಿ ಉದ್ದೇಶದಿಂದ ಗುಂಪು ಸೇರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಪ್ರತಿಬಂಧಕಾಜ್ಞೆಗೆ ಸಿದ್ಧತೆ: ಗುರುವಾರ ಬಿಜೆಪಿ ಕಾರ್ಯಕರ್ತರು ರ‍್ಯಾಲಿ ಮತ್ತು ಸಭೆ ನಡೆಸುವುದನ್ನು ತಡೆಯಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿಷೇಧಾಜ್ಞೆಯ ಬದಲಿಗೆ ಕರ್ನಾಟಕ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 35ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.