ADVERTISEMENT

ಪಿವಿಎಸ್‌ನಿಂದ ಸ್ಟೇಟ್‌ ಬ್ಯಾಂಕ್‌ವರೆಗೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 7:45 IST
Last Updated 26 ಜುಲೈ 2017, 7:45 IST
ಮಂಗಳೂರಿನ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌, ಸಾರ್ವಜನಿಕರ ದೂರು ಆಲಿಸಿದರು. 						ಪ್ರಜಾವಾಣಿ ಚಿತ್ರ
ಮಂಗಳೂರಿನ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌, ಸಾರ್ವಜನಿಕರ ದೂರು ಆಲಿಸಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಮಹಾ ನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾ ಖೆಗಳು ಜಂಟಿ ಸಮೀಕ್ಷೆ ನಡೆಸಲಿದ್ದು, ಮೊದಲ ಹಂತದಲ್ಲಿ ಪಿವಿಎಸ್‌ ವೃತ್ತದಿಂದ ಸ್ಟೇಟ್‌ ಬ್ಯಾಂಕ್‌ವರೆಗಿನ ರಸ್ತೆಗಳಲ್ಲಿ ಬುಧವಾರ (ಇದೇ 25) ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದರು.

ನಗರದ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮಂಗಳವಾರ ನೇರ ಫೋನ್‌–ಇನ್‌ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ರಸ್ತೆಗಳಲ್ಲಿ ವಾಹನದ ನಿಲುಗಡೆ, ಫುಟ್‌ಪಾತ್‌ಗಳ ಅತಿಕ್ರಮಣಗಳ ಬಗ್ಗೆ ಪರಿಶೀಲಿಸಿ, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಹಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆ, ಮೊಬೈಲ್‌ ಕ್ಯಾಂಟೀನ್‌, ಫುಟ್‌ಪಾತ್‌ಗಳಲ್ಲಿ ಗೂಡಂಗಡಿ ಇಟ್ಟಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ಇದನ್ನು ನಿವಾರಿಸುವ ದೃಷ್ಟಿಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಹಲವು ದೂರು: ಫೋನ್‌–ಇನ್‌ ಕಾರ್ಯಕ್ರಮದಲ್ಲಿ ನಗರದ ಸಂಚಾರ ದಟ್ಟಣೆ, ಮೂಲಸೌಕರ್ಯ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ದೂರುಗಳು ಕೇಳಿ ಬಂದವು.
ಕದ್ರಿ ಕಂಬಳ ಬಳಿ ಒಳಚರಂಡಿ ನೀರು ಮುಖ್ಯ ರಸ್ತೆಯಲ್ಲಿಯೇ ಹರಿಯು ತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರಶಾಂತ್‌ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಕವಿತಾ ಸನಿಲ್‌, ದ್ವಿತೀಯ ಹಂತದ ಎಡಿಬಿ ಯೋಜನೆಯಡಿ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಗಣಪತಿ ಹೈಸ್ಕೂಲ್‌ ಎದುರು ವಾಹನಗಳ ಸಂಚಾರ ಹೆಚ್ಚಾಗಿದ್ದು, ರಸ್ತೆ ದಾಟಲು ವಿದ್ಯಾರ್ಥಿಗಳು ಪರದಾಡು ವಂತಾಗಿದೆ. ಎರಡೂ ಬದಿಯಲ್ಲಿ ಹಂಪ್ಸ್‌ ಅಳವಡಿಸುವಂತೆ ಮಹೇಶ್‌ ಮನವಿ ಮಾಡಿದರು.

ಡಾ. ಅರುಣ್‌ಕುಮಾರ್ ಅವರು, ಲೈಟ್‌ ಹೌಸ್‌ ಹಿಲ್‌ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಯುವಕರು ಫುಟ್‌ಪಾತ್‌ಗಳ ಮೇಲೆಯೇ ವಾಹನ ಓಡಿಸುತ್ತಾರೆ. ಫುಟ್‌ಪಾತ್‌ ಕೂಡ ಸಂಪೂರ್ಣ ಹಾಳಾಗಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಮೇಯರ್‌, ಫುಟ್‌ಪಾತ್‌ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರ ಕಾಮ ಗಾರಿ ಆರಂಭಿಸಲಾಗುವುದು ಎಂದರು.

