ADVERTISEMENT

‘ತೆರಿಗೆರಹಿತ ಪ್ರಭುತ್ವ: ಅರ್ಥಕ್ರಾಂತಿಯ ಆಶಯ’

ಬ್ಯಾಂಕ್‌ ವ್ಯವಹಾರ ತೆರಿಗೆಯಿಂದ ಬಹುಪಾಲು ಸಮಸ್ಯೆ ನಿವಾರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:44 IST
Last Updated 22 ಮಾರ್ಚ್ 2017, 6:44 IST

ಮಂಗಳೂರು: ತೆರಿಗೆರಹಿತ ಪ್ರಭುತ್ವದ ಆಶಯವನ್ನು ಅರ್ಥಕ್ರಾಂತಿ ಹೊಂದಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆ ಪದ್ಧತಿಗಳನ್ನು ತೆಗೆದು ಹಾಕಿ, ಒಂದೇ ತೆರಿಗೆ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿ ದೆ ಎಂದು ಅರ್ಥಕ್ರಾಂತಿ ಪ್ರತಿಷ್ಠಾನದ ಸ್ಥಾಪಕ ಅನಿಲ್‌ ಬೋಕಿಲ್‌ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮದು ತೆರಿಗೆ ಹೊರತುಪಡಿಸಿ ಬೇರಾ ವುದೇ ತೆರಿಗೆ ಇರಬಾರದು. ಬ್ಯಾಂಕ್ ವ್ಯವಹಾರ ತೆರಿಗೆ ವ್ಯವಸ್ಥೆ ಜಾರಿಗೆ ಬರಬೇಕು. ಹಣ ಸ್ವೀಕರಿಸುವ ಬ್ಯಾಂಕ್‌ ಖಾತೆಗೆ ತೆರಿಗೆ ಹಾಕಬೇಕು.

ಈ ಮೂಲಕ ಸಂಗ್ರಹವಾಗುವ ತೆರಿಗೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪಾಲನ್ನು ನೇರವಾಗಿ ಸಂದಾಯ ಮಾಡಬಹುದು. ಜತೆಗೆ ಬ್ಯಾಂಕ್‌ಗಳೂ ಈ ವ್ಯವಸ್ಥೆಯ ವೆಚ್ಚವನ್ನು ಭರಿಸಲು ಸಾಧ್ಯವಾಗಲಿದೆ ಎಂದರು.

ಬ್ಯಾಂಕ್‌ ವ್ಯವಹಾರ ತೆರಿಗೆಯಿಂದ ಆದಾಯ ತೆರಿಗೆ, ಸ್ಟಾಂಪ್ ಡ್ಯೂಟಿ, ಸೇವಾ ತೆರಿಗೆಯಂತಹ ವ್ಯವಸ್ಥೆಗಳು ಮುಕ್ತಾಯ ಆಗಲಿದೆ. ಜನರ ಕೈಗೆ ಹೆಚ್ಚಿನ ಹಣ ದೊರೆಯಲಿದೆ. ಇದರಿಂದ ಜನರು ಪ್ರಾಮಾಣಿಕರಾಗಲಿದ್ದಾರೆ. ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ. ಚುನಾವಣೆಗಳಲ್ಲಿ ಹಣ ಬಲ ಕಡಿಮೆ ಆಗಲಿದ್ದು, ಒಳ್ಳೆಯ ಜನಪ್ರತಿನಿಧಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

ನಗದು ವ್ಯವಹಾರದ ಮೇಲೆ ತೆರಿಗೆ ವಿಧಿಸಬಾರದು. ಆದರೆ ₹50ಕ್ಕಿಂತ ಹೆಚ್ಚಿನ ಮೌಲ್ಯದ ನೋಟುಗಳೆಲ್ಲ ರದ್ದಾಗ ಬೇಕು. ₹50ಕ್ಕಿಂತ ಕಡಿಮೆ ಮುಖಬೆಲೆ ಯ ನೋಟುಗಳು ಅನಕ್ಷರಸ್ಥರ ವಹಿವಾಟಿಗೆ ಅನುಕೂಲ ಆಗಲಿದೆ. ಇದರ ಜತೆಗೆ ನಗದು ವ್ಯವಹಾರಕ್ಕೆ ಮಿತಿ ವಿಧಿಸಬೇಕು ಎಂದು ತಿಳಿಸಿದರು. 

ನೋಟು ರದ್ದತಿ ಅಗತ್ಯ: ದೊಡ್ಡ ಮೊತ್ತದ ನೋಟುಗಳ ಚಲಾವಣೆಯಿಂದಲೇ ಸಮಸ್ಯೆಗಳು ಉದ್ಭವಿಸುತ್ತಿವೆ. ಒಳ್ಳೆಯ ಅರ್ಥವ್ಯವಸ್ಥೆಗೆ ದೊಡ್ಡ ಮೊತ್ತದ ನೋಟುಗಳ ಚಲಾವಣೆ ಇರಬಾರದು ಎಂಬುದು ಅರ್ಥಕ್ರಾಂತಿ ಸ್ಪಷ್ಟ ಅಭಿಪ್ರಾಯ ವಾಗಿದೆ ಎಂದು ಹೇಳಿದರು.

ಶೇ 86ರಷ್ಟು ನಗದನ್ನು ಹಿಂತೆಗೆದು ಕೊಂಡಿದ್ದರಿಂದ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ, ಇಂತಹ ಕ್ರಮ ಅಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟ ಅವರು, ಸಾಮಾನ್ಯ ಜನರಿಗೆ ನಗದು ವಹಿವಾಟು ಬೇಕಾಗಿಲ್ಲ. ಆದರೆ, ರಾಜಕಾರಣಿಗಳಿಗೆ ಇದು ಅಗತ್ಯವಾಗಿದೆ. ಅದಕ್ಕಾಗಿಯೇ ಈ ರೀತಿಯ ಹೋರಾಟ ನಡೆಸಲಾಗುತ್ತಿದೆ. ಸಾಮಾನ್ಯ ಜನರಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.

ಸದೃಢ ಅರ್ಥ ವ್ಯವಸ್ಥೆಗೆ ಅಗತ್ಯವಿರುವ ಮಾರ್ಗೋಪಾಯಗಳನ್ನು ತಿಳಿಸುವ ಕೆಲಸವನ್ನು ಅರ್ಥಕ್ರಾಂತಿ ಕಳೆದ 24 ವರ್ಷಗಳಿಂದ ಮಾಡುತ್ತಿದೆ. ಇದೊಂದು ರಾಜಕೀಯೇತರ ಸಂಘಟನೆ ಯಾಗಿದ್ದು, ಯಾವುದೇ ವಾದಗಳಿಗೆ ಅಂಟಿಕೊಂಡಿಲ್ಲ. ಆದರೆ ಅರ್ಥಕ್ರಾಂತಿ ಯ ಪ್ರಸ್ತಾವನೆಗಳ ಬಗ್ಗೆ ಗಂಭೀರ ಚರ್ಚೆಗಳು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

*
ನೋಟು ರದ್ದತಿಯನ್ನು ದೇಶದ ಜನರು ಸಂಯಮದಿಂದ ಎದುರಿಸಿದ್ದೇವೆ. ಇದು ಪ್ರೌಢ ಪ್ರಜಾಪ್ರಭುತ್ವದ ಲಕ್ಷಣ.
-ಅನಿಲ್‌ ಬೋಕಿಲ್‌,
ಅರ್ಥಕ್ರಾಂತಿ ಪ್ರತಿಷ್ಠಾನದ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT