ADVERTISEMENT

‘ದಿಕ್ಕುದೆಸೆ ಇಲ್ಲದ ಆರ್ಥಿಕತೆ ದೇಶಕ್ಕೆ ಗಂಡಾಂತರ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:03 IST
Last Updated 9 ನವೆಂಬರ್ 2017, 9:03 IST
ಸಚಿವ ಯು.ಟಿ. ಖಾದರ್‌
ಸಚಿವ ಯು.ಟಿ. ಖಾದರ್‌   

ಮಂಗಳೂರು: ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ರಾಜಕೀಯ ಲಾಭಕ್ಕೆ ಮಾಡಿರುವ ಯೋಜನೆಗಳಿಂದ ದೇಶದ ಜನರು ಗಂಡಾಂತರ ಎದುರಿಸಬೇಕಾಗಿದೆ ಎಂದು ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಇಡೀ ಜಗತ್ತು ಆರ್ಥಿಕ ಹಿಂಜರಿತ ಅನುಭವಿಸುವಂತಾಗಿತ್ತು.

ಆದರೆ, ಭಾರತದ ಆರ್ಥಿಕತೆ ಮಾತ್ರ ಸದೃಢವಾಗಿತ್ತು. ಆದರೆ, ಈಗ ಇಡೀ ಜಗತ್ತು ಆರ್ಥಿಕ ಪ್ರಾಬಲ್ಯ ಸಾಧಿಸುತ್ತಿದ್ದು, ಭಾರತದಲ್ಲಿ ಮಾತ್ರ ಜನರು ಹಣಕ್ಕಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಕಪ್ಪು ಹಣ ಪತ್ತೆ ಮಾಡುವ ಕಾರ್ಯ ವನ್ನು ಎಲ್ಲ ಸರ್ಕಾರಗಳೂ ಮಾಡುತ್ತಲೇ ಬಂದಿವೆ. ಇದರಲ್ಲಿ ಹೊಸತು ಏನಿಲ್ಲ ಎಂದ ಅವರು, ಮೋದಿ ಸರ್ಕಾರ ಪತ್ತೆ ಮಾಡಿದ ಕಪ್ಪುಹಣಕ್ಕಿಂತ ಹೆಚ್ಚು ಹಣ ವನ್ನು, ಹೊಸ ನೋಟು ಮುದ್ರಿಸಲು ಖರ್ಚು ಮಾಡಲಾಗಿದೆ ಎಂದರು.

ADVERTISEMENT

2012–13 ರಲ್ಲಿ ₹29,630 ಕೋಟಿ, 2013–14 ರಲ್ಲಿ 1,01,183 ಕೋಟಿ, 2014–15ರಲ್ಲಿ 23,721 ಕೋಟಿ, 2017–16ರಲ್ಲಿ 20,721 ಕೋಟಿ ಹಾಗೂ 2016–17ರಲ್ಲಿ 29,211 ಕೋಟಿ ಕಪ್ಪು ಹಣ ಪತ್ತೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರದ ಸಚಿವಾಲಯ ದಿಂದಲೇ ಪಡೆಯಲಾಗಿದೆ. ಇದನ್ನು ನೋಡಿದರೆ, ಯುಪಿಎ ಸರ್ಕಾರವೇ ಹೆಚ್ಚು ಕಪ್ಪು ಹಣ ಪತ್ತೆ ಮಾಡಿದೆ ಎಂದು ತಿಳಿಸಿದರು.

ಮೋದಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಹೇಳಿರುವ ಯಾವುದೇ ಕಾರ್ಯವನ್ನು ಮಾಡಿಲ್ಲ. ಕೆಲಸ ಕೊಡು ವುದು ಬಿಡಿ, ಇರುವ ಕೆಲಸವನ್ನು ಕಳೆದು ಕೊಳ್ಳುವಂತೆ ಈ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಇಂದಿರಾ ಕ್ಯಾಂಟೀನ್: ಜನವರಿಯಲ್ಲಿ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆ. ಈಗಾಗಲೇ ಸ್ಥಳ ಗುರುತಿಸಲು ಹಾಗೂ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಖಾದರ್‌ ತಿಳಿಸಿದರು.

ಉಳ್ಳಾಲದ ತೊಕ್ಕೊಟ್ಟಿನಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಮಂಗಳೂರಿನಲ್ಲಿ 5, ಉಳಿದ ನಾಲ್ಕು ತಾಲ್ಲೂಕುಗಳಲ್ಲಿ ತಲಾ ಒಂದು ಕ್ಯಾಂಟೀ ನ್‌ಗಳು ಆರಂಭವಾಗಲಿವೆ ಎಂದು ತಿಳಿಸಿದರು.

ಟಿಪ್ಪು ಜಯಂತಿ: ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ. ಮಹನೀಯರ ತತ್ವ, ಆದರ್ಶಗಳನ್ನು ತಿಳಿಸಲು ಜಯಂತಿ ಆಚರಿಸಲಾಗುತ್ತಿದೆ. ಹೀಗಾಗಿ ಜಯಂತಿಗಳನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಹೇಳಿದರು.

ಮಂಗಳೂರು ದರ್ಶನ ಕೃತಿಯಲ್ಲಿ ಏನು ಬರೆದಿದ್ದಾರೆ ಎಂಬುದು ತಿಳಿದಿಲ್ಲ. ಯಾವ ಉದ್ದೇಶದಲ್ಲಿ ಅದನ್ನು ಬರೆದಿದ್ದಾರೆ ಎಂಬುದನ್ನು ನೋಡ ಬೇಕು. ಪುಸ್ತಕಕ್ಕೂ, ಟಿಪ್ಪು ಜಯಂತಿಗೂ ಜೋಡಿಸುವುದು ಬೇಡ ಎಂದರು. ಪರಿವರ್ತನಾ ರ‍್ಯಾಲಿಗೆ ಬೆಂಗಳೂ ರಿನಲ್ಲಿ ಜನರೇ ಉತ್ತರ ನೀಡಿದ್ದಾರೆ. ಅದೊಂದು ರಾಜಕೀಯ ರ‍್ಯಾಲಿ. ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.