ಖಾಲಿ ನಿವೇಶನದಿಂದ ಸಮಸ್ಯೆ: ನಗರದ ಬಹುತೇಕ ಕಡೆಗಳಲ್ಲಿ ಖಾಲಿ ನಿವೇಶನಗಳಿದ್ದು, ಅವುಗಳಲ್ಲಿ ಹುಲ್ಲು, ಕಸ ಬೆಳೆದು ನಿಂತಿದೆ. ಇದರಿಂದ ಸೊಳ್ಳೆ ಗಳ ಹಾವಳಿ ವಿಪರೀತವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ನಾಗರಿಕರು ತಿಳಿಸಿದರು.

ಪಂಪ್‌ವೆಲ್‌ನ ಬಿಎಸ್‌ಎನ್‌ಎಲ್‌ ಟವರ್‌ ಬಳಿ ನೀರು ನಿಲ್ಲುತ್ತಿದೆ. ಹಿಂಬ ದಿಯ ಖಾಲಿ ನಿವೇಶನದಲ್ಲಿ ಕಸ ಬೆಳೆದಿದೆ ಎಂದು ಅಲ್ಲಿನ ನಿವಾಸಿಯೊ ಬ್ಬರು ಹೇಳಿದರು. ಜಪ್ಪಿನಮೊಗರುವಿನ ಬಸವರಾಜ್‌ ಎಂಬುವವರೂ ಇದೇ ರೀತಿಯ ಸಮಸ್ಯೆ ತಿಳಿಸಿದ್ದು, ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಹುಲ್ಲು ಬೆಳೆದಿದ್ದು, ಇದನ್ನು ತೆಗೆಸುವಂತೆ ಮನವಿ ಮಾಡಿದರು.

ಖಾಸಗಿ ಜಾಗಗಳಿದ್ದರೆ, ಅವುಗಳ ಮಾಲೀಕರಿಗೆ ನೋಟಿಸ್‌ ನೀಡಿ, ಸ್ವಚ್ಛಗೊಳಿಸಲಾಗುವುದು. ಪಾಲಿಕೆಯ ಜಾಗಗಳಲ್ಲಿ ಸಿಬ್ಬಂದಿಯನ್ನು ಕಳುಹಿಸಿ, ಸ್ವಚ್ಛ ಮಾಡಲಾಗುವುದು ಎಂದು ಮೇಯರ್‌ ತಿಳಿಸಿದರು. ಉಪಮೇಯರ್‌ ರಜನೀಶ್‌ ಕಾಪಿಕಾಡ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್‌, ಸಚೇತಕ ಎಂ. ಶಶಿಧರ್‌ ಹೆಗ್ಡೆ ಇದ್ದರು.

ಅತಿಕ್ರಮಣಕ್ಕೆ  ನಾಗರಿಕರ ಆಕ್ರೋಶ
ನಗರದ ಕೆಲ ಪ್ರದೇಶಗಳಲ್ಲಿ ರಸ್ತೆಗಳನ್ನು ಅತಿಕ್ರಮಿಸಲಾಗುತ್ತಿದೆ. ಅಲ್ಲದೇ ಪಾಲಿಕೆಯ ಅನುಮತಿ ಇಲ್ಲದೇ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಾಗರಿಕರು ತಿಳಿಸಿದರು.

ಲೋವರ್‌ ಬೆಂದೂರ್‌ವೆಲ್‌ನಲ್ಲಿ ಸಾರ್ವಜನಿಕರೊಬ್ಬರು ರಸ್ತೆ ಅತಿಕ್ರಮಿಸಿ, ಕಾಂಪೌಂಡ್‌ ನಿರ್ಮಿಸಿದ್ದಾರೆ. ಅಲ್ಲದೇ ಇದೇ ಪ್ರದೇಶದಲ್ಲಿ ಪಾಲಿಕೆಯ ಅನುಮತಿ ಇಲ್ಲದೇ ಮೂರು ಮಹಡಿಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ದೂರಿದರು.

ಇದಕ್ಕೆ ಉತ್ತರಿಸಿದ ಮೇಯರ್‌ ಕವಿತಾ ಸನಿಲ್‌, ‘ನಾಳೆ ನಾನೇ ಖುದ್ದಾಗಿ ಬಂದು ಸ್ಥಳ ವೀಕ್ಷಣೆ ಮಾಡುತ್ತೇನೆ. ಒಂದು ವೇಳೆ ಅತಿಕ್ರಮಣ ಆಗಿದ್ದಲ್ಲಿ, ಕೂಡಲೇ ತೆರವು ಮಾಡುವುದಾಗಿ’ ಭರವಸೆ ನೀಡಿದರು.

* * 

ಹಿಂದಿನ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೇಳಿ ಬಂದಿದ್ದ ದೂರುಗಳನ್ನು ಅಧಿಕಾರಿಗಳು ಪರಿಹರಿಸಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಕವಿತಾ ಸನಿಲ್‌ , ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.