ADVERTISEMENT

ನಕಲಿ ಗಾಂಧಿಗಳ ಹೆಸರಲ್ಲಿ ಮತ ಯಾಚನೆ– ಟೀಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 9:56 IST
Last Updated 15 ಏಪ್ರಿಲ್ 2014, 9:56 IST
ನಕಲಿ ಗಾಂಧಿಗಳ ಹೆಸರಲ್ಲಿ ಮತ ಯಾಚನೆ– ಟೀಕೆ
ನಕಲಿ ಗಾಂಧಿಗಳ ಹೆಸರಲ್ಲಿ ಮತ ಯಾಚನೆ– ಟೀಕೆ   

ವಿಟ್ಲ: ಗಾಂಧಿಯ ಹೆಸರಿನಲ್ಲಿ ಮತಯಾಚನೆ ಮಾಡಿದರೆ, ಮಾತ್ರ ಕಾಂಗ್ರೆಸ್ಸಿಗೆ ಮತ ಬೀಳುತ್ತದೆ ಎಂಬ ದುರುದ್ದೇಶದಿಂದ ಅವರು ನಕಲಿ ಗಾಂಧಿಗಳ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಹೇಳಿದರು.

ವಿಟ್ಲದಲ್ಲಿ ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಸೋಮವಾರ ಸಂಜೆ ರೋಡ್ ಷೋ ನಡೆಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರದಿಂದ ರೈತರ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಬಿಸಿಯೂಟ, ಸಮವಸ್ತ್ರ ವಿತರಣೆ ಮೊದಲಾದ ಅನುಕೂಲ ಅಭಿವೃದ್ಧಿಗಳು ನಡೆದಿದೆ. ಕಾಂಗ್ರೆಸ್‌ನಿಂದ ದೇಶದ ಸೈನಿಕರಿಗೂ ರಕ್ಷಣೆ ಇಲ್ಲದಂತಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಎಲ್ಲರೂ ತೀರ್ಮಾನಿಸಿದ್ದಾರೆ ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ ಜಾತಿಯನ್ನು ಓಲೈಸಿಕೊಂಡು ಬಿಜೆಪಿ ಮತಯಾಚಿ­ಸದು, ಬದಲಾಗಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ, ಹಿಂದುತ್ವದ ಮೂಲಕವೇ ಓಟು ಕೇಳುತ್ತಿದ್ದೇವೆ. ಕಾಂಗ್ರೆಸ್ ಸ್ವಾರ್ಥ ರಾಜಕಾರಣದಲ್ಲಿ ಕೊಳೆತು ಹೋಗಿದೆ. ಜಾತಿ, ಮತ ಮೀರಿ ದೇಶಕ್ಕಾಗಿ ಪಣತೊಟ್ಟಿರುವ ಬಿಜೆಪಿಯ ಗೆಲುವಿಗಾಗಿ ಕಾರ್ಯ­ಕರ್ತರು ನಿಸ್ವಾರ್ಥದಿಂದ ದುಡಿಯುತ್ತಿ­ದ್ದಾರೆ,

ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ­ಗಳನ್ನು ಪಡೆಯುವ ಮೂಲಕ ಬಿಜೆಪಿ ಎನ್‌ಡಿಎ ಹೆಸರಲ್ಲಿ ಸರಕಾರ ರಚಿಸಲಿದೆ ಎಂದರು. 
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿದರು. ಜಿಲ್ಲಾ ಪಂಚಾ­ಯಿತಿ ಸದಸ್ಯೆ ಶೈಲಜಾ ಭಟ್ ಕೆ.ಟಿ, ಸಾಜಾ ರಾಧಾ­ಕೃಷ್ಣ ಶೆಟ್ಟಿ, ಮಾಜಿ ಉಪಾಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ವಸಂತ ಪ್ರಭು ಉಪಸ್ಥಿತರಿದ್ದರು.

ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಲೋಕನಾಥ ಶೆಟ್ಟಿ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. ವಿಟ್ಲದ ಪ್ರಮುಖ ರಸ್ತೆಗಳಲ್ಲಿ ರೋಡ್ ಷೋ ಘೋಷಣೆ, ಜಯಕಾರಗಳೊಂದಿಗೆ ಸಾಗಿತು. ನರೇಂದ್ರ ಮೋದಿ­ಯ ಯಥಾ ರೂಪದ ವಸಂತ ಪ್ರಭು ಅವರು ವಿಶೇಷ ಆಕರ್ಷಣೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.