ADVERTISEMENT

ನಿರಾಶ್ರಿತರಿಗೆ ಪರಿಹಾರ ಶೀಘ್ರವೇ ಸಿಗಲಿ: ಸ್ವರ್ಣವಲ್ಲೀ ಶ್ರೀ

ಅಮದಳ್ಳಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ; ಸಾಧನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:42 IST
Last Updated 16 ನವೆಂಬರ್ 2017, 10:42 IST

ಕಾರವಾರ: ‘ಬೃಹತ್ ಯೋಜನೆಗಳಿಗಾಗಿ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರಾದ ಜನರು ಪರಿಹಾರಕ್ಕಾಗಿ ಇನ್ನೂ ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ ಸಂಗತಿ. ಅವರಿಗೆ ಶೀಘ್ರವೇ ಪರಿಹಾರ ಹಣ ಸಿಗಲಿ’ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸಾಮೀಜಿ ಆಶಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವ– ಸಹಾಯ ಸಂಘಗಳ ಒಕ್ಕೂಟವು ಬುಧವಾರ ತಾಲ್ಲೂಕಿನ ಅಮದಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಪ್ರತಿ ಮನೆಯಲ್ಲಿ ಭಗವದ್ಗೀತೆ ಇರಲಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಗಾರದ ಕಮಲವಿದ್ದಂತೆ. ಅದರ ಕಾರ್ಯಕ್ರಮಗಳೊಂದಿಗೆ ಭಗವದ್ಗೀತೆ ಸುಗಂಧ ಸೇರಿದಂತೆ. ಪ್ರತೀ ಮನೆಯಲ್ಲಿಯೂ ಭಗವದ್ಗೀತೆ ಇರಬೇಕು. ಎಲ್ಲರೂ ಅದನ್ನು ಓದಬೇಕು. ವಿಶ್ವದ ಎಲ್ಲ ಭಾಷೆಗಳಲ್ಲಿ ಇರುವ, ಅತಿ ಹೆಚ್ಚು ಆವೃತ್ತಿಗಳನ್ನು ಹೊಂದಿರುವ ಏಕೈಕ ಗ್ರಂಥ ಭಗವದ್ಗೀತೆ. ಅದನ್ನು ನಮ್ಮ ಜನರೇ ಓದಿಲ್ಲ ಅಂದರೆ ಅನ್ಯಾಯ. ಪ್ರತಿ ವರ್ಷ ಅಕ್ಟೋಬರ್, ನವೆಂಬರ್‌ ತಿಂಗಳಿನಲ್ಲಿ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ’ ಎಂದರು.

ADVERTISEMENT

ಗೌರವಿಸುವ ಗುಣ ಬೆಳೆಸಿಕೊಳ್ಳಿ: ‘ದೇವರ ಚಿಂತನೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚೆಚ್ಚು ಪ್ರಯೋಜನ ಲಭಿಸುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಸಂಶೋಧನೆಯೊಂದರ ವರದಿಯ ಪ್ರಕಾರ ಇನ್ನಿತರೆ ಕೆಲಸವನ್ನು ಮಾಡುವಾಗ ಮನುಷ್ಯನ ದೇಹದ 40 ನಾಡಿಗಳು ಕ್ರಿಯಾಶೀಲವಾಗಿರುತ್ತದೆ. ಆದರೆ ದೇವರ ಸ್ಮರಣೆಯ ವೇಳೆ ಕೇವಲ 9 ನಾಡಿಗಳು ಕ್ರಿಯೆಯಲ್ಲಿದ್ದು, ಉಳಿದೆಲ್ಲವೂ ವಿಶ್ರಾಂತಿಯಲ್ಲಿರುತ್ತವೆ. ಹಿರಿಯರಿಗೆ, ತಂದೆ– ತಾಯಿಗಳಿಗೆ ಹಾಗೂ ದೇವರಿಗೆ ನಮಸ್ಕರಿಸುವ, ಗೌರವಿಸುವ ಗುಣ ಎಲ್ಲರೂ ಬೆಳಸಿಕೊಳ್ಳಬೇಕು’ ಎಂದರು.

ಮನರಂಜನಾ ಕಾರ್ಯಕ್ರಮ: ಬೆಳಿಗ್ಗೆ ಶ್ರೀಸತ್ಯನಾರಾಯಣ ಪೂಜೆ ಜರುಗಿತು. ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯ ಬಳಿಕ ಸ್ಥಳೀಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಗಂಗಾಧರ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಮದಳ್ಳಿ ವಲಯ ಮೇಲ್ವಿಚಾರಕ ಸಂದೀಪ ನಾಯ್ಕ ಉಪಸ್ಥಿತರಿದ್ದರು.

***

'ಸಂಘಟಿತ ಹೋರಾಟ ಮುಂದುವರಿಯಲಿ'

‘ಕೊಂಕಣ ರೈಲು, ಸೀಬರ್ಡ್‌ ಯೋಜನೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯಿಂದಾಗಿ ಇಲ್ಲಿನ ಅನೇಕ ಜನರು ನಿರಾಶ್ರಿತರಾದರು. ಒಂದೆಡೆ ಸಮುದ್ರ, ಇನ್ನೊಂದೆಡೆ ಗುಡ್ಡಗಾಡು ಪ್ರದೇಶವಿದ್ದು, ಇರುವ ಅಲ್ಪಸ್ವಲ್ಪ ಭೂಪ್ರದೇಶದಲ್ಲಿಯೇ ಜನರು ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿಯೂ ಈ ಯೋಜನೆಗಳು ಬಂದು ಎಲ್ಲರೂ ಕಷ್ಟಪಡುವಂತಾಗಿದೆ. ನ್ಯಾಯಯುತ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಮುಂದುವರಿಯಲಿ’ ಎಂದು ಹೇಳಿದರು.

***

ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಧಾರ್ಮಿಕ ಭಾವನೆಗಳ ಮೂಲಕ ಸಂಘಟನೆ ಮಾಡಿದೆ.
– ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.